
ಕಾಪು: ಪಡುಬಿದ್ರೆ ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕದ ಬಳಿ ಟೋಲ್ ನಿರ್ಮಾಣವಾಗುವ ಲಕ್ಷಣದಿಂದ ಸಿಡಿದೆದ್ದ ಕಾಪು ಹಾಗೂ ಕಾರ್ಕಳ ಕ್ಷೇತ್ರದ ಜನತೆ ಶ್ರೀ ಸುಹಾಸ್ ಹೆಗ್ಡೆ ಇವರ ನೇತ್ರತ್ವದಲ್ಲಿ ಸಂಘಟಿತರಾಗಿ ಹೋರಾಟ ಮಾಡಿ ಗ್ರಾಮ ಗ್ರಾಮಗಳಲ್ಲಿ ಜನಬೆಂಬಲ ಪಡೆದು ಕಾರ್ಯೋನ್ಮುಖರಾಗಿದ್ದು ಇದರ ಕಾರ್ಯವೈಖರಿಗೆ ರಾಜ್ಯ ಸರಕಾರವೇ ಬೆಚ್ಚಿಬಿದ್ದಿದ್ದು ಈ ಟೋಲ್ ಬಹುತೇಕ ರದ್ದುಗೊಳ್ಳುವ ಹಂತದಲ್ಲಿರುವಾಗ ಮಾನ್ಯ ಕಾಪುವಿನ ಮಾಜಿ ಸಚಿವರು, ಪಸ್ತುತ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರೂ ಆಗಿರುವ ಎಲ್ಲದರಲ್ಲೂ ರಾಜಕಾರಣ ಬೆಸರಸುವ ಕೆಟ್ಟ ಚಟ ಹೊಂದಿರುವ ಸೊರಕೆಯವರು ತಮ್ಮ ರಾಜಕೀಯ ಬೇಳೆ ಬೇಯಿಸಲು ಪ್ರಾರಂಭಿಸಿ ಇಂದು ಅದರ ವಿರುಧ್ದ ಕಾಂಗ್ರೆಸ್ ನೇತ್ರತ್ವದಲ್ಲಿ ಬ್ರಹತ್ ಪ್ರತಿಭಟನೆ ಎನ್ನುವ ನಾಟಕ ಆರಂಭಿಸಿದ್ದಾರೆ. ಸೊರಕೆಯವರೇ ಯಾರ ವಿರುಧ್ಧ ನಿಮ್ಮ ಪ್ರತಿಭಟನೆ ಎಂದು ಮೊದಲು ಸ್ಪಷ್ಟಪಡಿಸಿ. ಮೊನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ನಿಮಗೆ ಹೇಳದೇ ಟೋಲ್ ನಡೆಸಲು ಉದ್ದೇಶಿಸಿದ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ ಸಿಟ್ಟಿಗೆ ಅವರ ವಿರುಧ್ಧವೋ? ಅದು ರಾಜ್ಯ ಹೆದ್ದಾರಿ, ನಿಮ್ಮದೇ ಪಕ್ಷದ ಸರಕಾರ ಇದೆ, ನಿಮ್ಮ ಪಕ್ಷದ ಸರಕಾರದ ವಿರುಧ್ಧವೋ? ನಿಮ್ಮದೇ ಪಕ್ಷದ ಸಚಿವರ ವಿರುಧ್ದವೋ?
ಟೋಲ್ ವಿರೋಧಿ ಸಂಘಟನೆ ರಚನೆ ಮಾಡುವಾಗ ನಮ್ಮ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯವರು ರಾಜಕಾರಣ ಮರೆತು ಈ ಹೋರಾಟ ಪಕ್ಷಾತೀತವಾಗಿ ನಡೆಯಲಿ ಎಂದು ಸ್ವಪ್ರತಿಷ್ಠೆಗಾಗಿ ಮೇಲಾಟ ಮಾಡದೇ ಜನಹಿತವೇ ಮುಖ್ಯ ಹೊರತು ರಾಜಕಾರಣವಲ್ಲ ಎಂಬುದನ್ನು ಸಾರಿದವರು. ಇನ್ನು ಇದರ ಗೌರವಾಧ್ಯಕ್ಷರುಗಳನ್ನಾಗಿ ಸೊರಕೆಯವರನ್ನೂ ಸೇರಿಸಿ ಹೋರಾಟ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ನೇತ್ರತ್ವದಲ್ಲಿ ಕಾಪು ಹಾಗೂ ಕಾರ್ಕಳ ಎರಡೂ ಕ್ಷೇತ್ರಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಪಕ್ಷಾತೀತವಾಗಿ ಸಭೆಗಳನ್ನು ನಡೆಸಿ ಜನಬೆಂಬಲ ಪಡೆಯುತ್ತಿದೆ. ಹೋರಾಟ ಅಂತಿಮ ಘಟ್ಟದಲ್ಲಿದ್ದು ಸರಕಾರ ಈ ಸಮಿತಿಯ ಹೋರಾಟಕ್ಕೆ ಅನಿವಾರ್ಯವಾಗಿ ಮಣಿಯಲೇ ಬೇಕಾದ ಪರಿಸ್ಥಿತಿಗೆ ಬಂದಾಗ ಸೊರಕೆಯವರು ತಾನು ಇದನ್ನು ರದ್ದುಗೊಳಿಸಿದ್ದು ಎನ್ನುವ ನಾಟಕವಾಡಲು ಈ ಪ್ರತಿಭಟನೆ ಹೋರಾಟದ ನಾಟಕ ಆಡುತ್ತಿದ್ದಾರೆ ನಿಜವಾಗಿಯೂ ನಿಮಗೆ ಜನಪರ ಕಾಳಜಿ ಇದ್ದಲ್ಲಿ ಈ ರೀತಿಯ ಕುತಂತ್ರ ರಾಜಕಾರಣ ಮಾಡುತ್ತಿರಲಿಲ್ಲ. ನೇರವಾಗಿ ಹೋರಾಟ ಸಮಿತಿಯವರನ್ನು ಬೆಂಗಳೂರಿಗೆ ಬರಹೇಳಿ ನಿಮ್ಮ ಪಕ್ಷದ ಸರಕಾರದ ಸಂಬಂಧಿತರಲ್ಲಿ ಮಾತುಕತೆ ಮಾಡಿಸಿ ಪರಿಹಾರ ಮಾಡಿಸಬಹುದಿತ್ತು. ನೀವು ನಿಮ್ಮ ಪಕ್ಷದಲ್ಲಿ ಗೌರವಾನ್ವಿತ ಸ್ಥಾನದಲ್ಲಿ ಇರುವವರು? ನಿಮ್ಮ ಮಾತಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ? ಬೆಲೆ ಇದ್ದರೆ ಈ ಪ್ರತಿಭಟನೆ ನಾಟಕ ಯಾಕೆ? ಸಾರ್ವಜನಿಕರಿಗೆ ನಿಮ್ಮ ನಾಟಕ ತಿಳಿದಿದೆ ಸೊರಕೆಯವರೇ. ಈಗಾಗಲೇ ಟೋಲ್ ವಿರುಧ್ಧದ ಹೋರಾಟ ಸಮಿತಿಯ ಅಬ್ಬರಕ್ಕೆ ಟೋಲ್ ರದ್ದಾಗುವ ಅಂತಿಮ ಹಂತಕ್ಕೆ ಬಂದಿದ್ದು ಇಂದು ಹೋರಾಟ ಮಾಡಿ ನಾಳೆ ಬೆಂಗಳೂರಿಗೆ ತೆರಳಿ ಮನವಿ ನೀಡಿ ಸ್ವಲ್ಪದಿನದ ನಂತರ ನಾವೇ ರದ್ದು ಮಾಡಿದ್ದು ಅಂತ ಹೇಳಲಿರುವ ನಿಮ್ಮ ನಾಟಕ ಜನಸಾಮಾನ್ಯರಿಗೆ ಅರ್ಥವಾಗದು ಎಂದು ನೀವು ಭಾವಿಸಿದರೆ ಅದು ಮೂರ್ಖತನ. ಪಕ್ಷಾತೀತವಾಗಿ ಅಷ್ಟೊಂದು ವ್ವವಸ್ಥಿತವಾಗಿ ನಡೆಯುತ್ತಿದ್ದ ಹೋರಾಟಕ್ಕೆ ನಿಮ್ಮ ರಾಜಕೀಯ ಲೇಪದ ಅಗತ್ಯವಿತ್ತೇ? ಬಹಳಷ್ಟು ಜನ ಕಾಂಗ್ರೆಸ್ ಪದಾಧಿಕಾರಿಗಳು ಈ ಸಮಿತಿಯ ಸಭೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವಾಗ ನಿಮಗೆ ಮಾತ್ರ ಏಕೆ ಈ ರಾಜಕೀಯ ತೆವಲು? ಅದರಲ್ಲೂ ಹೋರಾಟ ಸಮಿತಿ 24 ನೇ ತಾರೀಕಿಗೆ ಪ್ರತಿಭಟನೆಗೆ ಕರೆ ಕೊಟ್ಟ ನಂತರ ಅದರ ಮಧ್ಯದಲ್ಲಿ ತುರಾತುರಿಯಲ್ಲಿ ದಿನಾಂಕ ನಿಗದಿ ಮಾಡಿರುವಿರಿ. ದಯವಿಟ್ಟು ನಿಮ್ಮ ಈ ದೊಂಬರಾಟ ನಿಲ್ಲಿಸಿ. ಪ್ರಚಾರ ಸಮಿತಿಯ ಅಧ್ಯಕ್ಷರು ಸ್ವಯಂ ವೇದಿಕೆ ನಿರ್ಮಾಣ ಮಾಡಿ ಪ್ರಚಾರ ಗಿಟ್ಟಿಸುವುದಲ್ಲ. ಸಾಧ್ಯವಾದರೆ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಸೇರಿಕೊಂಡು ಜನರ ವಿಶ್ವಾಸ ಗಳಿಸಿ ಎಂದು ಕಾಪು ಮಂಡಲದ ನಿಕಟಪೂರ್ವ ಅಧ್ಯಕ್ಷರೂ ಪ್ರಸ್ತುತ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ಶ್ರೀಕಾಂತ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.