
ಉಡುಪಿ: ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕೃತಿ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಯನ್ ಮಲ್ಪೆ ಅವರ ನಡೆ ರಾಜಕೀಯ ಪ್ರೇರಿತ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಜಯನ್ ಮಲ್ಪೆ ಅವರು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾಗೆ ಏನೂ ತಿಳಿದಿಲ್ಲವೆಂಬಂತೆ ಹೇಳಿಕೆ ನೀಡಿರುವುದು ದುರದೃಷ್ಟಕರವಾಗಿದೆ. ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯವಾದಕ್ಕೆ ಗೌರವ, ಮನ್ನಣೆ ನೀಡುವ ತಂಡವಾಗಿದೆ. ಈ ಹಿಂದೆ ಕಾಂಗ್ರೆಸ್ ಸರಕಾರಗಳು ಆಡಳಿತದಲ್ಲಿದ್ದಾಗ ಡಾ! ಬಿ.ಆರ್. ಅಂಬೇಡ್ಕರ್ ಅವರಿಗೆ ಎಷ್ಟೆಲ್ಲ ಅನ್ಯಾಯ ಮಾಡಿತ್ತು ಎಂಬುದು ಜಗತ್ತಿಗೇ ತಿಳಿದಿದೆ.
ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಸ್ವತಃ ನೆಹರೂರವರೇ ಅವರ ವಿರುದ್ದ ಪ್ರಚಾರ ಕಾರ್ಯ ನಡೆಸಿ ಸೋಲಿಸಿದರು. ಅವಕಾಶ ಸಿಕ್ಕಲ್ಲೆಲ್ಲ ಅವಮಾನ ಮಾಡಿದ್ದರು. ಅವರು ನಿಧನ ಹೊಂದಿದಾಗ ದೆಹಲಿಯಲ್ಲಿ ಅವರ ಶವ ಸಂಸ್ಕಾರಕ್ಕೂ ಕನಿಷ್ಠ ಜಾಗವನ್ನೂ ನೀಡಲಿಲ್ಲ ಎನ್ನುವುದನ್ನು ನಮ್ಮ ಸಮಾಜ ಮರೆಯಲು ಸಾಧ್ಯವೇ? ಗಾಂಧಿ ಕುಟುಂಬಕ್ಕೆ ಎಕ್ರೆಗಟ್ಟಲೆ ಜಾಗ ಕೊಟ್ಟವರು ಅಂಬೇಡ್ಕರ್ ಅವರಿಗೆ ಕೊಡದಿರುವದನ್ನು ನಾವು ಮರೆಯಲುಂಟೆ? ಎಂದು ದಿನಕರ ಬಾಬು ಪ್ರಶ್ನಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯೊಂದಿಗೆ ಗರಿಷ್ಠ ಗೌರವ ನೀಡಿದ್ದು ನಮ್ಮ ಭಾರತಿಯ ಜನತಾ ಪಾರ್ಟಿ. ಅಂಬೇಡ್ಕರ್ ಅವರ ಜೀವಿತಾವಧಿಯ ಐದು ಪ್ರಮುಖ ಸ್ಥಳಗಳನ್ನು ‘ಪಂಚತೀರ್ಥ’ಗಳ ಹೆಸರಿನಲ್ಲಿ ಅಭಿವೃದ್ಧಿಪಡಿಸಿ ಅವರ ಸ್ವಾಭಿಮಾನ, ಆತ್ಮಗೌರವವನ್ನು ಬಾನೆತ್ತರಕ್ಕೇರಿಸಿರುವುದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು.
ಬಿಜೆಪಿ ಮೀಸಲಾತಿ ವಿರೋಧಿ ಎಂದು ಎಷ್ಟೇ ಅಪಪ್ರಚಾರ ಮಾಡಿದರೂ ಮೀಸಲಾತಿಯನ್ನು ಇನ್ನೂ ಹತ್ತು ವರ್ಷಕ್ಕೆ ಏರಿಸಿದವರು ವಿಶ್ವ ನಾಯಕರೆನಿಸಿದ ಪ್ರಧಾನಿ ಮೋದಿಯವರು. ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲೇ ಎಸ್.ಸಿ. ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಿರುವುದು.
ಇನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಅಂಬೇಡ್ಕರ್ ಅವರು ಸಂವಿಧಾನಬದ್ದವಾಗಿ ನಮಗೆ ಕೊಟ್ಟ ಹಕ್ಕು. ಅದರ ಅರಿವಿದ್ದರೂ ನಾಟಕ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸುವ ನಿಮ್ಮ ಉದ್ದೇಶವೇನು? ಈ ನಾಟಕದಲ್ಲಿ ಕಾಂಗ್ರೆಸ್ ನವರು ಮುಚ್ಚಿಟ್ಟ ಅಪ್ಪಟ ಸತ್ಯಗಳ ಅನಾವರಣವಿದೆ. ಅದನ್ನು ಜನರಿಗೆ ತಿಳಿಸಿದರೆ ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಗೆ ತೊಂದರೆಯಾಗುವುದು ಎಂಬ ಭಯ ಅವರಿಗಿರಬೇಕೇ ಹೊರತು ನಿಮಗ್ಯಾಕೆ ಎಂಬುದು ತಿಳಿಯುತ್ತಿಲ್ಲ. ಅಲ್ಲದೇ ಇದರಲ್ಲಿ ಸುಳ್ಳು ಅಂಶಗಳಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಕೇವಲ ಪ್ರಚಾರದ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸುವುದು ಸರಿಯೇ? ಆರ್ಟಿಕಲ್ 370ಕ್ಕೆ ಅಂಬೇಡ್ಕರ್ ಅವರು ಎಷ್ಟು ವಿರೋಧ ವ್ಯಕ್ತಪಡಿಸಿದರೂ ಕಾಂಗ್ರೆಸ್ ಅದನ್ನು ಸಂವಿಧಾನದಲ್ಲಿ ಅಳವಡಿಸಿ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿತ್ತು. ಇದನ್ನು ನಾವು ಎಲ್ಲಿ ಮಾತನಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲ ಸತ್ಯ ವಿಚಾರಗಳು ಜಗಜ್ಜಾಹೀರಾಗಿದ್ದರೂ ನೀವು ಇದರ ಬಗ್ಗೆ ಸ್ವಲ್ಪವೂ ಮಾತನಾಡದಿರಲು ಕಾರಣವೇನು? ಎಂದು ದಿನಕರ ಬಾಬು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ.