ಮಂಗಳೂರು: ಹಲವು ಪ್ರತಿಭಟನೆಗಳ ನಂತರ ಸುರತ್ಕಲ್ ಟೋಲ್‌ಗೇಟ್ ತೆರವು ಘೋಷಣೆಯಾಗಿದ್ದು ಇದರ ಬೆನ್ನಲ್ಲೇ ಇದೀಗ ಹೆಜಮಾಡಿಯಲ್ಲಿ ಟೋಲ್ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.
ಭಾರಿ ಪ್ರತಿಭಟನೆಯ, ಹೋರಾಟದ ನಂತರ ಸುರತ್ಕಲ್ ಟೋಲ್ ರದ್ದಾಗಿದ್ದು ಹೇಜಮಾಡಿ ಟೋಲ್ ದರ ಡಬಲ್ ಆಗಿದೆ. ಇದರಿಂದ ನವಯುಗ ಕಂಪೆನಿಗೆ ಪರೋಕ್ಷವಾಗಿ ಪ್ರತಿಭಟನೆ ಸಹಕಾರಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಪಿಸುಮಾತು ಕೇಳಿ ಬರುತ್ತಿದೆ. ಈ ಹಿಂದೆ ಸುರತ್ಕಲ್ ಟೋಲ್ ನಲ್ಲಿ ನಡೆಸಬೇಕಾಗಿದ್ದ ಮೈಂಟೆನೆನ್ಸ್ ಚಾರ್ಚ್ ನವಯುಗ ಕಂಪೆನಿಗೆ ಸಂಪೂರ್ಣ ಉಳಿತಾಯವಾಗಿದೆ. ಸುರತ್ಕಲ್‌ನಲ್ಲಿ ಈ ಹಿಂದೆ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್‌ನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶ ಮಾಡಲಾಗಿದೆ. ಹೀಗಾಗಿ ಸುರತ್ಕಲ್ ಟೋಲ್ ಗೇಟ್ ರದ್ದಾದರೂ ಪ್ರಯಾಣಿಕರು ಹೆಜಮಾಡಿಯಲ್ಲಿ ಇನ್ನು ಮುಂದೆ ಹೆಚ್ಚುವರಿ ಟೋಲ್ ಪಾವತಿಸಬೇಕಿದೆ.
ಈ ಹಿಂದೆ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಕೆಎ-19 ಖಾಸಗಿ ವಾಹನಗಳಿಗೆ ಟೋಲ್ ರಿಯಾಯಿತಿ ಇತ್ತು. ಇನ್ನು ಮುಂದೆ ಈ ರಿಯಾಯಿತಿ ಇರುವುದಿಲ್ಲ. ಸುರತ್ಕಲ್ ಟೋಲ್‌ನಲ್ಲಿ ಹಿಂದೆ ಬೇರೆ ವಾಹನಗಳು ಎಷ್ಟು ಟೋಲ್ ಕಟ್ಟುತ್ತಿದ್ದವೋ ಅದನ್ನು ಸೇರಿಸಿ ಹೆಜಮಾಡಿಯಲ್ಲಿ ಕಟ್ಟಬೇಕಿದೆ.
ಪರಿಷ್ಕೃತ ದರ
ಕಾರು ಜೀಪು ವ್ಯಾನ್ ಸೇರಿ ಲಘು ವಾಹನಗಳಿಗೆ ಸಿಂಗಲ್ ಟ್ರಿಪ್ 100 ರು., ರಿಟರ್ನ್ ಟ್ರಿಪ್ 155 ರು, ತಿಂಗಳ ಪಾಸ್ (50 ಸಿಂಗಲ್ ಟ್ರಿಪ್‌ಗಳಿಗೆ) 3460 ರು., ಲಘು ವಾಣಿಜ್ಯ ವಾಹನಗಳು, ಲಘು ಗೂಡ್ಸ್, ಮಿನ್ ಬಸ್‌ಗಳಿಗೆ ಸಿಂಗಲ್ ಟ್ರಿಪ್ 170 ರು., ರಿಟರ್ನ್ ಟ್ರಿಪ್ 250 ರು. ತಿಂಗಳ ಪಾಸ್ 5590 ರು., ಬಸ್, ಟ್ರಕ್ (6 ಆಕ್ಸೆಲ್)ಗಳಿಗೆ ಸಿಂಗಲ್ ಟ್ರಿಪ್‌ಗೆ 355 ರು., ರಿಟರ್ನ್ ಟ್ರಿಪ್‌ಗೆ 565 ರು., ತಿಂಗಳ ಪಾಸ್‌ಗೆ 11,705 ರು., ಭಾರಿ ನಿರ್ಮಾಣ ಯಂತ್ರಗಳು, ಜೆಸಿಬಿಗಳು, ಮಲ್ಟಿ ಆಕ್ಸೆಲ್ ವಾಹನಗಳಿಗೆ ಸಿಂಗಲ್ ಟ್ರಿಪ್‌ಗೆ 550 ರು., ರಿಟರ್ನ್ ಟ್ರಿಪ್‌ಗೆ 865 ರು., ತಿಂಗಳ ಪಾಸ್‌ಗೆ 18,360 ರು., ಏಳಕ್ಕಿಂತ ಹೆಚ್ಚು ಆಕ್ಸೆಲ್ ವಾಹನಗಳಿಗೆ ಸಿಂಗಲ್ ಟ್ರಿಪ್‌ಗೆ 675 ರು., ರಿಟರ್ನ್ ಟ್ರಿಪ್‌ಗೆ 1005 ರು., ತಿಂಗಳ ಪಾಸ್‌ಗೆ 22,350 ರು. ಸುಂಕ ನಿಗದಿ ಮಾಡಲಾಗಿದೆ.
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನ. 25ರಂದು 75ನೇ ವಸಂತಕ್ಕೆ ಕಾಲಿಡಲಿದ್ದು, ತಮ್ಮ ನಿವಾಸದಲ್ಲಿ ಸರಳವಾಗಿ ಜನ್ಮದಿನಾಚರಣೆ ಆಚರಿಸಿಕೊಳ್ಳಲಿರುವರು.
ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಡಿ. ರತ್ಮವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಪುತ್ರನಾಗಿ 1948ರ ನ. 25ರಂದು ಜನಿಸಿದ ವೀರೇಂದ್ರ ಕುಮಾರ್ ಅವರು ಡಿ. ವೀರೇಂದ್ರ ಹೆಗ್ಗಡೆಯಾಗಿ 1964ರ ಅ. 24ರಂದು ಧರ್ಮಸ್ಥಳದ 21 ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾಗಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಉದ್ಯೋಗ ತರಬೇತಿ ಕೇಂದ್ರಗಳು, SDM ಶಿಕ್ಷಣ ಸಂಸ್ಥೆಗಳು, ವೃತ್ತಿಶಿಕ್ಷಣ ಸಂಸ್ಥೆಗಳು, ಉಜಿರೆ ಮಂಗಳೂರು, ಮೈಸೂರು, ಧಾರವಾಡ, ಬೆಂಗಳೂರು, ಹಾಸನ, ಉಡುಪಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಕ್ರೀಡೆ, ಸಾಂಸ್ಕೃತಿಕ ರಂಗ, ಪರೀಕ್ಷಾ ಫಲಿತಾಂಶದಲ್ಲಿ ರಾಷ್ಟ್ರಮಟ್ಟದಲ್ಲೇ ವಿಶೇಷ ಮನ್ನಣೆ ಮತ್ತು ಗೌರವಕ್ಕೆ ಪಾತ್ರವಾಗುವಂತೆ ಶೈಕ್ಷಣಿಕ ಕ್ಷೇತ್ರವನ್ನು ಬೆಳೆಸಿದ ಹೆಗ್ಗಳಿಕೆ ಅವರದು. ಪ್ರಸ್ತುತ ವರ್ಷದಲ್ಲಿ ಹೆಗ್ಗಡೆಯವರ ಕಾರ್ಯಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರವು ರಾಜ್ಯ ಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಎಲ್ಲರಲ್ಲೂ ಸಂತಸ ತಂದಿದೆ. ದೇವಸ್ಥಾನದ ನೌಕರರು, ಊರಿನ ನಾಗರಿಕರು, ಶಿಕ್ಷಣ ಸೇರಿದಂತೆ ವಿವಿಧ ಸಂಸ್ಥೆಗಳ ಸಿಬಂದಿ, ಶ್ರದ್ಧಾ ಭಕ್ತಿಯಿಂದ ಡಾ| ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಸಲ್ಲಿಸಲಿದ್ದಾರೆ.
ಉಡುಪಿ: ಪಿ.ಎಫ್.ಐ ಸಂಘಟನೆಯನ್ನು ದೇಶದಾದ್ಯಂತ ನಿಷೇಧಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ನಡೆದಿದೆ. ಆರ್ಟಿಕಲ್ 370 ರದ್ದು ಹಾಗು ರಾಮ ಮಂದಿರವನ್ನು ಕಟ್ಟುತ್ತಿರುವುದನ್ನು ಸಹಿಸಿಕೊಳ್ಳಲಾಗದ ಉಗ್ರರು ಈ ರೀತಿ ಭಯೋತ್ಪಾದಕ ಚಟುವಟಿಕೆಯ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ಹೇಳಿದರು.
ಅವರು ಮಂಗಳವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲಿನಲ್ಲಿ ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಪಿ.ಎಫ್.ಐ ಬ್ಯಾನ್ ವಿಚಾರ:
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಿ.ಎಫ್.ಐ ಸಂಘಟನೆಯವರ ಕೇಸನ್ನು ವಾಪಾಸು ಪಡೆದು, ಅವರನ್ನು ಪೋಷಿಸಿದರು. ಆದರೆ ಬಿಜೆಪಿ ಸರಕಾರ ಎರಡೇ ಗಂಟೆಯಲ್ಲಿ ದೇಶದ ವಿವಿಧ ರಾಜ್ಯದ 200 ಕಡೆಗಳಲ್ಲಿ ಪಿ.ಎಫ್.ಐ ಮುಖಂಡರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿ, ಮಹತ್ವದ ದಾಖಲೆ ಸಂಗ್ರಹಿಸಿ ಅಂದೇ ಸಂಘಟನೆಯನ್ನು ನಿಷೇಧಿಸಿತು ಎಂದರು.
