ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ರಾಜ್‌ಕುಮಾರ್‌ ಬಹರೈನ್, ಅಂಬಲಪಾಡಿ ಇವರಿಗೆ ಹುಟ್ಟೂರ ಸನ್ಮಾನ ‘ರಾಜಾಭಿನಂದನೆ’

News By: ಜನತಾಲೋಕವಾಣಿನ್ಯೂಸ್

ಉಡುಪಿ, ಫೆ.21: ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ರಾಜ್ ಕುಮಾರ್‌ ಬಹರೈನ್, ಅಂಬಲಪಾಡಿ ಇವರಿಗೆ ಹುಟ್ಟೂರ ಸಮ್ಮಾನ ‘ರಾಜಾಭಿನಂದನೆ’ ಉಡುಪಿ ಪುರಭವನದಲ್ಲಿ ನಡೆಯಿತು.

ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇದರ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರು ಮಾತನಾಡಿ, ಅಂಬಲಪಾಡಿ ನಿವಾಸಿ ದಿ। ಭಾಸ್ಕರ್ ಪಾಲನ್, ಸುಂದರಿ ಪೂಜಾರ್ತಿಯವರ ಜೇಷ್ಠ ಪುತ್ರರಾಗಿ ಸಮಾಜ ಸೇವೆ ಹಾಗೂ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಕಂಪನ್ನು ಅರಬ್ ರಾಷ್ಟ್ರದಲ್ಲಿ ಪಸರಿಸಲು ಅಹರ್ನಿಶಿ ತೊಡಗಿಸಿಕೊಂಡು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವುದು ಪ್ರಶಂಸನೀಯ ಎಂದರು.

ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್‌ ಕುಮಾರ್ ರವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ‘ವಿದ್ಯಾರ್ಜನೆಯಿಂದ ಸ್ವತಂತ್ರರಾಗಿರಿ; ಸಂಘಟನೆಯಿಂದ ಬಲಯುತರಾಗಿರಿ’ ಎನ್ನುವ ಉದಾತ್ತ ಸಂದೇಶಕ್ಕೆ ಅನುಗುಣವಾಗಿ ಬಹರೈನ್ ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿ ನಡೆಸುವುದರ ಜತೆಗೆ ಕನ್ನಡ ಕಲಿಕೆ ತರಗತಿಯನ್ನೂ ಪ್ರಾರಂಭಿಸಿದ ಮತ್ತು ಅರಬ್ ರಾಷ್ಟ್ರದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದ ರಾಜ್‌ಕುಮಾರ್ ಅವರಿಗೆ ಅರ್ಹವಾಗಿಯೇ 2022ನೇ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ ಎಂದರು.

ಅಭಿನಂದನಾ ಭಾಷಣಗೈದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾ‌ರ್ ಅವರು, ಮೇರು ನಟರಾದ ಕೀರ್ತಿಶೇಷ ಡಾ| ಪುನೀತ್ ರಾಜ್‌ ಕುಮಾರ್ ಹಾಗೂ ಡಾ| ಶಿವರಾಜ್‌ ಕುಮಾರ್ ಅವರನ್ನು ಬಹರೈನ್‌ಗೆ ಕರೆಸಿರುವುದು, ‘ಪುನೀತ್ ಗಾನ ನಮನ’ ಕಾರ್ಯಕ್ರಮವನ್ನು ಆಯೋಜಿಸಿರುವುದು ರಾಜ್ ಕುಮಾರ್ ಅವರ ಕನ್ನಡಾಭಿಮಾನ, ನಾಡಿನ ಜತೆ ಇರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಹಲವು ಕಲಾವಿದರನ್ನು ಬಹರೈನ್‌ಗೆ ಕರೆಸಿ ಪ್ರೋತ್ಸಾಹಿಸಿದ್ದರು ಎಂದರು.

ರಾಜ್ ಕುಮಾರ್ ರವರು ಅಂಬಲಪಾಡಿಯ ಹೆಸರನ್ನು ವಿದೇಶದಲ್ಲಿ ತನ್ನ ಸಾಧನೆಯ ಮೂಲಕ ಪಸರಿಸಿ ಅಂಬಲಪಾಡಿಯ ಗೌರವ ಹೆಚ್ಚಿಸಿದ್ದಾರೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ರವರು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಅವರು, ರಾಜ್ ಕುಮಾರ್ ಅವರ ವೈಶಿಷ್ಟ್ಯಪೂರ್ಣ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.

ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಟ ದೇವದಾಸ್ ಕಾಪಿಕಾಡ್, ಉಡುಪಿ ಮತ್ತು ದ.ಕ. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ನಮ್ಮ ಕುಡ್ಲ ಸುದ್ಧಿ ವಾಹಿನಿಯ ಪ್ರವರ್ತಕ ಲೀಲಾಕ್ಷ ಕರ್ಕೇರ, ನ್ಯೂ ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ರಮೇಶ್ ನಾಯ್ಕ್, ಯಕ್ಷಗಾನ ಕಲಾರಂಗ ಉಡುಪಿ ಕಾರ್ಯದರ್ಶಿ ಮುರಳಿ ಕಡೆಕಾರ್, ಬಹರೈನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್, ರಾಜಾಭಿನಂದನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಮ್. ಪೂಜಾರಿ, ಕೋಶಾಧಿಕಾರಿ ಅಣ್ಣು ಪದ್ಮನಾಭ ಜತ್ತನ್ ಉಪಸ್ಥಿತರಿದ್ದರು.

ರಾಜ್ ಕುಮಾರ್ ರವರ ಅಭಿಮಾನಿಗಳು, ರಾಜಾಭಿನಂದನಾ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದ್ದರು.

ರಾಜಾಭಿನಂದನಾ ಸಮಿತಿಯ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಆಚಾರ್ಯ ವಂದಿಸಿದರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಉಡುಪಿಯ ಎಕ್ಸ್ಟ್ರೀಮ್ ಡಾನ್ಸ್ ಅಕಾಡೆಮಿ ಇವರಿಂದ ನೃತ್ಯಾವಳಿಗಳು, ‘ಪ್ರಸಂಶಾ ಕಾಪು’ ತಂಡ ಹಾಗೂ ಚಂದ್ರಕಾಂತ್ ಪಡುಬಿದ್ರಿ ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ರಾಜ್ ಕುಮಾರ್ ರವರಿಗೆ ಗೌರವಾರ್ಪಣೆ ನಡೆಯಿತು.

Leave a comment

Design a site like this with WordPress.com
Get started