
ಉಡುಪಿ: ಮೇ 10ರಂದು ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆಯ ಐದು ಸ್ಥಾನಗಳ ಸಹಿತ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳ ಗೆಲುವು ಖಚಿತ; ಉಚಿತ ಪೊಳ್ಳು ಭಾಗ್ಯಗಳ ಆಮಿಷ ಒಡ್ಡಿರುವ ಭ್ರಷ್ಟ ಕಾಂಗ್ರೆಸ್ಸಿಗೆ ಸೋಲು ಖಚಿತ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಐತಿಹಾಸಿಕ ಮೀಸಲಾತಿ ಮತ್ತು ಒಳ ಮೀಸಲಾತಿ ಘೋಷಣೆಯ ಸಹಿತ ವಿವಿಧ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳು, ಅಭಿವೃದ್ಧಿ ಕೆಲಸ ಕಾರ್ಯಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರದ ಗಂಗೋತ್ರಿ ಎಂದೇ ಪ್ರಚಲಿತವಾಗಿರುವ ಕಾಂಗ್ರೆಸ್ ತನ್ನ ಸ್ವಯಂಕೃತ ದೇಶ ವಿರೋಧಿ, ಹಿಂದೂ ವಿರೋಧಿ ನೀತಿಗಳಿಂದ ಪ್ರಸಕ್ತ ಚುನಾವಣೆಯಲ್ಲಿ ಹೀನಾಯವಾಗಿ ಸೋತು ರಾಜ್ಯದಲ್ಲೂ ಮೂಲೆಗುಂಪಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪೂರ್ವಸಿದ್ಧತೆಗಳ ಅಂಗವಾಗಿ ಜಿಲ್ಲೆಯಾದ್ಯಂತ ನಡೆದಂತಹ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನ, ವಿಜಯ ಸಂಕಲ್ಪ ಯಾತ್ರೆ ಮುಂತಾದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಬೃಹತ್ ಜನ ಸಮೂಹ ವಿಧಾನಸಭಾ ಚುನಾವಣೆಯ ಭರ್ಜರಿ ವಿಜಯದ ಸಂಕಲ್ಪಕ್ಕೆ ಶಕ್ತಿ ತುಂಬಿದೆ ಎಂದಿದ್ದಾರೆ.
ಅತ್ಯಂತ ವಿಶ್ವಾಸದಿಂದ ಸಂಘಟಿತ ಪ್ರಯತ್ನದ ಮೂಲಕ ವಿಧಾನಸಭಾ ಚುನಾವಣೆಯನ್ನು ಸಮರ್ಪಕ ರೀತಿಯಲ್ಲಿ ಎದುರಿಸಲು ಜಿಲ್ಲಾ ಬಿಜೆಪಿ ಸರ್ವಸನ್ನದ್ಧವಾಗಿದೆ. ಪಕ್ಷ ಘೋಷಿಸುವ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಸಮಸ್ತ ಕಾರ್ಯಕರ್ತ ಬಂಧುಗಳು ಅತ್ಯಂತ ಬದ್ಧತೆ ಮತ್ತು ಕ್ರಿಯಾಶೀಲತೆಯಿಂದ ಕೈಜೋಡಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.