
News By: ಜನತಾಲೋಕವಾಣಿನ್ಯೂಸ್
ಉಡುಪಿ: ಉಡುಪಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ಇವರ ಅಧ್ಯಕ್ಷತೆಯಲ್ಲಿ ಉಡುಪಿಯ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು.
ಕುಂದಾಪುರ-ಬೈಂದೂರು ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಅಪ್ಪಣ್ಣ ಹೆಗ್ಡೆ ಜ್ಯೋತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.
ಸಭೆಯಲ್ಲಿ 2023-24ನೇ ಸಾಲಿನ ಕ್ರಿಯಾ ಯೋಜನೆಯನ್ನು ಸಮಗ್ರ ವಿಚಾರ ವಿನಿಮಯದೊಂದಿಗೆ ಅನುಮೋದಿಸಲಾಯಿತು.
ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮದ್ಯ ಮಾರಾಟ, ಮಾದಕ ವಸ್ತು ದಂಧೆ ಸಹಿತ ಇನ್ನಿತರ ಕಾನೂನು ಬಾಹೀರ ಚಟುವಟಿಕೆಗಳು ನಡೆಯದಂತೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಮೆಹೆಂದಿ ಕಾರ್ಯಕ್ರಮಗಳಲ್ಲಿ ಮದ್ಯಪಾನ ಬಳಕೆಯನ್ನು ನಿಗ್ರಹಿಸಿ, ಕುಣಿತದ ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ನೀಡುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಸಕ್ತ ವರ್ಷದಲ್ಲಿ ಮದ್ಯವರ್ಜನ ಶಿಬಿರ, ಮಾದಕ ವಸ್ತು ವಿರೋಧಿ ದಿನಾಚರಣೆ, ತಂಬಾಕು ವಿರೋಧಿ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಮಾಹಿತಿ ನೀಡಲಾಯಿತು.
ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಸಮಿತಿಗೆ ಮುಂದಿನ 2 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕುಂದಾಪುರ ತಾಲೂಕಿನ ನವೀನ್ ಚಂದ್ರ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಕಳ ತಾಲೂಕಿನ ಸುಭಾಷ್‌ಚಂದ್ರ ಚೌಟ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಸ್ವಾಗತಿಸಿದರು. ಕುಂದಾಪುರ(2) ತಾಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ವಂದಿಸಿದರು.