
News By: ಜನತಾಲೋಕವಾಣಿನ್ಯೂಸ್
ಉಡುಪಿ: ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಇದೀಗ ಸೋಲಿನ ಖಾತರಿಯಿಂದ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಮತದಾರರನ್ನು ಯಾಮಾರಿಸುವ ಸುಳ್ಳಿನ ಕಂತೆಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
‘ಗರೀಭೀ ಹಠಾವೋ’ ಎಂಬ ಪೊಳ್ಳು ಘೋಷಣೆಯೊಂದಿಗೆ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶ ಲೂಟಿಗೈದ ಕಾಂಗ್ರೆಸ್ಸಿನ ಸ್ವತಃ ಪರಮೋಚ್ಚ ನಾಯಕರು ಭ್ರಷ್ಟಾಚಾರ ಹಗರಣಗಳಲ್ಲಿ ತನಿಖೆ ಎದುರಿಸುತ್ತಾ ಬೇಲ್ ಮೇಲೆ ಹೊರಗಿರುವುದು ಕಾಂಗ್ರೆಸ್ಸಿನ ನೈತಿಕತೆಗೆ ಒಡ್ಡಿರುವ ಜ್ವಲಂತ ಸವಾಲಾಗಿದೆ.
ಅನ್ನಭಾಗ್ಯ ಕೇಂದ್ರ ಸರಕಾರದ ಯೋಜನೆಯಾಗಿದೆ. ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರ ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚ ಭರಿಸಿ ರಾಜ್ಯಕ್ಕೆ ನೀಡುತ್ತಿದ್ದು, ರಾಜ್ಯದ ಪಾಲು ಕೇವಲ ರೂ.3 ಮಾತ್ರ. ಕೇಂದ್ರದ ಯೋಜನೆಯನ್ನು ತನ್ನದೆಂದು ಬಿಂಬಿಸಿ, ಕಾಂಗ್ರೆಸ್ ಕೇವಲ ಸುಳ್ಳು ಭರವಸೆ ನೀಡುತ್ತಿದೆ.
ಈಗಾಗಲೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ. ಸಮುದಾಯಗಳಿಗೆ ಸರಾಸರಿ ಬಳಕೆಯಾಗುವ 75 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ವಿದ್ಯುತ್ ಸರಬರಾಜು ಆತ್ಯುತ್ತಮ ಸ್ಥಿತಿಯಲ್ಲಿದೆ. ಆದರೆ ತನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಮೇಣದ ಬತ್ತಿ ಉರಿಸಿ, ಟಾರ್ಚ್ ಬೆಳಕಿನಲ್ಲಿ ಬಜೆಟ್ ಮಂಡಿಸಿರುವುದನ್ನು ಮರೆತ ಕಾಂಗ್ರೆಸ್ ಉಚಿತ ವಿದ್ಯುತ್ ಎಂದು ಬೊಗಳೆ ಬಿಟ್ಟಿರುವುದು ಸುಳ್ಳು ಗ್ಯಾರಂಟಿ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಇನ್ನಿತರ ಸುಳ್ಳು ಗ್ಯಾರಂಟಿಗಳನ್ನು ಊಹಿಸಲೂ ಅಸಾಧ್ಯ ಎಂಬುದನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂದರೆ ಕಾಂಗ್ರೆಸ್ ಆಡಳಿತದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆಯ ದಾರಿ ತಪ್ಪಿಸುವ, ರಾಜ್ಯವನ್ನು ಸಾಲದ ಶೂಲಕ್ಕೇರಿಸುವ ಕಾಂಗ್ರೆಸ್ಸಿನ ಸುಳ್ಳು ಭರವಸೆಗಳ ಪೊಳ್ಳು ಗ್ಯಾರಂಟಿ ಕಾರ್ಡ್ ಎಂಬ ಪ್ರಹಸನಕ್ಕೆ ಮತದಾರರು ಮನ್ನಣೆ ನೀಡಲಾರರು. ಕಾಂಗ್ರೆಸ್ಸಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಮಾತ್ರ ನೈಜ ಗ್ಯಾರಂಟಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.