ಒಂದೇ ಒಂದು ಬುಲೆಟ್ ಪ್ರಯೋಗಿಸದೇ, ರಕ್ತದೋಕುಳಿಯನ್ನು ಹರಿಸದೇ ಆರ್ಟಿಕಲ್ 370ನ್ನು ಹತ್ತೇ ನಿಮಿಷದಲ್ಲಿ ಕಿತ್ತು ಬಿಸಾಡಿದ್ದೇವೆ. ತ್ರಿವಳಿ ತಲಾಖ್ ನಿಷೇಧಿಸಿರುವುದು ಬಿಜೆಪಿ ಸರಕಾರವೇ ಎಂದವರು ಹೇಳಿದರು.
ಬಿಜೆಪಿ ಸರಕಾರದ ಸಾಧನೆಯನ್ನು ಜನತೆಗೆ ಮುಟ್ಟಿಸಿ:
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಬಿಜೆಪಿ ಸರಕಾರ ದೇಶಕ್ಕೆ ಮತ್ತು ಜನಸಾಮಾನ್ಯರಿಗೆ ನೀಡಿರುವ ಅದ್ಬುತ ಯೋಜನೆಗಳನ್ನು ಜನತೆಗೆ ತಿಳಿಸುವ ಜವಾಬ್ದಾರಿ ಯುವಮೋರ್ಚಾ ಕಾರ್ಯಕರ್ತರಿಗಿದೆ. ಬೂತ್ ಮಟ್ಟದಲ್ಲಿ ಜನತೆಗೆ ಬಿಜೆಪಿಯ ಸಾಧನೆಗಳನ್ನು ತಿಳಿಸಲು, ಕಾರ್ಯಕರ್ತರಿಗೆ ವಿಷಯವನ್ನು ನೀಡುವ ಒಂದು ದಿನದ ವರ್ಗವನ್ನು ಯುವಮೋರ್ಚಾ ಆಯೋಜನೆ ಮಾಡಿ ಎಂದು ಕರೆ ನೀಡಿದರು.
ಆತ್ಮನಿರ್ಭರ ಭಾರತ:
ರಕ್ಷಣಾತ್ಮಕವಾಗಿ ಭಾರತವನ್ನು ಗಟ್ಟಿಗೊಳಿಸಲು ಆತ್ಮನಿರ್ಭರ ಭಾರತ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯುದ್ದ ವಿಮಾನಕ್ಕೆ ಸಂಭಂದಿಸಿದ 70% ವಸ್ತುಗಳು ಕರ್ನಾಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿಯೇ ಅಭಿವೃದ್ಧಿ ಹೆಚ್ಚು:
500 ಮಲ್ಟಿ ನ್ಯಾಷನಲ್ ಕಂಪೆನಿಗಳಲ್ಲಿ 400 ಕಂಪೆನಿಗಳ ಮುಖ್ಯ ಕಚೇರಿ ಇರುವುದು ಬೆಂಗಳೂರಿನಲ್ಲಿ; ಜೊತೆಗೆ ಎಫ್.ಡಿ.ಐ ಹೂಡಿಕೆಯೂ ಬೆಂಗಳೂರಿನಲ್ಲಿಯೇ ಹೆಚ್ಚು ಆಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ -2 5,000 ಕೋಟಿ ರೂ. ವೆಚ್ಚದಲ್ಲಿ ವಿಶ್ವದಲ್ಲೇ ವಿಶಿಷ್ಟ ವಿಮಾನ ನಿಲ್ದಾಣವಾಗಲಿದೆ. ರಾಮಾಯಣ, ಮಹಾಭಾರತ ಗ್ರಂಥದಲ್ಲಿ ಉಲ್ಲೇಖವಾಗಿರುವ 2,000 ಗಿಡಮೂಲಿಕೆಗಳನ್ನು ವಿಮಾನ ನಿಲ್ದಾಣದಲ್ಲಿ ನೆಡಲಾಗಿದೆ.
ಅಹಮದಾಬಾದ್ ನಿಂದ ಮುಂಬೈಗೆ ಬುಲೆಟ್ ಟ್ರೈನ್:
ಗುಜರಾತ್ ನ ಅಹಮದಬಾದ್ ನಿಂದ ಮುಂಬೈಗೆ ಬುಲೆಟ್ ಟ್ರೈನ್ ಆರಂಭಿಸಬೇಕೆಂದು ಮೋದಿಯವರ ಕನಸಾಗಿತ್ತು. ಆದರೆ ಕಳೆದ ಎರಡೂವರೆ ವರ್ಷದಿಂದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇಲ್ಲದ ಕಾರಣ ವಿಳಂಬವಾಗಿತ್ತು. ಆದರೆ ಈಗ ಈ ಯೋಜನೆ ಪ್ರಗತಿಯನ್ನು ಸಾಧಿಸಿದೆ ಎಂದರು.
ರಾಮಮಂದಿರ ಯಾವಾಗ ಆಗುತ್ತದೆ ಎಂದು ವ್ಯಂಗ್ಯವಾಡುತ್ತಿದ್ದವರು 2024ರ ಜನವರಿಗೆ ಅಯೋಧ್ಯೆ ತೆರಳಲು ಟಿಕೇಟ್ ಕಾಯ್ದಿರಿಸಿ, ಪ್ರಭು ಶ್ರೀರಾಮಚಂದ್ರನ ದರ್ಶನ ಮಾಡಿ ಬನ್ನಿ ಎಂದರು.
ಚುನಾವಣೆ ವೇಳೆ ರಾಹುಲ್ ಗಾಂಧಿ ಶಸ್ತ್ರ ತ್ಯಾಗ..!:
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರಬೇಕಾದರೇ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ಒಂದು ಬಾರಿ ಗುಜರಾತಿನ ಯಾವುದೋ ಒಂದು ಜಾಗದಲ್ಲಿ 200 ಜನರ ಸಭೆ ನಡೆಸಿ, ಚುನಾವಣಾ ಪೂರ್ವದಲ್ಲಿಯೇ ಶಸ್ತ್ರ ತ್ಯಾಗ ಮಾಡಿದರು. ಕರ್ನಾಟಕದ ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ರಾಹುಲ್ ಗಾಂಧಿ ಶಸ್ತ್ರತ್ಯಾಗ ಮಾಡುವುದು ಖಂಡಿತಾ ಎಂದು ವ್ಯಂಗವಾಡಿದರು.
ಜಮಾನತ್ ಜಪ್ತ್ ಪಾರ್ಟಿ (ಜೆಜೆಪಿ/ಎಎಪಿ):
ಕೆಲವೇ ಕೆಲವು ಆಂಗ್ಲ ಪತ್ರಿಕೆಗಳ ಕೃಪಾಪೋಷಿತದಿಂದಾಗಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿರುವ ಆಪ್ ಪಕ್ಷಕ್ಕೆ ಯು.ಪಿಯಲ್ಲಿ ಆದಂತೆ ಮುಖಭಂಗ ಮತ್ತೊಮ್ಮೆ ಆಗಲಿದೆ. ಯು.ಪಿ ಯಲ್ಲಿ ಆಪ್ ಪಕ್ಷವನ್ನು ಜೆಜೆಪಿ (ಜಮಾನತ್ ಜಪ್ತ್ ಪಾರ್ಟಿ) ಎಂದು ವ್ಯಂಗಿಸುತ್ತಾರೆ. ಗುಜರಾತ್ ನಲ್ಲಿ 182 ಕ್ಷೇತ್ರದಲ್ಲಿ ಆಪ್ ಠೇವಣೆ ಕಳೆದುಕೊಳ್ಳುವುದು ಶತಸಿದ್ದ. ಬಿಜೆಪಿ ಪಕ್ಷ 150 ಸ್ಥಾನದೊಂದಿಗೆ ಪೂರ್ಣ ಬಹುಮತ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಪಕ್ಷಕ್ಕೆ ಸಂಘಟನಾತ್ಮಕ ಶಕ್ತಿ ತುಂಬುವಲ್ಲಿ ಉಡುಪಿಗೆ ಐತಿಹಾಸಿಕ ಹಿನ್ನೆಲೆ ಇದೆ. ಸಶಕ್ತ ಪಕ್ಷ ಸಂಘಟನೆ ಮತ್ತು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಮೋರ್ಚಾದ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ಜೊತೆಗೆ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳ ಪ್ರಚಾರದ ಮೂಲಕ ಮುಂದಿನ ಚುನಾವಣೆಗಳನ್ನು ಸಮರ್ಪಕವಾಗಿ ಎದುರಿಸಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಉದ್ಘಾಟನಾ ಅವಧಿಯ ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳೇಕಾಯಿ, ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ವೆಂಕಟೇಶ್ ಸ್ವಾಗತಿಸಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್ ಪ್ರಸ್ತಾವಿಸಿದರು. ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ವಂದಿಸಿದರು. ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ನಿರೂಪಿಸಿದರು.
ಯುವಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿಯ ಪೂರ್ವಭಾವಿಯಾಗಿ ಉಡುಪಿ ನಗರದ ಜೋಡುಕಟ್ಟೆಯಿಂದ ಯುವಮೋರ್ಚಾ ಕಾರ್ಯಕರ್ತರು 500ಕ್ಕೂ ಮಿಕ್ಕಿ ಬೈಕ್ ಗಳಲ್ಲಿ ರ್ಯಾಲಿಯ ಮೂಲಕ ಮಣಿಪಾಲದ ಡಾ! ವಿ.ಎಸ್. ಆಚಾರ್ಯ ವೃತ್ತಕ್ಕೆ ತೆರಳಿ ಮಾಲಾರ್ಪಣೆಗೈದರು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ, ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್, ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಶಾಂತಿನಿಕೇತನ ಸಹಿತ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ, ನ.22 : ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 1,680 ಪಿಎಫ್ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು. ಇದೀಗ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದೆ. ಇದರಿಂದ ಕೆಲಸ ಕಳೆದುಕೊಂಡಿರುವ ಪಿಎಫ್ಐ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ದ ಪ್ರತೀಕಾರ ನಡೆಸಲು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣವು ಇದೇ ಕಾರಣಕ್ಕೆ ನಡೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಆರೋಪಿಸಿದರು.
ಅವರು ನ.22ರಂದು ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕೊಯಮುತ್ತೂರಿನಲ್ಲಿ ನಡೆದ ಬಾಂಬ್ ದಾಳಿಯ ಮಾದರಿಯಲ್ಲೇ ಮಂಗಳೂರಿನಲ್ಲಿಯೂ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದೆ. ಅಲ್ಲಿನ ಸರ್ಕಾರ ಅದನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಆ ಘಟನೆಯನ್ನು ಎನ್ಐಎಗೆ ವಹಿಸುತ್ತಿದ್ದರೇ ಮಂಗಳೂರಿನ ಘಟನೆ ನಡೆಯುತ್ತಿರಲಿಲ್ಲ ಎಂದರು.
