ಕೋಟ ಚಾರಿತ್ರಿಕ ಗೆಲುವಿಗೆ ಜಿಲ್ಲಾ ಬಿಜೆಪಿ ಅಭಿನಂದನೆ

ಉಡುಪಿ: ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆ ಇದೀಗ ಕುಬೇರರ ಮನೆಯಾಗಿದೆ ಎಂಬ ಅಪವಾದದ ನಡುವೆ ಮತದಾರರಿಗೆ ಯಾವುದೇ ಆಮಿಷಗಳನ್ನು ಒಡ್ಡದೇ ನಯಾ ಪೈಸೆ ಖರ್ಚು ಇಲ್ಲದೇ ಬಿಜೆಪಿ ಬೆಂಬಲಿತ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಎಲ್ಲಾ ಮತಗಳ ಸಹಿತ ಹೆಚ್ಚುವರಿ ಮತವನ್ನು ಪಡೆದು ಸತತ ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಚಾರಿತ್ರಿಕ ಗೆಲುವಿಗೆ ಜಿಲ್ಲಾ ಬಿಜೆಪಿ ಹಾರ್ದಿಕ ಅಭಿನಂದನೆ ಸಲ್ಲಿಸಿದೆ.

ರಾಜ್ಯ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರು, ಸಭಾಪತಿಗಳು ಹಾಗೂ ಮೇಲ್ಮನೆ ಸದಸ್ಯರು ಕೋಟ ಶ್ರೀನಿವಾಸ ಪೂಜಾರಿಯವರ ಪ್ರಾಮಾಣಿಕ ಗೆಲುವು ಅನುಕರಣೀಯ ಹಾಗೂ ರಾಜ್ಯಕ್ಕೇ ಮಾದರಿ ಎಂದು ಬಣ್ಣಿಸಿ ಅಭಿನಂದನೆ ಸಲ್ಲಿಸಿರುವುದು ಪ್ರಶಂಸನೀಯ. ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯ ಪ್ರತೀಕದಂತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಈ ಐತಿಹಾಸಿಕ ಗೆಲುವು ಉಡುಪಿ ಜಿಲ್ಲೆಗೆ ಹಿರಿಮೆ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಜನತೆಯ ಆಶೋತ್ತರಗಳನ್ನು ಈಡೇರಿಸುವ ಜೊತೆಗೆ ಮೇಲ್ಮನೆಯ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕೆಲಸ ಕಾರ್ಯಗಳನ್ನು ಕೋಟರವರು ಮುಂದುವರಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ರಾಜ್ಯ ವಿಧಾನ ಪರಿಷತ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಬಹುಮತದತ್ತ ಸಾಗಿರುವ ಬೆಳವಣಿಗೆಯು ಕೆಳಮನೆಯಲ್ಲಿ ಮಂಜೂರಾಗಿ ಬರುವ ಎಲ್ಲಾ ಕಾಯ್ದೆಗಳನ್ನು ಮೇಲ್ಮನೆಯಲ್ಲಿ ಸಮರ್ಪಕವಾಗಿ ಅಂಗೀಕರಿಸಲು ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ವಿಧಾನ ಪರಿಷತ್ ಚುನಾವಣೆಯನ್ನು ಸಂಘಟಿತ ಪ್ರಯತ್ನದ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಎದುರಿಸಲು ಕೈ ಜೋಡಿಸಿರುವ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಹಾಗೂ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು ಮತ್ತು ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started