

ಉಡುಪಿಯಲ್ಲಿ ನಡೆದ ಯಶಸ್ವೀ ಜನ ಸ್ವರಾಜ್ ಸಮಾವೇಶ
ಡಿ.10ರ ವಿಧಾನ ಪರಿಷತ್ ಚುನಾವಣೆ ರಾಜ್ಯದ ಮಿನಿ ಸಮರ. ಇದರಲ್ಲಿ ವಿಧಾನ ಪರಿಷತ್ತಿನ ಸಭಾ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಉಡುಪಿಯ ಪುರಭವನದಲ್ಲಿ ನ.19 ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಸರಕಾರದ ಯಾವುದೇ ಮಸೂದೆ ಮಂಜೂರಾಗಲು ವಿಧಾನ ಪರಿಷತ್‍ನಲ್ಲೂ ಬಹುಮತ ಬೇಕು. ವಿಧಾನ ಸಭೆಯಲ್ಲಿ ಮಂಜೂರಾದ ಗೋಹತ್ಯಾ ಬಿಲ್ ವಿಧಾನ ಪರಿಷತ್‍ನಲ್ಲಿ ಮಂಜೂರಾಗಲು ಕಷ್ಟವಾಯಿತು. ಆದ್ದರಿಂದ ನಾವು ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂದರು. ನರೇಂದ್ರ ಮೋದಿಯವರಿಗೆ ದಕ್ಷಿಣ ಭಾರತದಲ್ಲಿ ಇರುವ ಬೆಂಬಲಕ್ಕೆ ಈ ಚುನಾವಣೆ ಒರೆಗಲ್ಲು ಇದ್ದಂತೆ ಎಂದು ತಿಳಿಸಿದರು. ಉಡುಪಿಯಲ್ಲಿ ಪಕ್ಷ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ಉತ್ತರ ಪ್ರದೇಶದ ಚುನಾವಣೆ ಎಂದರೆ ರಾಮ ಮಂದಿರದ ಚುನಾವಣೆ. ಉತ್ತರ ಪ್ರದೇಶದಲ್ಲಿ ಯೋಗಿಯವರ ನೇತೃತ್ವದಲ್ಲಿ ಮತ್ತೆ ನಮ್ಮ ಸರಕಾರ ಬರಬೇಕಿದೆ. ಅದೇ ರೀತಿ ರಾಜ್ಯದಲ್ಲೂ ಪಕ್ಷವು ಅತಿ ಹೆಚ್ಚು ವಿಧಾನ ಪರಿಷತ್ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕಿದೆ ಎಂದು ತಿಳಿಸಿದರು. ನರೇಂದ್ರ ಮೋದಿಯವರು ಈಗ ಪ್ರಪಂಚದ ನಾಯಕರಾಗಿದ್ದಾರೆ. ನುಡಿದಂತೆ ನಡೆದ ನಾಯಕ ಅವರು ಎಂದು ವಿವರಿಸಿದರು.
ಕೋವಿಡ್ ನಿಭಾಯಿಸುವಲ್ಲಿ ನಮ್ಮ ದೇಶ ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ. ಸಮರ್ಥ ನೇತೃತ್ವ ನೀಡುವ ಕಾರ್ಯವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಆದರೆ, ಕಾಂಗ್ರೆಸ್‍ನವರು ಕೋವಿಡ್ ಲಸಿಕೆಯನ್ನು ವಿರೋಧಿಸಿದರು ಎಂದು ತಿಳಿಸಿದರು. 100 ಕೋಟಿಗೂ ಹೆಚ್ಚು ಜನರಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. 2023ರಲ್ಲಿ ಮತ್ತೆ ರಾಜ್ಯದಲ್ಲಿ ನಮ್ಮ ಸರಕಾರ ಮತ್ತು 2024ರಲ್ಲಿ ಮತ್ತೆ ಮೋದಿಯವರು ಪ್ರಧಾನಿಯಾಗುವಂತೆ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ಕೇಂದ್ರ-ರಾಜ್ಯ ಸರಕಾರಗಳ ಸಾಧನೆ ಮತ್ತು ಜನಪರ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳಿಗೆ ತಿಳಿಸಿ ಹೇಳಬೇಕು. ಕಾಂಗ್ರೆಸ್‍ನ ಬುರುಡೆ ಬಿಡುವವರಿಗೆ ಈ ಸಮಾವೇಶ ಸ್ಪಷ್ಟ ಉತ್ತರ ನೀಡುವಂತಿದೆ ಎಂದರು.