ತಾಕತ್ತಿದ್ದರೇ ಪಿಎಫ್ಐಯನ್ನು ನಿಷೇಧಿಸಿ ನೋಡೋಣ ಎಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದರು. ಬಿಜೆಪಿ ಸರ್ಕಾರ ಪಿಎಫ್ಐಯನ್ನು ನಿಷೇಧಿಸಿ ತನ್ನ ತಾಕತ್ತನ್ನು ತೋರಿಸಿದೆ. ಮಾತ್ರವಲ್ಲ ಪಿಎಫ್ಐನ ಭಯೋತ್ಪದಕ ಕೃತ್ಯಗಳನ್ನು ನಿಗ್ರಹಿಸುವ ತಾಕತ್ತನ್ನೂ ಹೊಂದಿದೆ ಎಂದವರು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ‘ಮಿಶನ್ 150’ ನೂರಕ್ಕೆ ನೂರು ಯಶಸ್ವಿಯಾಗುತ್ತದೆ. ಈಗಾಗಲೇ ಚುನಾವಣೆಗೆ ಸಿದ್ಧತೆಯಾಗಿ ದೊಡ್ಡಬಳ್ಳಾಪುರ, ಕಲಬುರ್ಗಿ, ಬಳ್ಳಾರಿಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗಿದೆ. ಮುಂದೆ ಮೈಸೂರಿನಲ್ಲಿ ಎಸ್ಸಿ ಮೋರ್ಚಾ ಸಮಾವೇಶ, ಶಿವಮೊಗ್ಗದಲ್ಲಿ ಹಿಂ.ವ. ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಲಾಗುತ್ತದೆ ಎಂದರು.
ಗುಜರಾತ್ ಚುನಾವಣೆಯಲ್ಲಿ ಶೇ.38ರಷ್ಟು ಸ್ಥಾನಗಳನ್ನು ಯುವಕರಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಅದಕ್ಕಿಂತಲೂ ಹೆಚ್ಚು ಸ್ಥಾನ ಯುವಕರಿಗೆ ಸಿಗುತ್ತದೆ, ಮಹಿಳೆಯರಿಗೂ ಸಾಕಷ್ಟು ಸ್ಥಾನಗಳನ್ನು ನೀಡಲಾಗುತ್ತದೆ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ನಡೆಸಿದರು, ಆದರೇ ಅವರಿಗೆ ‘ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಮಾತ್ರ ಜೋಡೋ ಮಾಡುವುದಕ್ಕಾಗಲೇ ಇಲ್ಲ’ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.
ಬೆಂಗಳೂರು: ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದಲ್ಲೇ ನಾವು ಆಡಳಿತ ನಡೆಸುತ್ತಿದ್ದೇವೆ. ದಲಿತ ಸಮುದಾಯಗಳಿಗೆ ಹೆಚ್ಷು ಸೌಲಭ್ಯ ನೀಡಿದ್ದು ನಮ್ಮ ಸರ್ಕಾರ. ಸ್ವಾತಂತ್ರ್ಯ ಬಂದ ನಂತರ ಎಸ್ಟಿ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದು ಮೋದಿ ಸರ್ಕಾರ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬಳ್ಳಾರಿಯಲ್ಲಿ ನ.20ರಂದು ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಾಯಕರೇ ನಿಜವಾದ ನಾಯಕರು, ಅವರು ಸ್ನೇಹಕ್ಕು ಸೈ ಸಮರಕ್ಕೂ ಸೈ. ಮೊಘಲರು, ಬ್ರಿಟೀಷರು, ಹೈದರ್, ಟಿಪ್ಪು, ಬಿಜಾಪುರ ಸುಲ್ತಾನರನ್ನು ಹಿಮ್ಮೆಟ್ಟಿಸಿದ್ದು ವಾಲ್ಮೀಕಿ ಸಮಾಜ. ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಇಂದು ಸೇರಿರುವ ನೀವುಗಳೆಲ್ಲ ಮತ್ತೊಮ್ಮೆ ದಲಿತರ ಸೇವೆ ಮಾಡಲು ಬಿಜೆಪಿಗೆ ಅವಕಾಶ ನೀಡಲು ಬಂದಿದ್ದೀರಿ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದರೂ ಸಹ ರಾಷ್ಟ್ರೀಯ ಅಧ್ಯಕ್ಷರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿರುವುದು ಸಂತಸದ ವಿಷಯ ಎಂದು ನುಡಿದರು.
ಸಿದ್ದರಾಮಯ್ಯ ಅವರೇ ಅಹಿಂದ ನನ್ನ ಹಿಂದೆ ಇದೆ ಹೇಳುತ್ತೀರಲ್ಲ ಎಲ್ಲಿ ಇದೆ ಹೇಳಿ. ಇಲ್ಲಿ ಬಂದು ನೋಡಿ ಅಹಿಂದ ಇಲ್ಲಿದೆ. ಅಹಿಂದ ಎಂದು ಹೇಳಿ ಬರೀ ಅವರು ಮುಂದೆ ಹೋಗಿ ಉಳಿದವರನ್ನು ಹಿಂದೆ ಬಿಟ್ಟರು. ಎಸ್ಸಿ ಎಸ್ಟಿ ಸಮುದಾಯದ ಮತ ಪಡೆದು ಅವರನ್ನು ಉದ್ಧಾರ ಮಾಡಿಲ್ಲ. ವಾಲ್ಮೀಕಿ ಸಮುದಾಯ ಜಾಗೃತವಾಗಿದೆ. ನೀವು ಸ್ವಾಭಿಮಾನದಿಂದ ಮುಂದೆ ನಡೆಯಿರಿ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಇದೇ ಬಳ್ಳಾರಿಯಲ್ಲಿ ಜೋಡೋ ಯಾತ್ರೆ ಮಾಡಿದ್ದರು. ಕಡಿಮೆ ಜನ ಸೇರಿದ್ದನ್ನು ನಾವು ನೋಡಿದ್ದೇವೆ. ಅದನ್ನೆ ಸುನಾಮಿ ಎಂದರು. ಈಗ ಬಂದು ನೋಡಿ ಇಂದು ಸುನಾಮಿಯ ಅಪ್ಪ ಸೇರಿದ್ದಾರೆ. ಬಳ್ಳಾರಿಯ ಕಾರ್ಯಕ್ರಮದಲ್ಲಿ ರಾಹುಲ್ ಬಳ್ಳಾರಿಗೆ ಮೂರು ಸಾವಿರ ಕೋಟಿ ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದರು. ಆದರೆ ಅವರ ತಾಯಿ ಗೆದ್ದ ನಂತರ ಮೂರು ರುಪಾಯಿಯನ್ನು ಕೊಟ್ಟಿಲ್ಲ. ಬಳ್ಳಾರಿಯ ಜನರಿಗೆ ಮೋಸ ಮಾಡಿದ ಕಾಂಗ್ರೆಸ್‍ಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು. ಹತ್ತಕ್ಕೆ ಹತ್ತರಲ್ಲಿ ಬಿಜೆಪಿ ಗೆಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ನೀಡಲಾಗಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ ಎಂದು ವಿವರಿಸಿದರು.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮಾತು ಕೊಟ್ಟಿದ್ದೆವು. ಶ್ರೀರಾಮುಲುಗೆ ಗೇಲಿ ಮಾಡಿದರು. ಇಂದು ಈ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ರಾಮುಲು ಮಾತು ಉಳಿಸಿಕೊಂಡಿದ್ದಾರೆ. ರಾಮುಲು ಬಗ್ಗೆ ಹಗುರವಾಗಿ ಮಾತನಾಡಬೇಡಿ. ಆತ ಸಮುದಾಯದ ಹೃದಯದ ಸಾಮ್ರಾಟ. ಸಿದ್ದರಾಮಯ್ಯ ಅವರು ರಾಮುಲು ಅವರನ್ನು ಪೆದ್ದ ಎಂದು ಜರಿದರು. ನೀನು ಭಾರಿ ಬುದ್ಧಿವನಂತಲ್ಲ. ಈ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿರಿ? ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಟ್ಟಿರಿ? ಹಾಲಮತ ಸಮುದಾಯಕ್ಕೂ ಮೋಸ ಮಾಡಿದ್ರಿ. ನಿಮ್ಮ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಕುರುಬ ಸಮುದಾಯದ ಸಚಿವರು ಇರಲಿಲ್ಲ. ಯಡಿಯೂರಪ್ಪ ಅವರು ಕುರುಬರಿಗೆ, ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಬಿಜೆಪಿ ಮಾತ್ರ ಎಂದು ತಿಳಿಸಿದರು.
ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಎಸ್ಸಿ ಎಸ್ಟಿ ಸಮುದಾಯಕ್ಕಾಗಿ 100 ಹಾಸ್ಟೆಲ್ ಮಾಡುತ್ತೇವೆ. ಸಾಮಾಜಿಕ, ಆರ್ಥಿಕವಾಗಿ ನ್ಯಾಯ ಕೊಡಲು ನಾವು ಬದ್ಧ. ನಾವು ಮೀಸಲಾತಿ ಹೆಚ್ಚಿಸುವ ಮೂಲಕ ಸಂವಿಧಾನಬದ್ಧ ಹಕ್ಕನ್ನು ನಿಮಗೆ ಕೊಟ್ಟಿದ್ದೇವೆ. ಇದುವರೆಗೂ ದೇಶದ ಜನರಿಗೆ ಮೋಸ ಮಾಡುತ್ತ ಬಂದ ಕಾಂಗ್ರೆಸ್ ನ ಬೇರು ಸಮೇತ ಕಿತ್ತೊಗೆಯಲು ನೀವೆಲ್ಲ ಸಂಕಲ್ಪ ಮಾಡಿ. ಇದೊಂದು ಸಂಕಲ್ಪಗಳ ಸಮಾವೇಶವಾಗಿದೆ. ಕಾಂಗ್ರೆಸ್ ಗೆ ತಕ್ಕಪಾಠ ಕಲಿಸೋಣ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಡೀ ಸಮುದಾಯಕ್ಕೆ ನಾನು ಒಂದೇ ಒಂದು ಮನವಿ ಮಾಡಿಕೊಳ್ಳುತ್ತೇನೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರಗಳಿವೆ. ಆದರೆ ನಾವು ಗೆದ್ದಿದ್ದು ಕೇವಲ ಐದು ಸ್ಥಾನ. ಆದರೆ ಬರುವ ಚುನಾವಣೆಯಲ್ಲಿ ಹತ್ತಕ್ಕೆ ಹತ್ತೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು ಎಂದು ಜನರನ್ನು ವಿನಂತಿಸಿದರು.
ಎಸ್ಟಿ ಸಮುದಾಯದ ಅನೇಕ ವರ್ಷಗಳ ಹೋರಾಟ, ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಿಸಿದ್ದು ಮಾತ್ರ ಬಿಜೆಪಿ ಸರ್ಕಾರ. ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ, ಜಯಂತಿ, ಜಯಂತಿಗಾಗಿ ರಜೆ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಸಣ್ಣ ಕೈಗಾರಿಕೆಗಳಿಗೆ ಶೇ. 50ರಷ್ಟು ಸಬ್ಸಿಡಿ ಸಿಗುತ್ತಿದೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಕೇಳಿದ ಪ್ರತಿಯೊಂದು ಕೆಲಸವನ್ನೂ ಮಾಡಿದ್ದೇನೆ. ಅದು ನಿಮಗೆಲ್ಲ ತಿಳಿದಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳನ್ನು ಎಲ್ಲಾ ಕ್ಷೆತ್ರಗಳಲ್ಲಿ ಗೆಲ್ಲಿಸಬೇಕು ಎಂದು ತಿಳಿಸಿದರು.
ಈ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಆಘಾತವಾಗಿದೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಬರೀ ಲೂಟಿ ಮಾಡಿದರು. ಇದನ್ನೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೂರು ತಲೆಮಾರಿಗಾಗುಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಅಂದರೆ ಅಭಿವೃದ್ಧಿ ಪರ ಪಕ್ಷ. ಕಾಂಗ್ರೆಸ್ ಎಂದರೆ ಲೂಟಿಕೋರ ಪಕ್ಷವಾಗಿದೆ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಆ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡಿ, ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯಕ್ಕಾಗಿ ಹಾಗೂ ಎಸ್ಸಿ ಸಮುದಾಯಗಳಿಗೆ ರಾಜ್ಯದ ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ಸಮುದಾಯಗಳು ಋಣಿಯಾಗಿರಬೇಕು. ಮೋದಿ ಹಾಗೂ ಬೊಮ್ಮಾಯಿ ಅವರ ನೇತತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಕಾರ್ಯ ಮಾಡುತ್ತಿವೆ. ರಾಮುಲು ಅವರು ಹೇಳಿದ ಎಲ್ಲಾ ಮಾತುಗಳನ್ನು ನಾನು ಒಪ್ಪಿ ಅವರನ್ನು ಬೆಂಬಲಿಸುತ್ತೇನೆ. ಭಗವಾನ್ ಬಿರ್ಸ ಮುಂಡಾ ಅವರ ಜಯಂತಿಯ ಸುಸಂದರ್ಭದಲ್ಲಿ ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಇದುವರೆಗೂ ಮೋಸ ಮಾಡುತ್ತಾ ಬಂದಿದೆ. ಹೀಗಾಗಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ರಾಹುಲ್ ಗಾಂಧಿ ಜೋಡೊ ಯಾತ್ರೆ ಹೊರಟಿದ್ದಾರೆ. ಸ್ವಾತಂತ್ರ್ಯ ನಂತರ ದೇಶವನ್ನು ತೋಡೊ ಮಾಡಿತ್ತು. ಆದರೆ ಈಗ ಜೋಡೊ ಯಾತ್ರೆ ಮಾಡುವ ಮೂಲಕ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅರುಣಾಚಲದಿಂದ ಗುಜರಾತ್ ವರೆಗೆ ಮೋದಿ ಸರ್ಕಾರ ಜೋಡಿಸುವ ಕೆಲಸ ಮಾಡುತ್ತಾ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ಎಲ್ಲಾ ಜಾತಿ, ಜನಾಂಗಗಳಿಗೆ ಅನೇಕ ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುವ ಮೂಲಕ ದಲಿತರನ್ನು ಮೇಲೆತ್ತುವ ಕಾರ್ಯ ಮಾಡುತ್ತಿದೆ. ಬಳ್ಳಾರಿಯಲ್ಲಿ ಏಕಲವ್ಯ ಮಾದರಿ ಶಾಲೆಯನ್ನು ಆರಂಭಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮ ಕೇಂದ್ರ ಸರ್ಕಾರ ಶ್ರಮಿಸಿದೆ. ಕಾಡುಕುರುಬ, ಬೆಟ್ಟಕುರುಬರ ಸಮಸ್ಯೆ ಪರಿಹರಿಸಲಾಗುವುದು. ಸಿದ್ದರಾಮಯ್ಯ ಕೇವಲ ಮಾತುಗಾರ ಆದರೆ ಶ್ರೀರಾಮುಲು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ ಎಂಟು ವರ್ಷಗಳಿಂದ ಬಡವರ ಪರ ಕೆಲಸ ಮಾಡುತ್ತಿದೆ. ಕರೋನಾ, ಜಾಗತಿಕ ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆಯೂ ನಮ್ಮ ನಾಯಕ ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕರೋನಾದ ಹೊಡೆತದ ಮಧ್ಯೆಯೂ ದೇಶ ಸಮರ್ಥವಾಗಿ ನಡೆದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ತೆಗೆಯುತ್ತದೆ ಎಂದು ವಿಪಕ್ಷಗಳು ಸುಳ್ಳು ಹರಡಿದವು. ಆದರೆ ಅದೇ ಸಮುದಾಯಗಳಿಗೆ ಇಂದು ಮೋದಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಿಎಂ ಬೊಮ್ಮಾಯಿಯವರು ಮೀಸಲಾತಿ ಹೆಚ್ಚ್ಚಿಸಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕಾಂಗ್ರೆಸ್ ಮಾತಿನಲ್ಲಿ ಮಾತ್ರ ದಲಿತ ಪರ ಎನ್ನುತ್ತಿದೆ. ಆದರೆ ಅಂಬೇಡ್ಕರ್ ಅವರ ಆದಿಯಾಗಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ ಪಕ್ಷ ಅದು. ಮುಳುಗುವ ಹಡಗನ್ನು ನಡೆಸಿಕೊಂಡು ಹೋಗಿ ಎಂದು ಖರ್ಗೆಯವರಿಗೆ ಹುದ್ದೆ ನೀಡಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಕೂಡಲೇ ಖರ್ಗೆಯವರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ ಅವರನ್ನು ಸೋಲಿಸಿದರು, ಅಖಂಡ ಶ್ರೀನಿವಾಸ್ ಮೂರ್ತಿಯ ಮನೆಯನ್ನೇ ಸುಡಿಸಿದರು. ಸಿದ್ದರಾಮಯ್ಯ ದಲಿತ ವಿರೋಧಿ ವ್ಯಕ್ತಿ. ಅವರಿಗೆ ಈಗಲೂ ಯಾವ ಕ್ಷೇತ್ರ ಎನ್ನುವುದೇ ಪಕ್ಕಾ ಇಲ್ಲ ಎಂದು ತಿಳಿಸಿದರು.
ಈ ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಗೆದ್ದು ತದನಂತರ ಕ್ಷೇತ್ರ ಬಿಟ್ಟು ಹೋದರು. ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿಗೆ ಹೋದರು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬಾದಾಮಿಗೆ ಬಂದರು; ಈಗ ಅಲ್ಲೂ ಇರದೇ ರಾಜ್ಯದ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಬೇಕೆಂದು ಹುಡುಕಾಟ ನಡೆಸಿದ್ದಾರೆ. ರಾಹುಲ್ ಗಾಂಧಿ ದಿಕ್ಕೆಟ್ಟು ದೇಶದಲ್ಲಿ ಓಡಾಡುತ್ತಿದ್ದಾರೆ ಎಂದರು.
ವಾಲ್ಮೀಕಿ ಬರೆದ ರಾಮಾಯಣ ಕಾಲ್ಪನಿಕ ಎಂದರು, ರಾಮನನ್ನು ಪ್ರಶ್ನೆ ಮಾಡಿದರು, ಯುಪಿಎ ಸರ್ಕಾರ ಬರೀ ಅಲ್ಪಸಂಖ್ಯಾತರ ಪರ ಕೆಲಸ ಮಾಡಿದೆ. ಈಗಾಗಲೆ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲೂ ಮುಕ್ತವಾಗಲಿದೆ ಎಂದು ವಿಶ್ವಾಸದಿಂದ ನುಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಇವತ್ತು ಇಲ್ಲಿ ಸೇರಿದ ಜನ ಬಂದಿರುವುದು ಅಭಿನಂದನೆ ಸಲ್ಲಿಸಲು. ಯಾವ ಸರ್ಕಾರಗಳು ಸಮುದಾಯದ ಕೂಗು ಕೇಳಿಸಿಕೊಳ್ಳದೇ ಮೀಸಲಾತಿಯನ್ನು ಹೆಚ್ಚಿಸಲಿಲ್ಲ. ಆದರೆ ಆ ಕೆಲಸ ಮಾಡಿದ್ದು ಬಿಜೆಪಿ ಮಾತ್ರ. ನಮ್ಮ ಪಕ್ಷ ಎಸ್ಟಿ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಸೇರಿ ವಿಪಕ್ಷಗಳು ಬಿಜೆಪಿ ದಲಿತ ವಿರೋಧಿ ಎಂದು ಆರೋಪಿಸಿದವು. ಆದರೆ ಅವರೆಂದಿಗೂ ಮೀಸಲಾತಿ ಹೆಚ್ಚಿಸಲ್ಲ. ಈ ಸಮುದಾಯಗಳನ್ನು ಎಂದಿಗೂ ಅಭಿವೃದ್ಧಿಯಾಗಲು ಬಿಡಲ್ಲ. ಆದರೆ ದಲಿತ, ಹಿಂದುಳಿದ ಸಮುದಾಯಗಳ ಪರ ಬಿಜೆಪಿ ಮಾತ್ರ ಇದೆ ಎಂದರು.
ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೆ ಅದೇ ಕಾಂಗ್ರೆಸ್ ನವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಾರೆ. ಶಿವನ ಆವಾಸ ಸ್ಥಾನವಾದ ಕಪಾಲಿ ಬೆಟ್ಟವನ್ನು ಕೆಪಿಸಿಸಿ ಅಧ್ಯಕ್ಷರು ಕ್ರಿಸ್ತಬೆಟ್ಟ ಮಾಡಲು ಹೊರಟರು. ಇದರ ಪರಿಣಾಮ ಅವರಿಗೆ ಉನ್ನತ ಹುದ್ದೆ ಸಿಕ್ಕಿತು. ಕಾಂಗ್ರೆಸ್ ನವರಿಗೆ ಕುಂಕುಮ ಕಂಡರೆ ಆಗಲ್ಲ. ಕೇಸರಿ ಕಂಡರೆ ಆಗಲ್ಲ. ಅಂತವರಿಗೆ ಮತ ಹಾಕಬೇಡಿ. ಕಾಂಗ್ರೆಸ್ ಮತಾಂತರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಎಂದರು.
ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದು ಕಾಂಗ್ರೆಸ್. ಹನುಮಂತನ ಅಸ್ತಿತ್ವ ಪ್ರಶ್ನಿಸಿತು. ರಾಮಾಯಣ ಕಾಲ್ಪನಿಕ ಎಂದು ಹೇಳಿತು. ಮತ್ತೊಬ್ಬ ಹೇಳ್ತಾನೆ ಹಿಂದೂ ಎಂದರೆ ಕೆಟ್ಟ ಶಬ್ದವಂತೆ. ವಿಜಯನಗರ ಸಾಮ್ರಾಜ್ಯದ ಸ್ಥಾಪಿಸುವಲ್ಲಿ ನಾಯಕ ಸಮುದಾಯದ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಇಂದು ಗಂಡುಗಲಿ ಕುಮಾರರಾಮ, ಮದಕರಿ ನಾಯಕನ ವಿರುದ್ಧ ಇದೆ. ಮದಕರಿ ನಾಯಕನನ್ನು ಮೋಸದಿಂದ ಕೊಂದ ಟಿಪ್ಪುನ ಪರ ಕಾಂಗ್ರೆಸ್ ಇದೆ. ಇಂತವರಿಗೆ ಮತ ಹಾಕಬೇಕೆ ಎಂದು ಯೋಚಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನವರಿಗೆ ಕೇಸರಿ ಕಂಡರೆ, ಕುಂಕುಮ ಕಂಡರೆ, ಹಿಂದೂ ಶಬ್ದ ಕೇಳಿದರೆ ಆಗಲ್ಲ. ಇಂತಹ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಠೇವಣಿ ಕಳೆದುಕೊಳ್ಳುವಂತೆ ಅಲ್ಲಿನ ಜನ ಉತ್ತರ ನೀಡಿದ್ದಾರೆ. ರಾಮನ ಜೊತೆಗೆ ಹನುಮ ಇದ್ದಂತೆ ಉತ್ತರ ಪ್ರದೇಶದ ರಾಮ ಕರ್ನಾಟಕದ ಹನುಮ ಜೊತೆ ಇರಬೇಕು. ಅಲ್ಲಿ ಭಾಜಪಾ ಸರ್ಕಾರ ಇರುವಂತೆ ಬರುವ ದಿನದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುವಂತೆ ಮಾಡಿ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಎಚ್ಚರಿಸಿದರು.
ರಾಹುಲ್ ಗಾಂಧಿ ಯಾತ್ರೆ ಮಾಡಿದ ಪರಿಣಾಮ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆದ್ದಿದೆ. ರಾಹುಲ್ ಹೋದೆಡೆ ಕಾಂಗ್ರೆಸ್ ಧೂಳೀಪಟವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರದು ಐರನ್ ಲೆಗ್ ಎಂದು ವ್ಯಂಗ್ಯವಾಡಿದರು.
ರಾಜ್ಯದ ಸಚಿವ ಶ್ರೀರಾಮುಲು ಅವರು ಮಾತನಾಡಿ, ಈ ನವಶಕ್ತಿ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿದ್ದೇವೆ. ರಾಮನಿಗೆ, ಹನುಮನಿಗೆ ಶಕ್ರಿ ತುಂಬಿದ ಬಿಜೆಪಿ ಬರುವ ದಿನಗಳಲ್ಲಿ ಲಂಕಾ(ಕಾಂಗ್ರೆಸ್) ದಹನ ಮಾಡಬೇಕಿದೆ. ಈ ಜನಶಕ್ತಿ, ಜನಾಶೀರ್ವಾದ ನೋಡಿದರೆ ನಮ್ಮ ಸರ್ಕಾರ, ನಮ್ಮ ಪಕ್ಷದ ಪರ ಬರುವ ದಿನದಲ್ಲಿ ಸ್ಪಷ್ಟ ಬಹುಮತ ಬರಲಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ದಹನ ಆರಂಭವಾಗಿದೆ ಎಂದು ವಿಶ್ಲೇಷಿಸಿದರು.
7 ಸಾವಿರ ಬೇಡ ಪಡೆಗಳು ನಮ್ಮಲ್ಲಿ ಇದ್ದವು. ವಿಜಯನಗರ ಸಾಮ್ರಾಜ್ಯ ನಿರ್ಮಿಸಿದ್ದು ಅದೇ ಪಡೆಗಳು. 2023ರ ಚುನಾವಣೆಯಲ್ಲಿ ಈ ಜನಶಕ್ತಿಯ ಆಶೀರ್ವಾದ ಬಿಜೆಪಿ ಮೇಲೆ ಇರಲಿದೆ. 40 ವರ್ಷಗಳ ಹೋರಾಟವನ್ನು ಅರಿತು ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದರು. ಅವರಿಗೆ ಎಂಟು ಗುಂಡಿಗೆ ಇವೆ. ನಮ್ಮ ಎಸ್ಸಿ ಎಸ್ಟಿ ಸಮುದಾಯದ ಪಾಲಿಗೆ ಬೊಮ್ಮಾಯಿ ದಕ್ಷಿಣ ವಾಜಪೇಯಿ ಆಗಿದ್ದಾರೆ. ದಲಿತ ಪರ ಕೇವಲ ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ದಲಿತರಿಗೆ ಮೀಸಲಾತಿ ಹೆಚ್ಚಿಸಲೇ ಇಲ್ಲ. 2013ರಿಂದ 2018ರ ವರೆಗೆ ಅಧಿಕಾರದಲ್ಲಿದ್ದಾಗ ನಿಮಗೆ ದಲಿತರು ನೆನಪಾಗಲಿಲ್ಲವೆ? ಅವರಿಗೆ ಮೀಸಲಾತಿ ಹೆಚ್ಷಿಸಬೇಕೆಂಬ ಕಾಳಜಿ ಬರಲಿಲ್ಲವೆ ಸ್ವಾಮಿ ನಿಮಗೆ? ಸಿಎಂ ಈಗ ಸುದರ್ಶನ ಚಕ್ರ ಬಿಟ್ಟಿದೆ ಅದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಶಿರಚ್ಛೇದನ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಶಕ್ತಿ ನೋಡಲು ಬನ್ನಿ. ಮೀಸಲಾತಿ ಕೊಟ್ಟಿದ್ದು ನಾವು. ಆದರೆ ನಾವು ಕೊಟ್ಟಿದ್ದೇವೆ ಎಂದು ಬಡಿವಾರ ಕೊಚ್ಷಿಕೊಳ್ಳುತ್ತೀರಲ್ಲ ನಾಚಿಕೆ ಆಗಲ್ಲವೆ? ಎಂದು ಪ್ರಶ್ನಿಸಿದರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹೇಗೆ ನಮ್ಮ ಸಮುದಾಯಗಳಿಗೆ ಸಮಾನತೆ ಕೊಟ್ಟರೋ ಹಾಗೆ ಇವತ್ತು ಬೊಮ್ಮಾಯಿ ಅವರು ನಮ್ಮ ಸಮುದಾಯಗಳಿಗೆ ಮೀಸಲಾತಿ ನೀಡಿ ನಮ್ಮ ಸಮಾಜಗಳನ್ನು ಉದ್ಧಾರ ಮಾಡಲು ಮುಂದಾಗಿದ್ದಾರೆ. ಇದುವರೆಗೂ ಇಡೀ ಸಮುದಾಯ ನನಗೆ ನೀಡಿದ ಆಶೀರ್ವಾದ, ಬೆಂಬಲಕ್ಕೆ ಇಂದು ನಾನು ನಿಮ್ಮ ಋಣ ತೀರಿಸಿದ್ದೇನೆ. ಶ್ರೀರಾಮುಲು ಈ ಹಿಂದೆ ಮಾತು ಕೊಟ್ಟಿದ್ದರೆ ಅದು ನನ್ನೊಬ್ಬನದೇ ಅಲ್ಲ. ನನ್ನ ಹಿಂದೆ ಇಡೀ ಪಕ್ಷ ಇದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ದೇಶದ ಒಳಿತಿಗಾಗಿ ಅರಸುರಾಗಿ, ರಾಜರಾಗಿ, ಪಾಳೆಗಾರರಾಗಿ ಕೆಲಸ ಮಾಡಿದ್ದು ವಾಲ್ಮೀಕಿ ಸಮುದಾಯ. ಹಕ್ಕಬುಕ್ಕರು, ಸಿಂಧೂರ ಲಕ್ಷ್ಮಣ, ಸುರುಪುರ ಅರಸರು, ಏಕಲವ್ಯ ಸೇರಿದಂತೆ ಅನೇಕರು ದೇಶಕ್ಕಾಗಿ ಬದುಕಿದರು. ನಮ್ಮ ಸಮುದಾಯಕ್ಕೆ ಹೊಡೆತ ಬಿದ್ದಿದ್ದು ಬ್ರಿಟಿಷರಿಂದ. ನಮ್ಮ ಆಸ್ತಿ, ಆಯುಧ ಕಳೆದುಕೊಂಡ ನಂತರ ಹಲಗಲಿಯ ಬೇಡರಿಂದ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಇಂದು ನಮ್ಮ ಸಮುದಾಯ ಕೇವಲ ಬಿಜೆಪಿ ಪರ ಇದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಎಸ್.ಟಿ. ಸಮುದಾಯದ ಲಕ್ಷಾಂತರ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬಳ್ಳಾರಿ ನಗರದಾದ್ಯಂತ ಹಾಗೂ ಸಮಾವೇಶದ ಸ್ಥಳವನ್ನು ಪಕ್ಷದ ಬಾವುಟ ಹಾಗೂ ಪ್ಲೆಕ್ಸ್‍ಗಳಿಂದ ಅಲಕೃಂತಗೊಳಿಸಲಾಗಿತ್ತು. ವಿವಿಧ ಕಲಾ ತಂಡಗಳಿಂದ ಕಾರ್ಯಕ್ರಮ ಏರ್ಪಡಿಸಿದ್ದು; ಅದು ಜನರ ಮನ ಸೆಳೆಯಿತು.
