Design a site like this with WordPress.com
Get started

ಕಬ್ಬು ಬಿಲ್ ಪಾವತಿಗೆ ಎಥನಾಲ್ ಪರಿಗಣನೆ: ಶಂಕರ ಪಾಟೀಲ್ ಮುನೇನಕೊಪ್ಪ ಧನ್ಯವಾದ

News By: ಜನತಾಲೋಕವಾಣಿನ್ಯೂಸ್

ಬೆಂಗಳೂರು: ರಾಜ್ಯ ಸರಕಾರವು ಇಲ್ಲಿನವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗಾಸ್, ಮೊಲಾಸಿಸ್, ಪ್ರೆಸ್‍ಮಡ್‍ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸುತ್ತಿತ್ತು. ಸಕ್ಕರೆ ಉದ್ಯಮದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷದಲ್ಲಿ ಎಫ್‍ಆರ್‍ಪಿ ದರದ ಮೇಲೆ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲನ್ನು ಪಾವತಿಸಲು ಅನುಕೂಲವಾಗುವಂತೆ ಉಪ ಉತ್ಪನ್ನವಾದ ಎಥನಾಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಬಿ. ಪಾಟೀಲ್ ಮುನೇನಕೊಪ್ಪ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅದರನ್ವಯ ಪ್ರಥಮ ಕಂತಿನಲ್ಲಿ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‍ಆರ್‍ಪಿ ದರದ) ಜೊತೆಗೆ ಪ್ರತಿ ಮೆ.ಟನ್ ಒಂದಕ್ಕೆ ರೂ.50 ಅನ್ನು ಹೆಚ್ಚುವರಿಯಾಗಿ ಪಾವತಿಸಲು ಸಂಬಂಧಿಸಿದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ಕೊಡಲಾಗಿದೆ. ಇದರಿಂದಾಗಿ ರಾಜ್ಯದ ರೈತರಿಗೆ ರೂ.204.47 ಕೋಟಿ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲು ಸಿಗಲಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಕರ್ನಾಟಕವು ರಾಷ್ಟ್ರದ ಮೂರನೇ ಅತಿ ದೊಡ್ಡ ಸಕ್ಕರೆ ಉತ್ಪಾದಿಸುವ ರಾಜ್ಯವಾಗಿದೆ. ಮೊದಲನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮತ್ತು ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯಗಳಿವೆ. ರಾಜ್ಯದಲ್ಲಿ ಒಟ್ಟು 89 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, 72 ಕಾರ್ಖಾನೆಗಳು ಕಾರ್ಯನಿರತವಾಗಿವೆ. ಇದರ ಪೈಕಿ 14 ಸಹಕಾರಿ ವಲಯದಲ್ಲಿವೆ. ಸಹಕಾರಿ ವಲಯ (ಗುತ್ತಿಗೆ)-8, ಖಾಸಗಿ ವಲಯದಲ್ಲಿ 50 ಕಾರ್ಖಾನೆಗಳಿವೆ. ಇವುಗಳು 2021-22ರಲ್ಲಿ 622.26 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 59.78 ಲಕ್ಷ ಮೆ.ಟನ್ ಸಕ್ಕರೆ ಉತ್ಪಾದಿಸಿವೆ ