
ಉಡುಪಿ: ಡಿ.23ರಂದು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಭವನದಲ್ಲಿ ಹಮ್ಮಿಕೊಂಡಿರುವ ‘ನಿಜ ಮಹಾತ್ಮ ಬಾಬಾ ಸಾಹೇಬ’ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸದ್ರಿ ನಾಟಕ ಪ್ರದರ್ಶನವನ್ನು ವಿರೋಧಿಸಿ ದಸಂಸ ಜಿಲ್ಲಾ ನಾಯಕ ಜಯನ್ ಮಲ್ಪೆ ಅವರು ಆಕ್ಷೇಪಣೆ ಸಲ್ಲಿಸಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಲಭ್ಯವಾಗಿದ್ದು, ಈ ಆಕ್ಷೇಪಣೆಗೆ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಸಂಪೂರ್ಣ ವಿರೋಧ ಇರುತ್ತದೆ. ಈ ನಾಟಕದಲ್ಲಿ ಯಾವುದೇ ಸುಳ್ಳು ಅಂಶಗಳನ್ನು ಸೇರಿಸಲಾಗಿಲ್ಲ. ಈ ನಾಟಕವು ರಾಜ್ಯಾದ್ಯಂತ ಈಗಾಗಲೇ 22 ಪ್ರದರ್ಶನಗಳನ್ನು ಕಂಡಿದ್ದು ಇದು 23ನೇ ಪ್ರದರ್ಶನವಾಗಿದೆ. ಇಲ್ಲಿಯವರೆಗೆ ಯಾವುದೇ ಸ್ಥಳಗಳಲ್ಲಿ ಜಯನ್ ಮಲ್ಪೆ ಅವರು ಅಂದುಕೊಂಡಿರುವ ಹಾಗೆ ಯಾವುದೇ ಗಲಭೆಗಳಾಗಿಲ್ಲ. ಈ ನಾಟಕದಲ್ಲಿನ ಎಲ್ಲ ವಿಷಯಗಳು ಇತಿಹಾಸದಲ್ಲಿ ದಾಖಲಾಗಿರುವಂತಹ ವಿಷಯಗಳೇ ಆಗಿವೆ. ಬೇಕಾದಲ್ಲಿ ಈ ನಾಟಕ ವೀಕ್ಷಣೆಗೆ ಜಯನ್ ಮಲ್ಪೆ ಅವರೂ ಆಗಮಿಸಿ ವೀಕ್ಷಿಸಿ ಅದರಲ್ಲಿ ಏನಾದರೂ ಅಂಶಗಳು ಸುಳ್ಳೆಂದು ಕಂಡುಬಂದಲ್ಲಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಮೊಕದ್ದಮೆ ದಾಖಲಿಸುವ ಎಲ್ಲ ಅವಕಾಶಗಳು ಅವರಿಗಿದೆ. ಅದಲ್ಲದೆ ಈ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿದಲ್ಲಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಬಹುದೆಂಬ ಅವರ ದೂರು ಅತ್ಯಂತ ಬಾಲಿಷವಾದುದು. ಇಡೀ ರಾಜ್ಯದಲ್ಲಿ ಆಗದ ಗಲಭೆ ಇಲ್ಲಿ ಆಗುವುದೆಂಬ ಅವರ ಹೇಳಿಕೆಯ ಹಿಂದೆ ಯಾವ ದುರುದ್ದೇಶ ಇದೆಯೋ ನಮಗೆ ತಿಳಿಯದು. ಅಲ್ಲದೆ ಇದು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಾಗಿರುತ್ತದೆ ಎನ್ನುವುದು ನಮ್ಮ ಭಾವನೆಯಾಗಿದೆ.
ಜಯನ್ ಮಲ್ಪೆ ಅವರ ಆಕ್ಷೇಪಣೆಯನ್ನು ತಿರಸ್ಕರಿಸಿ, ಸತ್ಯ ವಿಚಾರಗಳನ್ನು ಹೊಂದಿರುವ ಈ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರ ಪಂಚವಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಜಿಲ್ಲಾ ಎಸ್.ಸಿ. ಮೋರ್ಚಾ ಉಪಾಧ್ಯಕ್ಷರಾದ ಸದಾನಂದ ಕಾಪು, ಸೋಮನಾಥ್ ಕಟ್ಟೆಗುಡ್ಡೆ, ಜಿಲ್ಲಾ ಎಸ್.ಸಿ. ಮೋರ್ಚಾ ಕಾರ್ಯದರ್ಶಿಗಳಾದ ಜಯರಾಜ್, ಧನರಾಜ್ ಕಾಪು ಉಪಸ್ಥಿತರಿದ್ದರು.