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆತಿಥ್ಯದಲ್ಲಿ ಯುವ ಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯು ನ.22ರಂದು ಬೆಳಿಗ್ಗೆ ಗಂಟೆ 10.00ಕ್ಕೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ನಡೆಯಲಿದೆ. ನ.21ರಂದು ಸಂಜೆ 6.00 ಗಂಟೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಹೇಳಿದರು.
ಅವರು ನ.19ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ವಿಶೇಷ ಕಾರ್ಯಕಾರಿಣಿ ಸಭೆಗೆ ರಾಜ್ಯ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ 39 ಸಂಘಟನಾತ್ಮಕ ಜಿಲ್ಲೆಗಳ ಯುವ ಮೋರ್ಚಾ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಅಪೇಕ್ಷಿತರಾಗಿದ್ದು, ಒಟ್ಟು 163 ಮಂದಿ ಭಾಗವಹಿಸಲಿದ್ದಾರೆ.
ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ನ.22ರ ಬೆಳಿಗ್ಗೆ ಗಂಟೆ 9.00ಕ್ಕೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಮತ್ತು ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್ ಕುಮಾರ್ ರವರನ್ನು ಜಿಲ್ಲಾ ಯುವ ಮೋರ್ಚಾದ ನೇತೃತ್ವದಲ್ಲಿ ಉಡುಪಿಯ ಜೋಡುಕಟ್ಟೆಯಲ್ಲಿ ಸ್ವಾಗತಿಸಿ, ಬೈಕ್ ರ್ಯಾಲಿ ಮೂಲಕ ಮಣಿಪಾಲದ ರಜತಾದ್ರಿಯ ವರೆಗೆ ಕರೆತರಲಾಗುವುದು. ಬಳಿಕ ರಜತಾದ್ರಿ ಮುಂಭಾಗದಲ್ಲಿರುವ ಡಾ! ವಿ.ಎಸ್. ಆಚಾರ್ಯ ರವರ ಪುತ್ಥಳಿಗೆ ಮಾಲಾರ್ಪಣೆಗೈದು ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ.
ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ; ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನೀಲ್ ಕುಮಾರ್; ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್. ಸುಕುಮಾರ್ ಶೆಟ್ಟಿ ಮತ್ತು ಪಕ್ಷದ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ಉದ್ಯಾವರ ಮತ್ತು ಅಭಿರಾಜ್ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಉಡುಪಿ: ಬಿಲ್ಲವ ಸೇವಾ ಸಂಘ(ರಿ.), ಶ್ರೀ ವೀಠೋಬ ಭಜನಾ ಮಂದಿರ ಅಂಬಲಪಾಡಿ ಇದರ ವತಿಯಿಂದ 30ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ದಯಾಕರ ಶಾಂತಿ ಬನ್ನಂಜೆ ಇವರ ಪೌರೋಹಿತ್ಯದಲ್ಲಿ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಜರಗಿತು.ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಭಜನಾ ಸಂಚಾಲಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಮಂಜಪ್ಪ ಸುವರ್ಣ ಮತ್ತು ಅವರ ಧರ್ಮಪತ್ನಿ ಗೋದಾವರಿ ಎಮ್. ಸುವರ್ಣರವರನ್ನು ಸಂಘದ ವತಿಯಿಂದ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ ಎ., ಜೊತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್ ಮತ್ತು ಅವಿನಾಶ್ ಪೂಜಾರಿ, ಮಹಿಳಾ ಘಟಕದ ಸಂಚಾಲಕಿ ವಿಜಯಾ ಜಿ. ಬಂಗೇರ, ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಸಂಘದ ಆಡಳಿತ ಸಮಿತಿ ಸದಸ್ಯರಾದ ಶಿವದಾಸ್ ಪಿ., ಮುದ್ದಣ್ಣ ಪೂಜಾರಿ, ರಮೇಶ್ ಕೋಟ್ಯಾನ್, ಸುಧಾಕರ್ ಎ., ಗುರುರಾಜ್ ಪೂಜಾರಿ, ಸತೀಶ್ ಪೂಜಾರಿ, ಶಿವಾಜಿ ಸನಿಲ್, ಭಾಸ್ಕರ ಕೋಟ್ಯಾನ್, ವಿನಯ್ ಕುಮಾರ್, ನಿತಿನ್ ಕುಮಾರ್, ಶಶಿಕಾಂತ್, ವಿನೋದ್ ಪೂಜಾರಿ, ಸುಧಾಕರ್, ಮಾಜಿ ಪ್ರ.ಕಾರ್ಯದರ್ಶಿ ಕುಶಲ್ ಕುಮಾರ್ ಎ., ಭಜನಾ ಸಹ ಸಂಚಾಲಕರಾದ ಮಾಧವ ಪೂಜಾರಿ, ಶಂಕರ ಪೂಜಾರಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು, ಸಂಘದ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
500ಕ್ಕೂ ಮಿಕ್ಕಿ ಭಕ್ತಾದಿಗಳು ಶ್ರೀ ಸತ್ಯನಾರಾಯಣ ಪೂಜೆ ಸಲ್ಲಿಸಿದ್ದರು. ಮಹಾ ಪೂಜೆಯ ಬಳಿಕ ಅನ್ನ ಪ್ರಸಾದ ವಿತರಣೆ ನಡೆಯಿತು.
ಬೆಂಗಳೂರು, ನ.18: ಕಾಂಗ್ರೆಸ್ ಮುಖಂಡರು ಹಲವು ದಶಕಗಳ ಕಾಲ ಆಳ್ವಿಕೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಗಳ ಬಗ್ಗೆ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದ್ದರು. ಈ ಸಮುದಾಯಗಳ ಕುರಿತು ಶಕುನಿ ವಾತ್ಸಲ್ಯವನ್ನು ಪ್ರದರ್ಶನ ಮಾಡಿದ್ದವು ಎಂದು ರಾಜ್ಯದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಟೀಕಿಸಿದರಲ್ಲದೆ, ಬಿಜೆಪಿ ನುಡಿದಂತೆ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಇದೇ 20ರಂದು ಬಿಜೆಪಿ ಎಸ್.ಟಿ. ಮೋರ್ಚಾ ನವಶಕ್ತಿ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ನ್ಯಾಯದ ವಿಚಾರದಲ್ಲಿ ನುಡಿದಂತೆ ನಡೆದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಮಾವೇಶವನ್ನು ಸಾಧನಾ ಸಮಾವೇಶದ ಮಾದರಿಯಲ್ಲಿ ಏರ್ಪಡಿಸಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು ಎಂದರು.
ಕಾಂಗ್ರೆಸ್ಸಿಗರು ಕಪಟ ರಾಜಕಾರಣ ಮಾಡಿದರು. ನಮ್ಮ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸಾಧನೆ ಸೊನ್ನೆ ಎಂದು ಟೀಕಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಬಿಜೆಪಿಯ ಶಕ್ತಿಯಾಗಿದ್ದವು. ಈಗಲೂ ಶಕ್ತಿಯಾಗಿಯೇ ಮುಂದುವರಿದಿದ್ದು, ಮುಂದೆಯೂ ಬಿಜೆಪಿಗೆ ಬೆಂಬಲ ಕೊಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದಿನ ಸಿಎಂ ಯಡಿಯೂರಪ್ಪ ಅವರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಪ್ರಕಟಿಸಿ ರಜೆ ಘೋಷಿಸಿದ್ದಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದರು. ಬಿಜೆಪಿ ಆಡಳಿತದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಗಂಗಾ ಕಲ್ಯಾಣ ಯೋಜನೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ಪರಿಶಿಷ್ಟ ವರ್ಗಗಳಿಗೆ ಸಚಿವಾಲಯ ಮಾಡಿ ಒಬ್ಬರು ಮಂತ್ರಿಯನ್ನಾಗಿ ನನಗೆ ಅವಕಾಶ ಕೊಟ್ಟಿದ್ದಾರೆ. ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲೂ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿಜಿಯವರು ಮಹರ್ಷಿ ವಾಲ್ಮೀಕಿ – ಕನಕದಾಸ ರವರ ಪುತ್ಥಳಿಗೆ ಗೌರವಾರ್ಪಣೆ ಮಾಡಿದ್ದು, ಹಿಂದುಳಿದ ಜಾತಿಗಳ ಏಳಿಗೆಗೆ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಧನ್ಯವಾದ ಸಮರ್ಪಿಸಿದರು. ಸಮಾವೇಶದಲ್ಲಿ ಬೊಮ್ಮಾಯಿ ಮತ್ತು ಮೋದಿಜಿ ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವೂ ನಡೆಯಲಿದೆ ಎಂದರು.
ಈ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ-ರಾಜ್ಯ ಸರಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಎಲ್ಲ ಪೂರ್ವತಯಾರಿ ನಡೆದಿದೆ ಎಂದು ವಿವರಿಸಿದರು.
ತಾಕತ್ತು-ಧಮ್ ಪ್ರದರ್ಶಿಸಿದ ಬಿಜೆಪಿ
2013ರಿಂದ 5 ವರ್ಷ ಸಿ.ಎಂ. ಆಗಿದ್ದ ಸಿದ್ದರಾಮಯ್ಯ, ತಾಕತ್ತು, ಧಮ್ ಬಗ್ಗೆ ಮಾತನಾಡುತ್ತಾರೆ. ತಾಕತ್ತು ಮತ್ತು ಧಮ್ ಇರುವ ಕಾರಣ ಬಿಜೆಪಿ ಎಸ್‍ಸಿ, ಎಸ್‍ಟಿ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಿದೆ. ನೀವು ಮೀಸಲಾತಿ ಹೆಚ್ಚಿಸಿಲ್ಲವೇಕೆ ಎಂದು ಕಾಂಗ್ರೆಸ್ ನಾಯಕರನ್ನು ಶ್ರೀರಾಮುಲು ಅವರು ಪ್ರಶ್ನಿಸಿದರು.
