Design a site like this with WordPress.com
Get started

ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆಗೈದ ಕಾಂಗ್ರೆಸ್ ನಿಂದ ಪ್ರಜಾ ಧ್ವನಿ ಯಾತ್ರೆ ಹಾಸ್ಯಾಸ್ಪದ : ಕುಯಿಲಾಡಿ ಸುರೇಶ್ ನಾಯಕ್ಕೋಟತಟ್ಟು ಗ್ರಾ.ಪಂ.ನ ಬೂತ್ 164ರಲ್ಲಿ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ

News By: ಜನತಾಲೋಕವಾಣಿನ್ಯೂಸ್


ಉಡುಪಿ: ಸ್ವಾತಂತ್ರ್ಯಾನಂತರ ಬ್ರಹ್ಮಾಂಡ ಭ್ರಷ್ಟಾಚಾರದೊಂದಿಗೆ ದುರಾಡಳಿತ ನಡೆಸಿದ್ದ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆಯಿಂದ ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆಗೈದು, ಇದೀಗ ಪ್ರಜಾ ಧ್ವನಿ ಯಾತ್ರೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಅವರು ಕುಂದಾಪುರ ಮಂಡಲದ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 164ರಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಜೊತೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವಿಜಯ ಸಂಕಲ್ಪ ಅಭಿಯಾನ’ದಲ್ಲಿ ಪಕ್ಷದ ಪ್ರಮುಖರು ಹಾಗೂ ಎಲ್ಲ ಸ್ತರದ ಕಾರ್ಯಕರ್ತರು ಅತ್ಯಂತ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

‘ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ; ಭ್ರಷ್ಟಾಚಾರ ಅಂದರೆ ಕಾಂಗ್ರೆಸ್’ ಎಂಬುದು ಜಗಜ್ಜಾಹೀರಾಗಿದೆ. ಇದಕ್ಕೊಂದು ಜ್ವಲಂತ ಉದಾಹರಣೆ ಎಂದರೆ ಗೂಗಲ್ ಸರ್ಚ್ ನಲ್ಲಿ ‘ಕಾಂಗ್ರೆಸ್ ಲೂಟೆಡ್ ಇಂಡಿಯಾ ಫಾರ್ 70 ಇಯರ್ಸ್’ ಎಂದು ಹುಡುಕಿದರೆ ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡಿರುವ ಮೊತ್ತ ರೂ.48,20,69,00,00,000 ಎಂಬ ಉತ್ತರ ಬರುತ್ತದೆ. ಇದರಲ್ಲಿ ಕಾಂಗ್ರೆಸ್ ಉನ್ನತ ನಾಯಕರ ಹೆಸರಿನ ಜೊತೆಗೆ ಪ್ರಸ್ತುತ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ತನಿಖೆ ಎದುರಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಹಗರಣ ಕೂಡ ಸೇರಿರುವುದು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕೂಪದ ವಿರಾಟ್ ಸ್ವರೂಪವನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ ಎಂದರು.

ಒಂದೆಡೆ ಹಲವಾರು ಪ್ರಕರಣಗಳಲ್ಲಿ ಸ್ವಯಂ ತನಿಖೆಗೆ ಹೆದರಿ ಲೋಕಾಯುಕ್ತಕ್ಕೇ ಎಳ್ಳು ನೀರು ಬಿಟ್ಟ ಮಾಜಿ ಸಿ.ಎಂ. ಸಿದ್ಧರಾಮಯ್ಯ; ಇನ್ನೊಂದೆಡೆ ಭ್ರಷ್ಟಾಚಾರದ ಹಗರಣಗಳ ಸರಮಾಲೆಯೊಂದಿಗೆ ಪದೇ ಪದೇ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಇವರ ನಡುವಿನ ಮುಸುಕಿನ ಗುದ್ದಾಟ ಪ್ರಸ್ತುತ ಬಟ್ಟಾಬಯಲಾಗಿದೆ. ಇದೀಗ ಚುನಾವಣಾ ಸಂದರ್ಭದಲ್ಲಿ ಯಾವುದೇ ಹಣದ ಮೂಲದ ವಿವರವನ್ನು ನೀಡದೇ ಉಚಿತ ಭಾಗ್ಯಗಳನ್ನು ಘೋಷಿಸುತ್ತಾ ರಾಜ್ಯದ ಜನತೆಗೆ ಮಂಕು ಬೂದಿ ಎರಚಲು ಹವಣಿಸುತ್ತಿರುವ ಜನ ವಿರೋಧಿ ಕಾಂಗ್ರೆಸ್ ನ ಮೋಸ ಜಾಲದ ಹಿಡನ್ ಅಜೆಂಡಾವನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತಿದ್ದಾರೆ. ಒಂದೇ ವರ್ಗವನ್ನು ಓಲೈಸುವ ಜೊತೆಗೆ ಪ್ರಚಾರಕ್ಕಾಗಿ ಬಿಟ್ಟಿ ಭಾಗ್ಯಗಳನ್ನು ನೀಡುತ್ತಾ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿದ ಕುಖ್ಯಾತಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರಾಳ ಇತಿಹಾಸವನ್ನು ರಾಜ್ಯದ ಜನತೆ ಮರೆತಿಲ್ಲ. ಜನತೆ ಜಾಗೃತರಾಗಿದ್ದು, ಗೊತ್ತು ಗುರಿ ಇಲ್ಲದ ಉಚಿತ ಭಾಗ್ಯಗಳನ್ನು ಘೋಷಿಸಿ ರಾಜ್ಯವನ್ನು ದಿವಾಳಿತನದ ಅಂಚಿಗೆ ನೂಕುವ ಕಾಂಗ್ರೆಸ್ ಪ್ರಯತ್ನ ಎಂದಿಗೂ ಸಫಲವಾಗದು ಎಂದು ತಿಳಿಸಿದರು.

ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿರುವ ಬಿಜೆಪಿ ದೇಶದ ಭದ್ರತೆಯ ಸಹಿತ ಎಲ್ಲ ವರ್ಗದ ಜನತೆಯ ಅಭಿವೃದ್ಧಿಗೆ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ವಿವರಗಳನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕಾಗಿದೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ತೀವ್ರತೆಯನ್ನು ಪಡೆದಿವೆ. ಈಗಾಗಲೇ ಜಿಲ್ಲೆಯಾದ್ಯಂತ ನಡೆದ ‘ಬೂತ್ ವಿಜಯ ಅಭಿಯಾನ’ ದಾಖಲೆ ಮಟ್ಟದ ಯಶಸ್ಸನ್ನು ಕಂಡಿದೆ. ಜ.21ರಿಂದ ಜ.29ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ‘ವಿಜಯ ಸಂಕಲ್ಪ ಅಭಿಯಾನ’ಕ್ಕೆ ಜಿಲ್ಲೆಯಾದ್ಯಂತ ಭರ್ಜರಿ ಚಾಲನೆ ದೊರೆತಿದ್ದು, ಮನೆ ಮನೆ ಸಂಪರ್ಕದ ಸಹಿತ 80000 90009 ನಂಬರ್ ಗೆ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಿಂದ ತೊಡಗಿಸಿಕೊಂಡು ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.

ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ಅಪಪ್ರಚಾರಗಳ ನಡುವೆಯೂ ಜಿಲ್ಲೆ ಹಾಗೂ ರಾಜ್ಯದೆಲ್ಲೆಡೆ ಬಿಜೆಪಿ ಪರ ಉತ್ತಮ ವಾತಾವರಣವಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿಪರ ಆಡಳಿತ, ಜನಪರ ಯೋಜನೆಗಳು ಇಂದು ಮನೆ ಮನಗಳನ್ನು ತಲುಪಿ ಸಾರ್ಥಕತೆಯನ್ನು ಪಡೆದಿವೆ. ಮಗದೊಮ್ಮೆ ಅಭಿವೃದ್ಧಿ ಮತ್ತು ಸಂಘಟನಾ ಸಾಮರ್ಥ್ಯದಿಂದ ಬಿಜೆಪಿ ಜಿಲ್ಲೆಯ ಐದೂ ಸ್ಥಾನಗಳನ್ನು ಗೆಲ್ಲುವ ಜೊತೆಗೆ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕುಯಿಲಾಡಿ ತಿಳಿಸಿದರು.

ಅಭಿಯಾನದ ತಂಡದೊಂದಿಗೆ ಮನೆ ಮನೆಗಳಿಗೆ ತೆರಳಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳ ಕರಪತ್ರಗಳನ್ನು ವಿತರಿಸಿ, ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ವಿಠ್ಠಲ ಪೂಜಾರಿ, ಅಭಿಯಾನದ ಜಿಲ್ಲಾ ಸಂಚಾಲಕ ಸದಾನಂದ ಉಪ್ಪಿನಕುದ್ರು, ಕುಂದಾಪುರ ಮಂಡಲ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಸಹವಕ್ತಾರ ಪ್ರತಾಪ್ ಶೆಟ್ಟಿ ಚೇರ್ಕಾಡಿ, ಅಭಿಯಾನದ ಮಂಡಲ ಸಂಚಾಲಕರಾದ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ, ಸುರೇಂದ್ರ ಕಾಂಚನ್ ಸಂಗಮ್, ಅರುಣ್ ಬಾಣ, ಸತೀಶ್ ಬಾರಿಕೆರಿ, ವಿದ್ಯಾ ಸಾಲಿಯನ್, ರೂಪಾ ಪೈ, ಜ್ಯೋತಿ ಪೂಜಾರಿ ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: