
ಉಡುಪಿ: ಬಿಜೆಪಿ ಸ್ಥಾಪನಾ ದಿನವನ್ನು ಏ.6ರಂದು ಬೆಳಿಗ್ಗೆ 9.00 ಗಂಟೆಗೆ ಜಿಲ್ಲೆಯ ಎಲ್ಲ 1,111 ಬೂತ್ ಗಳಲ್ಲಿ ಬೂತ್ ಅಧ್ಯಕ್ಷರ ಮನೆಯ ಮೇಲೆ ಪಕ್ಷದ ಧ್ವಜಾರೋಹಣವನ್ನು ನೆರವೇರಿಸಿ, ಪಕ್ಷದ ತತ್ವ ಸಿದ್ಧಾಂತ ಹಾಗೂ ಕಾರ್ಯ ಪದ್ಧತಿಗಳ ಚಿಂತನಾ ಸಭೆಯೊಂದಿಗೆ ಆಚರಿಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಏ.6ರ ಬೆಳಿಗ್ಗೆ 9.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ ನಡೆಯಲಿದ್ದು, ಬೆಳಿಗ್ಗೆ 9.40ಕ್ಕೆ ವೆಬೆಕ್ಸ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಏ.6, 7, 8 ಮತ್ತು 9ರಂದು ಮನೆ-ಮನೆ ಸಂಪರ್ಕ ಅಭಿಯಾನ:
ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದೆ. ಸಾಮಾಜಿಕ ನ್ಯಾಯವನ್ನು ವಿಸ್ತರಿಸುವ ಸಲುವಾಗಿ ಒಳ ಮೀಸಲಾತಿಯನ್ನು ಘೋಷಣೆ ಮಾಡಿದೆ. ರಾಜ್ಯ ಸರಕಾರದ ಈ ಐತಿಹಾಸಿಕ ನಿರ್ಣಯದ ಬಗ್ಗೆ ಏ.6, 7, 8 ಮತ್ತು 9ರಂದು ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದ ವಸತಿ ಕ್ಷೇತ್ರಗಳಲ್ಲಿ ಮನೆ ಮನೆ ಬೇಟಿ ಮೂಲಕ ವ್ಯಾಪಕ ಪ್ರಚಾರ ಕಾರ್ಯ ನಡೆಯಲಿದೆ.
ಏ.14 ಡಾ! ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ:
ಏ.14ರಂದು ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಎಲ್ಲ ಬೂತ್ ಗಳಲ್ಲಿ ಆಚರಿಸಲಾಗುವುದು.
ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನದ ಸ್ಮರಣೀಯ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪಂಚ ತೀರ್ಥಗಳ ಹೆಸರಿನಲ್ಲಿ ಅಭಿವೃದ್ಧಿಪಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮಂಡಲಗಳ ವ್ಯಾಪ್ತಿಯಲ್ಲಿರುವ ಡಾ! ಅಂಬೇಡ್ಕರ್ ರವರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಮಾಲಾರ್ಪಣೆಗೈದು, ಅವರ ವಿಚಾರಧಾರೆ ಹಾಗೂ ವೈಚಾರಿಕತೆಯ ಪ್ರಚಾರಕ್ಕೆ ಒತ್ತು ನೀಡುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.