ಎಸ್‍ಸಿ, ಎಸ್‍ಟಿ ಸಮುದಾಯಗಳ ಮತ ಗಳಿಸಲು ಸುಳ್ಳು ಕಥೆಗಳ ಮೂಲಕ ಕಾಂಗ್ರೆಸ್ಸಿಗರು ಸುಳ್ಳು ಸಾಮ್ರಾಜ್ಯ ನಿರ್ಮಿಸುತ್ತಿದ್ದರು. ಹಿಂದುಳಿದ ಸಮಾಜಗಳಿಗೆ ಕಾಂಗ್ರೆಸ್ಸಿಗರ ಮೋಸ ಅರ್ಥವಾಗಿದೆ ಎಂದು ತಿಳಿಸಿದರು.
ಹೊಸ ವಾಹನಗಳ ನಂಬರ್ ಪ್ಲೇಟ್ ಮಾದರಿಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ರಾಜಕಾರಣ ಮಾಡುತ್ತ ಬಂದಿದ್ದಾರೆ. ಹಿಂದುಳಿದ ನಾಯಕರು, ವರ್ಗ, ಜನರ ಬಗ್ಗೆ ಮಾತನಾಡುವ ಅವರು, ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗಬೇಕೆನ್ನುತ್ತಾರೆ. ಅಹಿಂದಕ್ಕಾಗಿ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೀದರ್ ನಿಂದ ಚಾಮರಾಜನಗರದ ವರೆಗೆ ಪಕ್ಷದ ಈ ಸಮುದಾಯಗಳ ಕಾರ್ಯಕರ್ತರು, ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹಿರಿಯ ನಾಯಕರೂ ಭಾಗವಹಿಸುತ್ತಾರೆ ಎಂದು ತಿಳಿಸಿದರು. ಆರೋಗ್ಯ ವ್ಯವಸ್ಥೆ ನೋಡಿಕೊಳ್ಳಲು ಆಂಬುಲೆನ್ಸ್, ಆರೋಗ್ಯ ಕೇಂದ್ರವೂ ಇರಲಿದೆ ಎಂದು ವಿವರ ಕೊಟ್ಟರು.
10 ಸಾವಿರ ಬಸ್, 25 ಸಾವಿರ ಕ್ರೂಸರ್ ವ್ಯವಸ್ಥೆ:
ಸಮಾವೇಶದ ಯಶಸ್ವಿಗೆ 41 ಸಮಿತಿ ರಚಿಸಿದ್ದು, 5 ಸಾವಿರ ಕಾರ್ಯಕರ್ತರನ್ನು ಜೋಡಿಸಿದ್ದೇವೆ. 200ಕ್ಕೂ ಅಧಿಕ ಶೌಚಾಲಯಗಳಿರುತ್ತವೆ. 28 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. 8 ಸಾವಿರದಿಂದ 10 ಸಾವಿರ ಬಸ್ಸುಗಳು ಬರಲಿವೆ. 25 ಸಾವಿರ ಕ್ರೂಸರ್ ವಾಹನಗಳು, 10 ಸಾವಿರ ಕಾರುಗಳು, 25 ಸಾವಿರ ಬೈಕ್‍ಗಳು ಬರಲಿವೆ; 2 ಹೆಲಿಪ್ಯಾಡ್‍ಗಳೂ ಇರಲಿವೆ ಎಂದು ಶ್ರೀರಾಮುಲು ತಿಳಿಸಿದರು.
15ರಿಂದ 20 ಸಾವಿರ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಶಾಸಕ ಸೋಮಶೇಖರ ರೆಡ್ಡಿಯವರು ಕಾಲ್ನಡಿಗೆಯಲ್ಲಿ ಬರಲಿದ್ದಾರೆ. 160 ಕಲಾತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.
130 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯುತ್ತಿದೆ. ಸಮಾವೇಶದ ವೇದಿಕೆ ಮತ್ತು ಕಲಾವಿದರಿಂದ ಮನೋರಂಜನೆ ನೀಡುವ ವೇದಿಕೆ ರಚಿಸಲಾಗಿದೆ. 3.20 ಲಕ್ಷ ಚದರಡಿ ಪೆಂಡಾಲ್ ವ್ಯವಸ್ಥೆ ಮಾಡಿದ್ದೇವೆ. 1 ಲಕ್ಷ ಚದರ ಅಡಿಯಲ್ಲಿ ಅಡುಗೆ ಸಿದ್ಧಗೊಳ್ಳಲಿದೆ. ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಊಟದ ವ್ಯವಸ್ಥೆ ಮಾಡಲಿದ್ದೇವೆ. 300ಕ್ಕೂ ಹೆಚ್ಚು ಊಟದ ಕೌಂಟರ್ ಇರಲಿವೆ. 3 ಸಾವಿರ ಕಾರ್ಯಕರ್ತರು ಊಟದ ವ್ಯವಸ್ಥೆಗೆ ಸಹಕರಿಸಲಿದ್ದಾರೆ ಎಂದರು. ಬಿಜೆಪಿ ಸರಕಾರಗಳ ಜನಪರ ಕಾರ್ಯಕ್ರಮಗಳನ್ನು ಎಸ್‍ಸಿ, ಎಸ್‍ಟಿ ಸಮುದಾಯ ಮತ್ತು ಜನರಿಗೆ ತಿಳಿಸಲಾಗುತ್ತದೆ ಎಂದು ವಿವರಿಸಿದರು.
ಮೀಸಲಾತಿ ಹೆಚ್ಚಳವನ್ನು ಸಂಭ್ರಮಿಸುವ ಹಬ್ಬ – ಐತಿಹಾಸಿಕ ಸಮಾವೇಶ ಇದಾಗಲಿದೆ ಎಂದು ತಿಳಿಸಿದರು.
‘ನ ಭೂತೋ…’ ಎಂಬಂತೆ ಕಾರ್ಯಕ್ರಮ ನಡೆಯಲಿದೆ. ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸವಾದರೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಮನೆಮನೆಯೂ ಕೇಸರಿಮಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೆಕಾರ್, ನರಸಿಂಹ ನಾಯಕ, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ವೀರೇಂದ್ರ ಸಿಂಹ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮತ್ತು ಬಳ್ಳಾರಿ ಪ್ರಭಾರಿಗಳಾದ ಸಿದ್ದೇಶ್ ಯಾದವ್, ಬಳ್ಳಾರಿ ಜಿಲ್ಲಾಧ್ಯಕ್ಷ ಮುರಹರಿಗೌಡ, ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಬುಡ ಅಧ್ಯಕ್ಷ ಮಾರುತಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಬಸಲಿಂಗಪ್ಪ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಓಬಳೇಶ ಹೆಚ್., ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್. ದಿವಾಕರ್, ಹಿರಿಯರಾದ ಮಹಿಪಲ್ ಉಪಸ್ಥಿತರಿದ್ದರು.
ಉಡುಪಿ: ಪಕ್ಷದ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಾಧ್ಯಮ ವಿಭಾಗದ ‘ಚಿಂತನ ಮಂಥನ’ ವರ್ಗದೊಂದಿಗೆ ಮುಂಬರಲಿರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಜವಾಬ್ದಾರಿ ನಿರ್ವಹಿಸೋಣ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಮಾಧ್ಯಮ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮಾಧ್ಯಮ ತಂಡ ಮಂಡಲಾಧ್ಯಕ್ಷರ ನೇತೃತ್ವದಲ್ಲಿ ಪ್ರತೀ ಮಂಡಲಗಳ ಮಾಧ್ಯಮ ತಂಡದ ಸಭೆ ನಡೆಸಲಿದ್ದು, ವ್ಯವಸ್ಥಿತ ಮಾಧ್ಯಮ ನಿರ್ವಹಣೆಯ ಸಂವಹನದ ಜೊತೆಗೆ ಆಯಾ ಮಂಡಲ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಮುಖ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಕ್ರೋಡೀಕರಿಸಲಿದೆ.
ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ‘ಬಿಜೆಪಿ ಜಿಲ್ಲಾ ಮಾಧ್ಯಮ ಚಿಂತನ ಮಂಥನ ವರ್ಗ’ದಲ್ಲಿ ಜಿಲ್ಲಾ ವಕ್ತಾರರು, ಜಿಲ್ಲಾ ಸಹ ವಕ್ತಾರರು, ಜಿಲ್ಲಾ ಮಾಧ್ಯಮ ಸಂಚಾಲಕರು, ಸಹ ಸಂಚಾಲಕರು, ಸಮಿತಿ ಸದಸ್ಯರು ಹಾಗೂ ಮಂಡಲಗಳ ಮಾಧ್ಯಮ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸಮಿತಿ ಸದಸ್ಯರು ಮತ್ತು ಜಿಲ್ಲೆಯ ವಿವಿಧ ಮೋರ್ಚಾಗಳ ಮಾಧ್ಯಮ ಪ್ರಮುಖ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಜನಪರ ಯೋಜನೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿ, ವಿರೋಧ ಪಕ್ಷಗಳ ಅಸಹಾಯಕ ಮನಸ್ಥಿತಿಯ ಅಪಪ್ರಚಾರಕ್ಕೆ ತಕ್ಕ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಿಣಾಮಕಾರಿ ಮಾಧ್ಯಮ ನಿರ್ವಹಣೆಯ ಮೂಲಕ ಸದೃಢ ಪಕ್ಷ ಸಂಘಟನೆಗೆ ಪೂರಕ ಶಕ್ತಿಯಾಗಿ ತೊಡಗಿಸಿಕೊಳ್ಳೋಣ ಎಂದು ಕಿಣಿ ಹೇಳಿದರು.
ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಮತ್ತು ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮಾಧ್ಯಮ ನಿರ್ವಹಣೆ ಮತ್ತು ಸುದ್ಧಿ ಪ್ರಚಾರದ ಬಗ್ಗೆ ಸಂವಹನ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹ ವಕ್ತಾರ ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಮಿತಿ ಸದಸ್ಯರಾದ ವಿಜೇತ್ ಕುಮಾರ್ ಬೆಳ್ಳರ್ಪಾಡಿ, ವಿಜಯ ಶೆಟ್ಟಿ ಕೊಂಡಾಡಿ, ಶೈಲೇಶ್ ಹಿರೇಬೆಟ್ಟು, ಮಂಡಲಗಳ ಮಾಧ್ಯಮ ಸಂಚಾಲಕರಾದ ಆನಂದ್ ಸುವರ್ಣ ಮಠದಬೆಟ್ಟು, ಕಿಶೋರ್ ಕುಮಾರ್ ಕರಂಬಳ್ಳಿ, ಮಹೇಶ್ ಆಚಾರ್ಯ ಕೊಕ್ಕರ್ಣೆ, ಅಭಿಷೇಕ್ ಅಂಕದಕಟ್ಟೆ, ಸುರೇಂದ್ರ ಎಸ್. ಕಾಂಚನ್ ಕುಂದಾಪುರ ಉಪಸ್ಥಿತರಿದ್ದರು.
