
News by: ಜನತಾಲೋಕವಾಣಿನ್ಯೂಸ್
ಉಡುಪಿ:ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಪಕ್ಷದ ಸೂಚನೆಯಂತೆ ಜ.2ರಂದು ಪ್ರಾರಂಭಗೊಂಡು ಜ.12ರ ವರೆಗೆ ಜಿಲ್ಲೆಯ ಎಲ್ಲಾ 1,1111 ಮತಗಟ್ಟೆಗಳಲ್ಲಿ ನಡೆಯಲಿರುವ ಬೂತ್ ವಿಜಯ ಅಭಿಯಾನ ಜಿಲ್ಲೆಯಾದ್ಯಂತ ಹೊಸ ಸಂಚಲನ ಮೂಡಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಜ.6ರಂದು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜ.2ರಂದು ಜಿಲ್ಲೆಯ ಎಲ್ಲ 6 ಮಂಡಲ ಕೇಂದ್ರಗಳಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಸಚಿವೆ ಕು! ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾದ ಎಸ್.ಅಂಗಾರ, ವಿ.ಸುನೀಲ್ ಕುಮಾರ್ ಹಾಗೂ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಬಿ.ಎಮ್. ಸುಕುಮಾರ ಶೆಟ್ಟಿ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ಬೂತ್ ಧ್ವಜಾರೋಹಣಕ್ಕೆ ಚಾಲನೆಯನ್ನು ನೀಡಲಾಗಿದೆ.
ಬೂತ್ ವಿಜಯ ಅಭಿಯಾನದ ಅಂಗವಾಗಿ ಬೂತ್ ಸಮಿತಿಗಳ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಬೂತ್ ವಾರು ವಾಟ್ಸಾಪ್ ಗ್ರೂಪ್ ಗಳ ರಚನೆ, ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಧ್ವಜಾರೋಹಣ ಹಾಗೂ ಪ್ರತೀ ತಿಂಗಳ ಕೊನೆಯ ರವಿವಾರ ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 978 ಬೂತ್ ಗಳ ಅಧ್ಯಕ್ಷರ ಮನೆಗಳಲ್ಲಿ ಪಕ್ಷದ ಧ್ವಜಾರೋಹಣದ ಜೊತೆಗೆ ಪ್ರತೀ ಬೂತ್ ವ್ಯಾಪ್ತಿಯ ಕನಿಷ್ಠ 25 ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜವನ್ನು ಹಾರಿಸಲಾಗಿದೆ. 860 ಬೂತ್ ಸಮಿತಿಗಳ ಪರಿಶೀಲನೆ ಹಾಗೂ 858 ಪೇಜ್ ಪ್ರಮುಖರ ನಿಯೋಜನೆ ನಡೆದಿದೆ. ಜ.12ರ ಮೊದಲು ಇನ್ನುಳಿದಿರುವ ಎಲ್ಲಾ ಬೂತ್ ಗಳಲ್ಲಿ ನಿಗದಿತ ಚಟುವಟಿಕೆಗಳು ನಡೆಯಲಿವೆ. ಜಿಲ್ಲೆಯ ಎಲ್ಲ 1,111 ಬೂತ್ ಗಳಲ್ಲಿ ವಾಟ್ಸಾಪ್ ಗ್ರೂಪ್ ಗಳ ಪುನರ್ ರಚನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರ ನೀಡಿದರು.
ಪ್ರತೀ ತಿಂಗಳ ಕೊನೆಯ ರವಿವಾರ ಸಹಿತ ಜ.29ರಂದು ಬೆಳಿಗ್ಗೆ 11.00 ಗಂಟೆಗೆ ಪಕ್ಷದ ಪ್ರಮುಖರು ಹಾಗೂ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸುವ ಜೊತೆಗೆ ಜಿಲ್ಲೆಯ 1,111 ಬೂತ್ ಗಳಲ್ಲಿ ಮನ್ ಕೀ ಬಾತ್ ವೀಕ್ಷಣೆ ಹಾಗೂ ಕಾರ್ಯಕ್ರಮದ ವರದಿ ಮತ್ತು ಫೋಟೋವನ್ನು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡುವ ಪ್ರಕ್ರಿಯೆ ನಡೆಯಲಿದೆ.
ಬೂತ್ ವಿಜಯ ಅಭಿಯಾನದ ಬಳಿಕ 2ನೇ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನವು ಜ.21ರಿಂದ 29ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಬಿಜೆಪಿ ನೇತೃತ್ವದ ಆಡಳಿತದಲ್ಲಿ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯ ಚಟುವಟಿಕೆಗಳ ರಿಪೋರ್ಟ್ ಕಾರ್ಡ್ ಕರಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಮನೆ ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಪಕ್ಷದ ಸದಸ್ಯತನದ ಮರು ನೋಂದಾವಣೆಗಾಗಿ ಮಿಸ್ ಕಾಲ್ ಅಭಿಯಾನವೂ ನಡೆಯಲಿದೆ ಎಂದು ತಿಳಿಸಿದರು.
ಚುನಾವಣಾ ಪೂರ್ವ ಸಿದ್ಧತಾ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯ ಎಲ್ಲಾ 265 ಶಕ್ತಿಕೇಂದ್ರ ಗಳಿಗೆ ಅಲ್ಪಾವಧಿ ವಿಸ್ತಾರಕರು ನೇಮಕಗೊಂಡಿದ್ದು, ಈಗಾಗಲೇ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿಯವರು ಬೂತ್ ವಿಜಯ ಅಭಿಯಾನದ ಜಿಲ್ಲಾ ಸಂಚಾಲಕರಾಗಿ, ಸದಾನಂದ ಉಪ್ಪಿನಕುದ್ರುರವರು ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕರಾಗಿ ನಿಯೋಜನೆಗೊಂಡಿದ್ದಾರೆ.
ಪಕ್ಷದ ಸಂಘಟನಾ ಸಾಮರ್ಥ್ಯ, ಅಭಿವೃದ್ಧಿ ಕೆಲಸ ಕಾರ್ಯಗಳು ಹಾಗೂ ಸಂಘಟಿತ ಪ್ರಯತ್ನದ ಮೂಲಕ ಮಗದೊಮ್ಮೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗರಿಷ್ಠ ಅಂತರದ ಗೆಲುವು ಸಾಧಿಸುವ ಮೂಲಕ ರಾಜ್ಯದ 150 ಸ್ಥಾನಗಳನ್ನು ಗೆಲ್ಲುವ ಗುರಿಗೆ ಕೊಡುಗೆ ನೀಡಲಿದೆ ಎಂದು ಕುಯಿಲಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಾಗೂ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು.