
ಉಡುಪಿ: ಮುಂಬರಲಿರುವ ಲೋಕಸಭಾ ಚುನಾವಣೆ ದೇಶ ಕಟ್ಟುವ ಚುನಾವಣೆಯಾಗಿದೆ. ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು ಎಲ್ಲರನ್ನೂ ಜೊತೆಯಾಗಿಸಿಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಬೂತ್ ಗೆಲ್ಲಿಸುವ ಗುರಿಯೊಂದಿಗೆ ಪಕ್ಷದ ವಿಜಯ ಯಾತ್ರೆಯನ್ನು ಮುಂದುವರಿಸಲು ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಲೋಕಸಭಾ ಚುನಾವಣಾ ಕರಾವಳಿ-ಮಲೆನಾಡು ಕ್ಲಸ್ಟರ್ ಪ್ರಭಾರಿ ಎಮ್.ಬಿ. ಭಾನುಪ್ರಕಾಶ್ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಲೋಕಸಭಾ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
‘ಬೂತ್ ಗೆದ್ದರೆ ದೇಶ ಗೆದ್ದಂತೆ’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ, ಬೂತ್ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವ ಜೊತೆಗೆ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ನಿಗದಿತ ವಿವರಗಳನ್ನು ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡುವುದು, ಕೇoದ್ರದ ಜನಪರ ಯೋಜನೆಗಳನ್ನು ಹಾಗೂ ಸಕಾರಾತ್ಮಕ ವಿಚಾರಗಳನ್ನು ಕಟ್ಟಕಡೆಯ ಮತದಾರರಿಗೂ ತಲುಪಿಸುವುದು, ಹೊಸ ಯುವ ಮತದಾರರನ್ನು ಬಿಜೆಪಿ ಪರ ಮತದಾನಕ್ಕೆ ಪ್ರೇರೇಪಿಸುವುದು, ಬೂತ್ ಮಟ್ಟದಲ್ಲಿ ಹೊಸ ಕಾರ್ಯಕರ್ತರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡುವುದು ಇವೇ ಮುಂತಾದ ಪ್ರಮುಖ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸದೃಢ ಪಕ್ಷ ಸಂಘಟನೆಗೆ ಬದ್ಧತೆಯಿಂದ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಭ್ರಷ್ಟಾಚಾರ ರಹಿತ ಆಡಳಿತದ ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮೂಲಭೂತ ಸೌಕರ್ಯ ವೃದ್ಧಿ, ಆರೋಗ್ಯ ಸೇವೆ, ಬಡತನ ನಿವಾರಣೆ ಹಾಗೂ ಎಲ್ಲ ವರ್ಗದ ಜನತೆಯ ಅಭ್ಯುದಯಕ್ಕೆ ಜಾರಿಗೆ ತಂದಿರುವ ವಿನೂತನ ಯೋಜನೆಗಳ ಸಹಿತ ದೇಶವಾಸಿಗಳ ಸ್ವಾಭಿಮಾನದ ಪ್ರತೀಕವಾಗಿ ಅಯೋಧ್ಯೆಯಲ್ಲಿ ಐತಿಹಾಸಿಕವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮ ಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮುoತಾದ ದಾಖಲೆಯ ಅಭಿವೃದ್ಧಿಯ ಮಹಾಪೂರ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿವೆ. ಪಕ್ಷದ ಕಾರ್ಯಕರ್ತರು ಮೋದಿ ಸರಕಾರದ ಸಾಧನೆಗಳನ್ನು ಮನೆ ಮನೆಗಳಲ್ಲಿ ಪ್ರಚಲಿತಗೊಳಿಸುವ ಜೊತೆಗೆ ಗೆಲುವಿನ ಸ್ಪಷ್ಟ ಗುರಿಯೊಂದಿಗೆ ಸಂಘಟಿತ ಪ್ರಯತ್ನದ ಮೂಲಕ ಪಕ್ಷದ ಗೆಲುವಿಗೆ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಚುನಾವಣಾ ನಿರ್ವಹಣಾ ಕೆಲಸ ಕಾರ್ಯಗಳ ಜೊತೆಗೆ ಪಕ್ಷ ನೀಡಿರುವ ವಿವಿಧ ಅಭಿಯಾನಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಗುರುತರವಾದ ಜವಾಬ್ದಾರಿ ಅಭಿಯಾನಗಳ ಸಂಚಾಲಕರು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರ ಸಂಘಟಿತ ಪರಿಶ್ರಮ ಮತ್ತು ಸಹಕಾರ ಅತ್ಯವಶ್ಯಕ. ಸದೃಢ ಪಕ್ಷ ಸಂಘಟನೆ ಮತ್ತು ಪರಿಣಾಮಕಾರಿ ಚುನಾವಣಾ ಪ್ರಚಾರ ಕಾರ್ಯದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ಅಭಿವೃದ್ಧಿಪರ, ಸ್ವಚ್ಛ, ಪಾರದರ್ಶಕ ಆಡಳಿತಗಾರ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ನಮ್ಮ ಲೋಕಸಭಾ ಕ್ಷೇತ್ರದ ಭರ್ಜರಿ ಗೆಲುವಿನ ಕೊಡುಗೆ ನೀಡಲು ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಉಡುಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಯಾದಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಲೋಕಸಭಾ ಚುನಾವಣಾ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳಾದ ನಯನಾ ಗಣೇಶ್, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಎಸ್. ಕುಂದರ್, ವಿಧಾನಸಭಾ ಕ್ಷೇತ್ರಗಳ ಸಂಚಾಲಕರುಗಳಾದ ಸತೀಶ್ ಪೂಜಾರಿ ಕುಂದಾಪುರ, ಗಿರೀಶ್ ಎಮ್. ಅಂಚನ್ ಉಡುಪಿ, ಮುರಳಿಧರ ಪೈ ಕಾಪು, ಮಣಿರಾಜ್ ಶೆಟ್ಟಿ ಕಾರ್ಕಳ, ಲೋಕಸಭಾ ವಿಸ್ತಾರಕ್ ಧನಂಜಯ್, ವಿಧಾನಸಭಾ ವಿಸ್ತಾರಕ್ ಮೋಹನ್ ಅರಸ್ ಹಾಗೂ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ವಿವಿಧ ವಿಭಾಗಗಳ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ವಂದಿಸಿದರು.