ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವ ರಾಜ್ಯ ಸರಕಾರದ ನಿರ್ಧಾರ ಸ್ವಾಗತಾರ್ಹ: ಕುಯಿಲಾಡಿ ಸುರೇಶ್ ನಾಯಕ್

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ರಾಜ್ಯ ಸರಕಾರ ಕೈಗೊಂಡಿರುವ ಐತಿಹಾಸಿಕ ನಿರ್ಣಯ ಸ್ವಾಗತಾರ್ಹ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಈ ಬಗ್ಗೆ ಮೊದಲ ಹಂತದಲ್ಲಿ ರೂ.15 ಕೋಟಿ ಅನುದಾನವನ್ನು ಮಂಜೂರು ಮಾಡಿರುವ ರಾಜ್ಯ ಸರಕಾರದ ದಿಟ್ಟ ಕ್ರಮ ಈಗಾಗಲೇ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಅಧಿನಿಯಮಕ್ಕೆ ಪೂರಕವೆನಿಸಲಿದೆ.

ಮನುಕುಲದ ನಿತ್ಯ ಜೀವನಕ್ಕೆ ವರದಾನವಾಗಿರುವ ಗೋವಿನ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಈ ಸಕಾಲಿಕ ನಿರ್ಣಯದಿಂದ ಅತೀ ಶೀಘ್ರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಅಸ್ತಿತ್ವಕ್ಕೆ ಬರುವ ಮೂಲಕ ರಾಜ್ಯದ ಸುಭಿಕ್ಷತೆಗೆ ನಾಂದಿ ಹಾಡಲಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸಂಕುಚಿತ ಮನೋಭಾವದಿಂದ ಹೊರಬರಲಿ : ಜಿಲ್ಲಾ ಬಿಜೆಪಿ

ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಜೂರಾಗಿರುವ ಆಹಾರ ಧಾನ್ಯಗಳ ಕಿಟ್ ಗಳ ದುರುಪಯೋಗವಾಗಿದೆ ಎಂಬ ಆರೋಪ ಕಾಂಗ್ರೆಸ್ ಪ್ರಾಯೋಜಿತ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್ ರವರ ರಾಜಕೀಯ ಗಿಮಿಕ್ ಅಲ್ಲದೆ ಮತ್ತೇನಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧಿಗಳು ಬಿಟ್ಟಿ ಪ್ರಚಾರಕ್ಕಾಗಿ ಇಂತಹ ಆಧಾರ ರಹಿತ ಆರೋಪ ಮಾಡುವುದು ಸಹಜ. ಕಾಂಗ್ರೆಸ್ ಸಂಕುಚಿತ ಮನೋಭಾವದಿಂದ ಹೊರಬರಲಿ ಎಂದು ಜಿಲ್ಲಾ ಬಿಜೆಪಿ ಹೇಳಿದೆ.

ಅಲೆವೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ್ ನಾಯಕ್ ರವರ ಮೇಲೆ ಪ್ರಸಕ್ತ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್ ಪೂರ್ವಾಪರ ತಿಳಿಯದೆ ಮಣಿಪಾಲ ಆರಕ್ಷಕ ಠಾಣೆಯಲ್ಲಿ ನೀಡಿರುವ ದೂರಿನ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಂತೆ ಅಲೆವೂರು ಗ್ರಾ.ಪಂ.ಗೂ ಕಾರ್ಮಿಕ ಇಲಾಖೆಯಿಂದ ಕಿಟ್ ಮಂಜೂರಾಗಿದ್ದು, 113 ಕಿಟ್ ಗಳನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಮ್ಮುಖದಲ್ಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆಗಳಿವೆ ಎಂಬ ಬಗ್ಗೆ ಈಗಾಗಲೇ ಅಲೆವೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ಪಷ್ಟೀಕರಣ ನೀಡಿದ್ದಾರೆ.

ರಾಷ್ಟ್ರ ಮತ್ತು ರಾಜ್ಯದೆಲ್ಲೆಡೆ ಸುಳ್ಳನ್ನೇ ಪ್ರತಿಪಾದಿಸುತ್ತಾ ಬಂದಿರುವ ಕಾಂಗ್ರೆಸ್ ಇದೀಗ ಗ್ರಾಮ ಪಂಚಾಯತ್ ಮಟ್ಟದಲ್ಲೂ ಇಂತಹದೇ ಚಾಳಿಯನ್ನು ಮುಂದುವರಿಸಿರುವುದು ಶೋಚನೀಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಭಾಂಶ ವಿತರಣೆ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ – ಶಾಸಕ ರಘುಪತಿ ಭಟ್ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಉಡುಪಿ ಅಂಬಾಗಿಲು ವಲಯ ವತಿಯಿಂದ ಪರಮಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ನಡೆಯುವ “ಲಾಭಾಂಶ ವಿತರಣೆ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ” ಉದ್ಘಾಟನೆಯನ್ನು ಜು.16ರಂದು ಶಾಸಕರಾದ ಕೆ.ರಘುಪತಿ ಭಟ್ ರವರು ನೆರವೇರಿಸಿದರು.*

*ಈ ಸಂದರ್ಭದಲ್ಲಿ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅಂಬಲಪಾಡಿ ಇದರ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಕರಾವಳಿ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸಮಿತಿ ಸದಸ್ಯರಾದ ಶಿವಕುಮಾರ್ ಅಂಬಲಪಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ತಾಲೂಕು ಯೋಜನಾಧಿಕಾರಿಗಳಾದ ರೋಹಿತ್ ಹೆಚ್., ಜನಜಾಗೃತಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ಅಂಬಾಗಿಲು ವಲಯ ಮೇಲ್ವಿಚಾರಕರಾದ ಜಯಕರ್, ಸೇವಾ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.*

ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಜಾರಿಗೆ ತರಲು ಮುಖ್ಯಮಂತ್ರಿಗಳಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶ್ವ ಜನಸಂಖ್ಯೆ ದಿನದ ಅಂಗವಾಗಿ ಹೊಸ ಜನಸಂಖ್ಯೆ ನೀತಿಯನ್ನು ಘೋಷಿಸಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಜಾರಿಗೆ ತರುವಂತೆ ಮುಖ್ಯಮಂತ್ರಿಗಳಲ್ಲಿ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಬಡತನ ನಿವಾರಣೆ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೇವೆಯ ಜೊತೆಗೆ ಹೊಸ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಈ ಕ್ರಮ ಅನಿವಾರ್ಯವೆನಿಸಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ನೂತನ ಪದಾಧಿಕಾರಿಗಳ ಪದಗ್ರಹಣ – ನೇಜಿ ನಾಟಿ ಸಮಾರೋಪ ಕಾರ್ಯಕ್ರಮ – ಶಾಸಕ ರಘುಪತಿ ಭಟ್ ಭಾಗಿ

ಕೇದಾರೋತ್ಥಾನ ಟ್ರಸ್ಟ್ ಮೂಲಕ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 20 ಎಕರೆ ಹಾಗೂ ಸ್ಥಳೀಯ ಕೃಷಿಕರ ಮೂಲಕ ಸುಮಾರು 15 ಎಕರೆ ಒಟ್ಟು 35 ಎಕರೆ ಹಡಿಲು ಭೂಮಿಯ ಕೃಷಿ ನಾಟಿ ಕಾರ್ಯ ಮುಕ್ತಾಯಗೊಂಡಿದೆ.

ಈ ನಿಟ್ಟಿನಲ್ಲಿ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ನೇತೃತ್ವದಲ್ಲಿ ಕುಂಜಗುಡ್ಡೆ ಬೈಲಿನ ಸುಮಾರು 1 ಎಕರೆ ಗದ್ದೆಯಲ್ಲಿ ಕೈ ನೇಜಿ ನೆಡುವ ಕಾರ್ಯಕ್ರಮವು ಕುಂಜಗುಡ್ಡೆ ಫ್ರೆಂಡ್ಸ್ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ನಡೆಯಿತು.

ಶಾಸಕ ಕೆ.ರಘುಪತಿ ಭಟ್ ಜು.11ರಂದು ಅಂಬಲಪಾಡಿ ಗ್ರಾಮದ ಹಡಿಲು ಗದ್ದೆಗಳ ನೇಜಿ ನಾಟಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ಕೆ.ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಸ್ಥಳೀಯ ಹಿರಿಯ ಕೃಷಿಕ ಸಂಜೀವ ಶೆಟ್ಟಿ, ಕುಂಜಗುಡ್ಡೆ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮೋತ್ಥಾನ ಸಮಿತಿಯ ಪದಾಧಿಕಾರಿಗಳು, ಕುಂಜಗುಡ್ಡೆ ಫ್ರೆಂಡ್ಸ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಉದ್ಘಾಟನೆ, ಕುಂಜಗುಡ್ಡೆಯಲ್ಲಿ ಕೈ ನೇಜಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಅಂಬಲಪಾಡಿ ಕುಂಜಗುಡ್ಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬಲಪಾಡಿ
ಗ್ರಾಮೋತ್ಥಾನ ಸಮಿತಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಚಾಲನೆ ನೀಡಿದರು.

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಸ್ಥಳೀಯ ಹಿರಿಯ ಕೃಷಿಕ ಸಂಜೀವ ಶೆಟ್ಟಿ, ಕುಂಜಗುಡ್ಡೆ ಫ್ರೆಂಡ್ಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಗ್ರಾಮೋತ್ಥಾನ ಸಮಿತಿ ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಹರೀಶ್ ಆಚಾರ್ಯ, ವಿನೋದ್ ಪೂಜಾರಿ, ಅಣ್ಣು ಪದ್ಮನಾಭ ಜತ್ತನ್, ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಭಾರತಿ ಭಾಸ್ಕರ್, ಸುಜಾತಾ ಶೆಟ್ಟಿ, ಕುಸುಮ, ಸುಮಂಗಲ ಹಾಗೂ ಗ್ರಾಮೋತ್ಥಾನ ಸಮಿತಿಯ ಸದಸ್ಯರು, ಕುಂಜಗುಡ್ಡೆ ಫ್ರೆಂಡ್ಸ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಆಶ್ರಯದಲ್ಲಿ ನಡೆದ ಹಡಿಲು ಭೂಮಿ ಅಭಿಯಾನದಡಿ ಟ್ರಸ್ಟ್ ಮತ್ತು ಕೃಷಿಕರಿಂದ ಅಂಬಲಪಾಡಿ ಗ್ರಾಮದಲ್ಲಿ ಸುಮಾರು 35 ಎಕ್ರೆ ಹಡಿಲು ಭೂಮಿ ಕೃಷಿ ಚಟುವಟಿಕೆ ನಡೆದಿದ್ದು, ಇದರ ಕೊನೆಯ ಭಾಗವಾಗಿ ಅಂಬಲಪಾಡಿ ಕುಂಜಗುಡ್ಡೆ ಪ್ರದೇಶದಲ್ಲಿ ಸುಮಾರು 1 ಎಕ್ರೆಗೂ ಮಿಕ್ಕಿ ಹಡಿಲು ಗದ್ದೆಯಲ್ಲಿ ಕೈ ನೇಜಿ ನೆಡುವ ಕಾರ್ಯಕ್ರಮಕ್ಕೆ ಕೇದಾರೋತ್ಥಾನ ಟ್ರಸ್ಟ್(ರಿ.) ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಚಾಲನೆ ನೀಡಿದರು.

ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಮತ್ತು ಕುಂಜಗುಡ್ಡೆ ಫ್ರೆಂಡ್ಸ್ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಕೈ ನೇಜಿ ನೆಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇಶದ್ರೋಹಕ್ಕೆ ಸಹಾಯ ಮಾಡಿದ ಬಗ್ಗೆ ಪ್ರಕರಣ ದಾಖಲಿಸುವಂತೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಾಧಾಕೃಷ್ಣ ನಾಯಕ್ ಹಿರ್ಗಾನ ಎಂಬವರು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಯೋಧರ ಬಗ್ಗೆ ಅವಹೇಳನಕಾರಿ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲಿಸಿ ಭಾರತ ದೇಶಕ್ಕೆ ಕೆಡುಕು ಉಂಟುಮಾಡುವ ಸಂದೇಶವನ್ನು ಬಿತ್ತರಿಸಿರುವಂತೆ ಈ ಬಗ್ಗೆ ಅವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಟ್ವೀಟರ್ ಖಾತೆಯಲ್ಲಿ ದೇಶದ್ರೋಹಿ ರಾಧಾಕೃಷ್ಣ ನಾಯಕ್ ನಿಗೆ ಬೆಂಬಲ ಸೂಚಿಸಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ಓರ್ವ ದೇಶದ್ರೋಹಿಯ ದೇಶದ್ರೋಹ ಮತ್ತು ಭಾರತೀಯ ಯೋಧರ ಬಗ್ಗೆ ಕೊಲೆ ಮಾಡುವ ಪಿತೂರಿ ಹೊಂದಿರುವ ವ್ಯಕ್ತಿಗೆ ಸಹಕರಿಸಿರುವುದು ಮೇಲ್ನೋಟಕ್ಕೆ ಸಾಬೀತು ಕಂಡುಬಂದಿರುತ್ತದೆ.