ಉಡುಪಿ, ನ.14: ರಾಷ್ಟ್ರೀಯ ಚಿಂತನೆ, ಸಿದ್ದಾಂತವನ್ನು ಒಳಗೊಂಡು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕಾಲ ಕಾಲಕ್ಕೆ ರಾಷ್ಟ್ರದ ಹಿತಕ್ಕಾಗಿ ಪಕ್ಷ ಮತ್ತು ಕಾರ್ಯಕರ್ತನ ಜವಾಬ್ದಾರಿಯನ್ನು ತಿಳಿಸುವ, ಮಾರ್ಗಸೂಚಿ ನೀಡುವ ವ್ಯವಸ್ಥೆಯೇ ಪ್ರಶಿಕ್ಷಣ ವರ್ಗ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ಮಣಿಪಾಲದ ಸರಳೇಬೆಟ್ಟು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಆರ್ಥಿಕವಾಗಿ ಹಿಂದುಳಿದವರಿಗೆ ದೊರಕಿದ ಸೌಲಭ್ಯಗಳು, ರಾಷ್ಟ್ರದ ಹಿತಕ್ಕಾಗಿ ಜಾರಿಗೊಳಿಸಿದ ಮಸೂದೆ, ಕಾನೂನುಗಳನ್ನು ಸಾಮಾನ್ಯ ನಾಗರಿಕನಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ನಾಯಕರು, ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರದ್ದಾಗಿದೆ ಎಂದರು.
75 ವರ್ಷಗಳ ಅವಧಿಯಲ್ಲಿ ಯಾರೂ ಮಾಡದೇ ಇರುವ ಪ.ಜಾತಿ ಮತ್ತು ಪ.ಪಂಗಡದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರದಿಂದ ದೊರಕುವ ಸೌಲಭ್ಯದಲ್ಲಿ ಯಾವುದೇ ಕಡಿತಗೊಳಿಸದೇ, ಪ.ಜಾತಿ ಮತ್ತು ಪ.ಪಂಗಡದ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು.
1.28 ಕೋಟಿ ಪ.ಜಾತಿ ಹಾಗೂ 68 ಲಕ್ಷ ಪ.ಪಂಗಡದ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಬಿಜೆಪಿ ಕಾರ್ಯಕರ್ತರು ತಲುಪಿ ಬಿಜೆಪಿ ಸರಕಾರ ಮೀಸಲಾತಿ ಹೆಚ್ಚಿಸಿದ್ದು, ಅದರಿಂದ ಯಾವೆಲ್ಲಾ ಲಾಭಗಳನ್ನು ಈ ವರ್ಗದವರು ಪಡೆಯಬಹುದು ಎಂಬ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.
ಮೀಸಲಾತಿ ಹೆಚ್ಚಿಸಿರುವುದರಿಂದ ವಾರ್ಷಿಕ ಪ.ಜಾತಿಯ ಜನತೆಗೆ 18,000 ಕೋಟಿ ರೂ. ಹಾಗೂ ಪ.ಪಂಗಡದ ಜನತೆಗೆ 10,500 ಕೋಟಿ ರೂ.ಯ ಅನುದಾನ ದೊರಕುತ್ತದೆ. 800 ಕೋಟಿ ರೂ. ವೆಚ್ಚದಲ್ಲಿ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದು, 24.50 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿವೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪ.ಜಾತಿ ಮತ್ತು ಪ.ಪಂಗಡದ ಮಹಿಳೆಯರನ್ನು ಕರೆದು ಒಗ್ಗೂಡಿಸಿ ಅವರ ನೋವುಗಳನ್ನು ಆಲಿಸಿ, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ತಿಳಿಸಿ, ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಪುವಿನ ಜನಸಂಕಲ್ಪ ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಹಾಗೂ ಉ.ಕ. ಜಿಲ್ಲೆಯ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆ ಮಾಡುವುದಾಗಿ ಘೋಷಿಸಿದರು. ಈ ಯೋಜನೆಗೆ ವಾರ್ಷಿಕ 132 ಕೋಟಿ ರೂ. ಖರ್ಚಾಗುತ್ತದೆ. ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ, ವಾರ್ಷಿಕ 12 ಲಕ್ಷ ಕ್ವಿಂಟಾಲ್ ಅಕ್ಕಿ, 17 ಲಕ್ಷ ಕ್ವಿಂಟಾಲ್ ಭತ್ತ ಬೇಕಾಗುತ್ತದೆ. ಎಮ್.ಓ.4, ಜಯಾ, ಜ್ಯೋತಿ, ಉಮಾ ಈ ನಾಲ್ಕು ತಳಿಯ ಭತ್ತವನ್ನು ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಕುಚ್ಚಲಕ್ಕಿ ವಿತರಣೆಯ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಖುದ್ದು ದಾಖಲೆಗಳಿಗೆ ಅನುಮತಿ ಕೊಡಿಸುವಲ್ಲಿ ಕೆಲಸ ಮಾಡಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ರವರು ಮುಖ್ಯಮಂತ್ರಿಗಳಿಗೆ ಒತ್ತಡವನ್ನು ಹೇರಿದ್ದರು ಎಂದರು.
ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಗೋಮಾಂಸವನ್ನು ಹುರಿದು ತಿಂದು ಪ್ರತಿಭಟನೆ ನಡೆಸಿದಾಗ ಯಾವ ಸರಕಾರ ಅಧಿಕಾರದಲ್ಲಿತ್ತು? ಗೋಮಾಂಸವನ್ನು ಸಾರ್ವಜನಿಕವಾಗಿ ಹುರಿದು ತಿಂದು ಪ್ರತಿಭಟನೆ ನಡೆಸಲು ಈಗ ಯಾರಿಗಾದರೂ ತಾಕತ್ತು ಇದೆಯಾ? ಎಂದು ಕೋಟ ಪ್ರಶ್ನಿಸಿದರು.
ಕೊರೋನಾ ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರಕಾರ ಯಶಸ್ವಿಯಾಗಿ ನಾಡಿನ ಜನತೆಯ ಆರೋಗ್ಯವನ್ನು ಕಾಪಾಡಲು ಯೋಜನೆಯನ್ನು ರೂಪಿಸಿದ್ದು, ನಂತರದ ದಿನಗಳಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸರಕಾರ ಆಡಳಿತದಲ್ಲಿ ಸುಧಾರಣೆಯೊಂದಿಗೆ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ರಾಷ್ಟ್ರೀಯತೆಯ ವಿಚಾರಧಾರೆಯನ್ನು ಒಳಗೊಂಡಿರುವ ಏಕೈಕ ರಾಷ್ಟ್ರೀಯ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಇಂದು ವಿರೋಧ ಪಕ್ಷಗಳ ನಿಷ್ಠೆ ಯಾವ ರೀತಿ ಇದೆ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಬಿಜೆಪಿಯಲ್ಲಿ ಪ್ರಶಿಕ್ಷಣ ವರ್ಗಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಶಿಕ್ಷಣ ವರ್ಗಗಳಲ್ಲಿ ದೊರೆಯುವ ಪಕ್ಷದ ತತ್ವ ಸಿದ್ಧಾಂತಗಳ ಅರಿವು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಯೋಜನೆಗಳ ಮಾಹಿತಿ ಮುಂತಾದವುಗಳು ಸಮರ್ಥ ನಾಯಕತ್ವ ರೂಪುಗೊಳ್ಳಲು ಪೂರಕ ಶಕ್ತಿಯಾಗಿ ಪರಿಣಮಿಸುತ್ತವೆ. ರಾಷ್ಟ್ರೀಯ ವಿಚಾರಧಾರೆ ಇರುವ ಬಿಜೆಪಿ ಆಡಳಿತಕ್ಕೆ ಬಂದಾಗ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಬಲ ಸಿಕ್ಕಿದಂತಾಗಿದೆ. ಮೋರ್ಚಾಗಳ ಕ್ರಿಯಾಶೀಲತೆ ಜಿಲ್ಲಾ ಮಟ್ಟದಲ್ಲಿ ಬಲಿಷ್ಠ ಪಕ್ಷ ಸಂಘಟನೆಗೆ ಪೂರಕವಾಗುತ್ತದೆ. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉತ್ತಮ ಕಾರ್ಯ ಚಟುವಟಿಕೆಗಳೊಂದಿಗೆ ಮಾದರಿ ಮೋರ್ಚಾ ಎಂದೆನಿಸಿಕೊಂಡಿದೆ. ಪಕ್ಷ ಸಂಘಟನೆ ಹಾಗೂ ಚುನಾವಣಾ ಕೆಲಸ ಕಾರ್ಯಗಳಲ್ಲಿ ಮಹಿಳಾ ಶಕ್ತಿಯ ಪಾತ್ರ ಅತ್ಯಮೂಲ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಸಹಿತ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸದೃಢ ಪಕ್ಷ ಸಂಘಟನೆಯೊಂದಿಗೆ ಮುಂಬರಲಿರುವ ವಿಧಾನಸಭೆ, ಲೋಕಸಭೆ ಸಹಿತ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಯಾತ್ರೆಯನ್ನು ಮುನ್ನಡೆಸಲು ಸರ್ವಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ಪ್ರಶಿಕ್ಷಣ ವರ್ಗದಲ್ಲಿ ದೊರೆಯುವ ಉಪಯುಕ್ತ ಮಾಹಿತಿಗಳನ್ನು ಮೈಗೂಡಿಸಿಕೊಂಡು ಎಲ್ಲಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿ ಪಕ್ಷ ಸಂಘಟನೆಗೆ ಹಾಗೂ ಚುನಾವಣಾ ಗೆಲುವಿಗೆ ಅತ್ಯಮೂಲ್ಯ ಕೊಡುಗೆ ನೀಡೋಣ ಎಂದರು.
ವೇದಿಕೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ಹಾಗೂ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರೇಳಿಯಾ, ಮಹಿಳಾ ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಸುಜಾಲ ಸತೀಶ್ ಧ್ಯೇಯ ಗೀತೆ ಹಾಡಿ, ಮಹಿಳಾ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಮಾಯಾ ಕಾಮತ್ ವಂದೇ ಮಾತರಂ ಗೀತೆ ಹಾಡಿದರು.
ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ಬಿ. ಶೆಟ್ಟಿ ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ನಡೆಯಿತು.