
News By: ಜನತಾಲೋಕವಾಣಿನ್ಯೂಸ್
ಉಡುಪಿ:ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸೂಚನೆಯಂತೆ ಮಾ.12 ರವಿವಾರ ಮಧ್ಯಾಹ್ನ 3.00 ಗಂಟೆಗೆ ಕುಂದಾಪುರದ ನೆಹರೂ ಮೈದಾನದಲ್ಲಿ ಬೃಹತ್ ಜಿಲ್ಲಾ ಮಹಿಳಾ ಸಮಾವೇಶ ನಡೆಯಲಿದೆ. ಸುಮಾರು 15,000ಕ್ಕೂ ಮಿಕ್ಕಿ ಮಹಿಳೆಯರ ಸಮಾಗಮದೊಂದಿಗೆ ನಡೆಯಲಿರುವ ಈ ಸಮಾವೇಶವನ್ನು ಸಂಘಟಿತ ಪ್ರಯತ್ನದ ಮೂಲಕ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕರೆ ನೀಡಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ಮಹಿಳಾ ಮೋರ್ಚಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರ ಅಭ್ಯುದಯದ ಕಾಳಜಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ, ಎಲ್ಲ ವರ್ಗದ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು.
ಜಿಲ್ಲಾ ಮಹಿಳಾ ಸಮಾವೇಶವನ್ನು ಐತಿಹಾಸಿಕ ರೀತಿಯಲ್ಲಿ ಆಯೋಜಿಸಲು ಎಲ್ಲ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಎಲ್ಲ 6 ಮಂಡಲಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ಸಮಾವೇಶಕ್ಕೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆಯವರು ಭಾಗವಹಿಸುವ ಸಾಧ್ಯತೆಯ ಜೊತೆಗೆ ಜಿಲ್ಲೆಯ ಸಚಿವರು, ಶಾಸಕರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ. ಮಹಿಳಾ ಮೋರ್ಚಾದ ಎಲ್ಲ ಸ್ತರದ ಪದಾಧಿಕಾರಿಗಳು, ಸದಸ್ಯರ ಜೊತೆಗೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು ಸಮಾವೇಶದ ಯಶಸ್ಸಿಗೆ ಬದ್ಧತೆಯಿಂದ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.
ಪೂರ್ವಭಾವಿ ಸಭೆಯಲ್ಲಿ ಎಲ್ಲ ವಾರ್ಡ್ ಗಳಿಗೆ ಮತ್ತು ಪಂಚಾಯತ್ ಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಯಿತು.
ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಸರೋಜ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಗಳಾದ ಸುಧಾ ಪೈ, ಸುಜಾಲ ಸತೀಶ್ ಪೂಜಾರಿ, ಪ್ರಮುಖರಾದ ಪೂರ್ಣಿಮಾ ರತ್ನಾಕರ್, ದಯಾಶಿನಿ, ಶೈಲಜಾ, ಪ್ರೀತಿ, ಲಕ್ಷ್ಮಿ, ಸುಗುಣ, ಶಾಂತಿ ಮನೋಜ್, ಕಾವೇರಿ, ಜಯಲಕ್ಷ್ಮಿ, ಜಯಶ್ರೀ, ಶಕುಂತಲಾ ಶೆಟ್ಟಿ, ಪ್ರತಿಭಾ ನಾಯಕ್, ಜ್ಯೋತಿ ಶೇಟ್ ಮುಂತಾದವರು ಉಪಸ್ಥಿತರಿದ್ದರು.