ಗ್ರಾಮಗಳಿಗೆ ಉದ್ಯೋಗ ಸಂಬಂಧ ಅನುದಾನವನ್ನು 150 ಮಾನವ ದಿನಕ್ಕೆ ಕೇಂದ್ರ ಸರಕಾರ ಹೆಚ್ಚಿಸಿದೆ. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿತ್ತು. ಈಗ ಭ್ರಷ್ಟಾಚಾರರಹಿತವಾಗಿ ಕೆಲಸಗಳು ನಡೆಯುತ್ತಿವೆ ಎಂದು ವಿವರಿಸಿದರು. ಮನೆ ಮನೆಗೆ ಶುದ್ಧ ನೀರು ಸರಬರಾಜಿಗೆ ರಾಜ್ಯಕ್ಕೆ 1,008 ಕೋಟಿ ರೂಪಾಯಿ ನೀಡಲಾಗಿದೆ. ಸೌರ ವಿದ್ಯುತ್‍ಗೆ ಹಣ ಕೊಡಲಾಗಿದೆ. ಇಂಟರ್‍ನೆಟ್ ಕನೆಕ್ಟಿವಿಟಿ ಪ್ರತಿ ಗ್ರಾಮ ಪಂಚಾಯಿತಿಗೆ 20203ರ ವೇಳೆಗೆ ಲಭಿಸಲಿದೆ. 2025ಕ್ಕೆ ದೇಶದ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಸರಕಾರ ಮುಂದಾಗಿದೆ ಎಂದು ತಿಳಿಸಿದರು. ಸ್ವಾಭಿಮಾನಿ ಭಾರತದ ನಿರ್ಮಾಣದ ಕನಸನ್ನು ನನಸಾಗಿಸಲು ಪ್ರಧಾನಿಯವರು ಮುಂದಾಗಿದ್ದಾರೆ ಎಂದು ತಿಳಿಸಿದರು. ಹೊಸ ಶಿಕ್ಷಣ ನೀತಿ ಉದ್ಯೋಗ ಸೃಷ್ಟಿಗೆ ಪೂರಕ ಪಠ್ಯಕ್ರಮವನ್ನು ಹೊಂದಿದೆ ಎಂದರು.
ವಿಧಾನಪರಿಷತ್‍ನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿಯ ಫೈರ್ ಬ್ರಾಂಡ್ ತಂಡ ಇಲ್ಲಿನದು. ಈ ಬಾರಿಯ ಚುನಾವಣೆ ಎ+++ ಫಲಿತಾಂಶ ನೀಡಲಿದೆ ಎಂದು ವಿಶ್ವಾಸದಿಂದ ನುಡಿದರು. ರೈತರ ಆದಾಯ ದ್ವಿಗುಣಗೊಳಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು. ರೈತರು, ಬೆಳೆಗಾರರನ್ನು ನಾವು ಬಿಟ್ಟು ಹಾಕುವುದಿಲ್ಲ. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಸುಪ್ರೀಂ ಕೋರ್ಟ್‍ಗೂ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ಉಡುಪಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬಗ್ಗೆ ಪರಿಶೀಲನೆ ನಡೆದಿದೆ. ನವೋದಯ ಚಾರಿಟೇಬಲ್ ಟ್ರಸ್ಟ್ ಗೆ ಡಿಸಿಸಿ ಬ್ಯಾಂಕಿನಿಂದ 19 ಲಕ್ಷ ಹಣ ವರ್ಗಾವಣೆ, ಬ್ಯಾಂಕಿನ ಶಾಖೆಯನ್ನು ಇದೇ ಟ್ರಸ್ಟಿನ ಕಟ್ಟಡದಲ್ಲಿ ನಡೆಸುವುದು ಕಾನೂನುಬಾಹಿರ. ಮಂಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾಕ್ಕೆ ನೋಟಿಸ್ ಕೊಟ್ಟಿದ್ದೇವೆ ಎಂದು ತಿಳಿಸಿದರು. ಈ ವರ್ಷ 20,810 ಕೋಟಿ ಸಾಲವನ್ನು ನೀಡುವ ಗುರಿ ಇದ್ದು 10,591 ಕೋಟಿ ಹಣವನ್ನು ಸಾಲವಾಗಿ ರೈತರಿಗೆ ಈಗಾಗಲೇ ನೀಡಲು ಚಾಲನೆ ಕೊಟ್ಟಿದ್ದೇವೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನ ಪರಿಷತ್‍ನಲ್ಲಿ ಪಕ್ಷ ಮತ್ತು ಸರಕಾರವನ್ನು ಸಮರ್ಥವಾಗಿ ಪ್ರತಿನಿಧಿಸಿ ಉತ್ತರ ನೀಡುತ್ತಾರೆ. ಅವರನ್ನು ಗರಿಷ್ಠ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಸಹಕಾರ ಇಲಾಖೆ ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸದೆ ಇದ್ದರೆ ಅದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲ್ ಕುಮಾರ್ ಸಮಯೋಚಿತವಾಗಿ ಮಾತನಾಡಿ ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತವನ್ನು ನೀಡಿ ದೊಡ್ಡ ಅಂತರದ ಗೆಲುವಿಗೆ ಕೈಜೋಡಿಸಬೇಕು ಎಂದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥ್ ನಾರಾಯಣ, ರಾಜ್ಯ ಉಪಾಧ್ಯಕ್ಷರಾದ ಎಮ್. ಶಂಕರಪ್ಪ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ಶಾಸಕರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಕೆ.ಉದಯ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್‍ಪಾಲ್ ಸುವರ್ಣ, ಉಡುಪಿ ನಗರಸಭಾ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನ ಬಿಜೆಪಿ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಭಾಗವಹಿಸಿದ್ದರು.