ಕಾಪು: ಕಾಂಗ್ರೆಸ್ ಪಕ್ಷದವರು ಆರೋಪಿಸಿದಂತೆ ನಮ್ಮ ಸಂಘದಲ್ಲಿ ಯಾವುದೇ ಅವ್ಯವಹಾರ ಆಗಿರುವುದಿಲ್ಲ. ಇತ್ತೀಚೆಗೆ ನಡೆದ ನಕಲಿ ದಾಖಲೆಗಳನ್ನು ನೀಡಿ ಪಡೆದ ಸಾಲದ ಬಗ್ಗೆ ನಾವು ಈಗಾಗಲೇ ಇಲಾಖಾ ಮುಖ್ಯಸ್ಥರಿಗೂ ದೂರನ್ನು ನೀಡಿದ್ದು.ಮಾತ್ರವಲ್ಲ ಕಾಪು ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರನ್ನು ದಾಖಲಿಸಿ, ತನಿಖೆಯೂ ನಡೆಯುತ್ತಿದ್ದು. ಇಷ್ಟೆಲ್ಲ ಆದಮೇಲೂ ಅವ್ಯವಹಾರ ಆಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಪ್ರತಿಭಟನೆಯಲ್ಲಿ ಸಂಘದ ವ್ಯಾಪ್ತಿಗೆ ಬಾರದವರು ಸಂಘದಲ್ಲಿ ಸಾಲಬಾಕಿ ಇಟ್ಟವರೂ ಕೂಡ ಭಾಗವಹಿಸಿದ್ದು ಇವರ ಉದ್ದೇಶ ಸಂಘದ ಅಭಿವೃದ್ದಿಯೋ ಅಥವಾ ಸಂಘವನ್ನು ಅಧ:ಪತನಕ್ಕೆ ತಳ್ಳುವುದೋ ತಿಳಿಯುತ್ತಿಲ್ಲ. ಸಂಘದ ಎಲ್ಲಾ ಗ್ರಾಹಕ ಸದಸ್ಯರ ಗಮನಕ್ಕೆ ತರುವುದೇನೆಂದರೆ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲವೆಂದೂ ಇದು ಕೇವಲ ಕಾಂಗ್ರೆಸ್ ನವರ ಪಿತೂರಿ ಎಂದೂ ಸಂಘದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.