ಅಪಪ್ರಚಾರವೇ ಕಾಂಗ್ರೆಸಿಗರ ಮೂಲ ಉದ್ದೇಶ: ಗುರುಪ್ರಸಾದ್ ಶೆಟ್ಟಿ ಕಟಪಾಡಿ

ಪ್ರಾರಂಭದ ದಿನಗಳಿಂದಲೂ ಕೋವಿಡ್ ಲಸಿಕೆಯ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸಿಗರು ತಾವು ಮಾತ್ರ ಗುಟ್ಟಾಗಿ ಲಸಿಕೆ ಪಡೆದುಕೊಂಡು ಜನಸಾಮಾನ್ಯರ ದಾರಿತಪ್ಪಿಸಿ ವಂಚಿಸುವ ಕಾಯಕದಲ್ಲಿ ನಿರತರಾಗಿರುವ ಜೊತೆಗೆ ಇದೀಗ ಲಸಿಕೆ ಕೊಡಿಸಲು ಒತ್ತಾಯಿಸುವ ನಾಟಕವಾಡುತ್ತಿರುವುದು ಹಾಸ್ಯಾಸ್ಪದ. ಕೇವಲ ಅಪಪ್ರಚಾರವೇ ಕಾಂಗ್ರೆಸಿಗರ ಮೂಲ ಉದ್ದೇಶ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹೇಳಿದ್ದಾರೆ.

ಅವರು ಲಸಿಕೆ ಹೆಸರಲ್ಲಿ ಬಿಜೆಪಿ ಸ್ವಜನ ಹಿತಾಸಕ್ತಿ ಎಂಬ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆಯವರ ಆರೋಪವನ್ನು ಖಂಡಿಸಿ, ಕಾಂಗ್ರೆಸಿಗರಿಗೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಕೇವಲ ಕೀಳು ರಾಜಕೀಯದ ಗೀಳು ಮಾತ್ರ ಮುಖ್ಯವೆನಿಸಿದೆ ಎಂದಿದ್ದಾರೆ.

ಸ್ವಾತಂತ್ರ್ಯಾ ನಂತರದ ದಶಕಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಕೇವಲ ಒಂದು ಕುಟುಂಬದ ಕಲ್ಯಾಣಕ್ಕಾಗಿ ಹೋರಾಟ ನಡೆಸಿರುವುದು ಕಾಂಗ್ರೆಸ್ ಇತಿಹಾಸ. ಹಗರಣಗಳ ಸರಮಾಲೆ, ಕಾಳಸಂತೆ ದಂಧೆ, ಸ್ವಜನ ಪಕ್ಷಪಾತ, ಒಂದೇ ವರ್ಗದ ತುಷ್ಟೀಕರಣ, ಬ್ಲಾಕ್ ಮೇಲ್ ರಾಜಕಾರಣ, ಅಪಪ್ರಚಾರದ ಜೊತೆಗೆ ದೇಶ ವಿರೋಧಿ ಚಟುವಟಿಕೆಗಳು ಕಾಂಗ್ರೆಸ್ ನ ನೈಜ ಮುಖವಾಗಿದೆ.

ಕೊರೋನಾ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಬಿಜೆಪಿ ಕಾರ್ಯಕರ್ತರು ಅವಿರತವಾಗಿ ಕೊರೋನಾ ಪೀಡಿತರ ಸಂಕಷ್ಟಕ್ಕೆ ರಾಜಕೀಯ ರಹಿತವಾಗಿ ಸ್ಪಂದಿಸಿರುವುದು ಲೋಕಕ್ಕೇ ತಿಳಿದ ವಿಚಾರ.

ಈ ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲೂ ಜನಸೇವೆಗೈಯದೇ ಕೇವಲ ತಪ್ಪುಗಳನ್ನು ಹುಡುಕುವ ವಿಫಲ ಯತ್ನವನ್ನು ಮಾಡುವುದು, ನಿರಂತರ ಅಪಪ್ರಚಾರದಲ್ಲಿ ತೊಡಗುವುದು, ಟೂಲ್ ಕಿಟ್ ನಂತಹ ಕೀಳು ಮಟ್ಟದ ದೇಶ ವಿರೋಧಿ ವಿಚಾರಗಳನ್ನು ಸೃಷ್ಠಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದು ಕಾಂಗ್ರೆಸ್ ಕಾಯಕವಾಗಿದೆ. ಕಮಲ್ ನಾಥ್ ರಂತಹ ಹಿರಿಯ ಕಾಂಗ್ರೆಸ್ ನಾಯಕರು ಕೂಡಾ ಪರಿಸ್ಥಿತಿಯ ಲಾಭ ಪಡೆದು ಹೆಣಗಳ ಮೇಲೆ ರಾಜಕೀಯ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿರುವ ವಿಕೃತ ಸನ್ನಿವೇಶದಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಯವರಂತವರಿಂದ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಸಹಜವೆನಿಸುತ್ತದೆ ಎಂದು ಗುರುಪ್ರಸಾದ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Design a site like this with WordPress.com
Get started