ಈ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ದೇಶದ್ರೋಹಕ್ಕೆ ಸಹಾಯ ಮಾಡಿದ ಮತ್ತು ದೇಶದ್ರೋಹಕ್ಕೆ ಪ್ರಚೋದನೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪಸರಿಸುತ್ತಿರುವ ಐಪಿಸಿ ಸೆಕ್ಷನ್ 124ಎ ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ ಎಸ್. ಕಲ್ಮಾಡಿ, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಸಹ ವಕ್ತಾರರಾದ ಗಿರೀಶ್ ಎಮ್. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಅತ್ರಾಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉಪಾಧ್ಯಕ್ಷೆ ವಿದ್ಯಾ ಪೈ, ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹರೀಶ್, ಉಡುಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ಅಲೆವೂರು ಮುಂತಾದವರು ಉಪಸ್ಥಿತರಿದ್ದರು.

ಶೋಭಾ ಕರಂದ್ಲಾಜೆ ಸಹಿತ ನೂತನ ಕೇಂದ್ರ ಸಚಿವರಿಗೆ ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ : ಕುಯಿಲಾಡಿ

ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಪ್ರಾರಂಭಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪರಿವಾರದ ಕಟ್ಟಾಳುವಾಗಿ ಸೇವೆ ಸಲ್ಲಿಸಿ, ಸುಮಾರು 25 ವರ್ಷಕ್ಕೂ ಮಿಕ್ಕಿದ ರಾಜಕೀಯ ಕ್ಷೇತ್ರದ ಅನುಭವದೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದ ಮಾದರಿ ಇಂಧನ ಸಚಿವೆಯಾಗಿ, ಯಶಸ್ವಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ, 2 ಅವಧಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕ್ರಿಯಾಶೀಲ ಸಂಸದೆಯಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಶೋಭಾ ಕರಂದ್ಲಾಜೆ ಇಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿ ನೇಮಕಗೊಂಡಿರುವುದು ಅತೀವ ಸಂತಸ ತಂದಿದೆ. ಇದು ಪಕ್ಷದ ಎಲ್ಲಾ ನಿಷ್ಠಾವಂತ ಕಾರ್ಯಕರ್ತರಿಗೆ ಸಂದ ಗೌರವ.

ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಬದ್ಧತೆ ಮತ್ತು ನಿಷ್ಠೆಯಿಂದ ನಿಭಾಯಿಸಿಕೊಂಡು ಬಂದಿರುವ ಶೋಭಾ ಕರಂದ್ಲಾಜೆಯವರು ನೂತನ ಕೇಂದ್ರ ಸಚಿವೆ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮೋದಿ ಸಂಪುಟದ ಒಟ್ಟು 43 ನೂತನ ಸಚಿವರಲ್ಲಿ 36 ಹೊಸ ಮುಖಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಶೋಭಾ ಕರಂದ್ಲಾಜೆ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ.ನಾರಾಯಣ ಸ್ವಾಮಿ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಜವಾಬ್ದಾರಿ ಸ್ವೀಕರಿಸಿರುವ ಕರ್ನಾಟಕದ ಈ ಎಲ್ಲಾ ನಾಲ್ಕು ನೂತನ ಕೇಂದ್ರ ಸಚಿವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಾರ್ದಿಕ ಅಭಿನಂದನೆಗಳು. ತಮ್ಮ ಅಧಿಕಾರದ ಅವಧಿಯಲ್ಲಿ ಖಾತೆಗಳ ಯಶಸ್ವಿ ನಿರ್ವಹಣೆಯೊಂದಿಗೆ ಸಾರ್ಥಕ ಜನಸೇವೆಗೈಯುವಂತಾಗಲಿ ಎಂದು ಕುಯಿಲಾಡಿ ಹಾರೈಸಿದ್ದಾರೆ.

ಕಾಪು ಪುರಸಭಾ ಚುನಾವಣೆಗೆ ಬಿಜೆಪಿ ಪೂರ್ವತಯಾರಿ ಸಭೆ

ಕಾಪು ಪುರಸಭಾ ಚುನಾವಣೆ ಹಾಗೂ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು ಅಧ್ಯಕ್ಷತೆಯಲ್ಲಿ ಕಾಪುವಿನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಪುರಸಭಾ ಚುನಾವಣಾ ಪೂರ್ವ ತಯಾರಿಯ ಬಗ್ಗೆ ಹಾಗೂ ಬೂತ್ ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾಗಿರುವ ಅಗತ್ಯ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮುಂದಿನ ಚುನಾವಣೆಯನ್ನು ಗೆಲ್ಲುವ ಕುರಿತ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಹಾ ಶಕ್ತಿಕೇಂದ್ರ ಅಧ್ಯಕ್ಷ ಸಂದೀಪ್ ಶೆಟ್ಟಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ‌ ಶೆಟ್ಟಿ, ಕಾಪು ಪುರಸಭಾ ಉಸ್ತುವಾರಿ ಮಾಲಿನಿ ಶೆಟ್ಟಿ, ಬೂತ್ ಅಧ್ಯಕ್ಷರುಗಳು, ಪುರಸಭಾ ಮಾಜಿ ಸದಸ್ಯರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಾರ್ಮಾಡಿಯಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಗೆ ಡಾ. ಹೆಗ್ಗಡೆಯವರಿಂದ ಚಾಲನೆ. 20 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚಿನ ಹಣ್ಣಿನ ಬೀಜ ಬಿತ್ತನೆ ಕಾರ್ಯ

ಚಾರ್ಮಾಡಿ : ಚಾರ್ಮಾಡಿಯ ಕಣ್ಣಪ್ಪಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮತ್ತು ತರಕಾರಿ ಗಿಡಗಳ ಬೀಜದುಂಡೆಗಳನ್ನು ಹಾಕುವ ಮೂಲಕ ‘ಸಾಮಾಜಿಕ ಅರಣ್ಯೀಕರಣ’ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

ಚಾರ್ಮಾಡಿಯ ಕನಪ್ಪಾಡಿ ಮೀಸಲು ಅರಣ್ಯ ಪ್ರದೇಶದ ಸುಮಾರು 20 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳ ಬಿತ್ತನೆ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿತು. ಮಾವು, ಹಲಸು, ಹೆಬ್ಬಲಸು, ನೇರಳೆ, ಕಾನಾಜೆ ಸೇರಿದಂತೆ ಹಲವು ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಬೀಜದುಂಡೆಗಳಾಗಿ ಪರಿವರ್ತಿಸಿ ಭೂಮಿಗಿಳಿಸಲಾಯಿತು.

ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳಿಗೆ ಕಾಡಿನಲ್ಲೇ ಆಹಾರ ದೊರಕಬೇಕೆನ್ನುವ ಉದ್ದೇಶದಿಂದ ಧರ್ಮಸ್ಥಳದಲ್ಲಿ ಇತ್ತೀಚೆಗೆ ಅರಣ್ಯ ಸಚಿವರಿಂದ ‘ಸಾಮಾಜಿಕ ಅರಣ್ಯೀಕರಣ ’ ಯೋಜನೆಗೆ ಚಾಲನೆ ನೀಡಲಾಗಿತ್ತು. ಬಯಲು ಪ್ರದೇಶ ಮತ್ತು ಖಾಲಿ ಜಾಗಗಳಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಮತ್ತು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಬೀಜಗಳನ್ನು ಎಸೆಯುವ ಮೂಲಕ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ.

ಈ ಸಂದರ್ಭದಲ್ಲಿ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್ ,ಸುರೇಂದ್ರ ಕುಮಾರ್ ಅವರ ಮಗಳು ಶ್ರುತಾ ಜಿತೇಶ್, ಶ್ರೀ.ಕ್ಷೇ. ಧ. ಗ್ರಾ. ಯೋಜನೆಯ ಮುಖ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಾಸ್, ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಾದೇಶಿಕ ನಿರ್ದೇಶಕ ಜೈವಂತ್ ಪಟಗಾರ್, ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ, ಚಾರ್ಮಾಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಉಮೇಶ್ ಗೌಡ, ಚಾರ್ಮಾಡಿ ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಾಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ, ವೀರು ಶೆಟ್ಟಿ ಧರ್ಮಸ್ಥಳ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ತಂಗಡಿಯ ಸದಸ್ಯರು, ಚಾರ್ಮಾಡಿ ಪೆಂಟ್ರೋಲ್ ಬಂಕ್ ಮಾಲಕ ಅನಂತ ಭಟ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗಿಗಳಾದರು.

ವರದಿ : ಸ್ವಸ್ತಿಕ್ ಕನ್ಯಾಡಿ

Design a site like this with WordPress.com
Get started