ಕಾರ್ಕಳದಲ್ಲಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿದ ಕಾಮಾಂಧರ ಅಟ್ಟಹಾಸ ಖಂಡನೀಯ : ರೇಷ್ಮಾ ಉದಯ ಶೆಟ್ಟಿ



ಕಾರ್ಕಳದ ಕುಕ್ಕುಂದೂರಿನಲ್ಲಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿದ ಬೀಬತ್ಸ್ಯ ಘಟನೆ ನಾಗರಿಕ ಸಮಾಜ ಬೆಚ್ಚಿ ಬೀಳುವಂತೆ ಮಾಡಿದೆ. ಸಮಾಜ ವಿದ್ರೋಹಿ ಕಾಮಾಂಧರ ಅಟ್ಟಹಾಸ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಹಿನ್ನೆಲೆ ಹಾಗೂ ಅವರಿಗಿರುವ ಮಾದಕ ವಸ್ತು ಜಾಲದ ನಂಟಿನ ಬಗ್ಗೆಯೂ ಪೊಲೀಸ್ ಇಲಾಖೆ ಕೂಲಂಕುಷ ತನಿಖೆ ನಡೆಸಬೇಕಾಗಿದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹುಬ್ಬಳ್ಳಿಯ ನೇಹಾ ಹತ್ಯೆ, ಬೆಳಗಾವಿ ಪ್ರಕರಣ ಸಹಿತ ರಾಜ್ಯದೆಲ್ಲೆಡೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಿಂದ ರಾಜ್ಯದಲ್ಲಿ ಮಹಿಳೆಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ.

ಸುಸಂಸ್ಕೃತರ ನಾಡು ಎನಿಸಿಕೊಂಡಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಜಿಲ್ಲೆಗೆ ಕಳಂಕ ತಂದಿದೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಹೆಡೆಮುರಿ ಕಟ್ಟುವ ಜೊತೆಗೆ ಮಹಿಳೆಯರಿಗೆ ರಕ್ಷಣೆ ನೀಡುವ ಸತ್ಕಾರ್ಯ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಆಗಬೇಕಿದೆ.

ಪೋಲಿಸ್ ಇಲಾಖೆ ಮಾದಕ ವಸ್ತುಗಳ ನಿಗ್ರಹದ ಜೊತೆಗೆ ಸದ್ರಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ, ಅಪರಾಧಿಗಳಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a comment

Design a site like this with WordPress.com
Get started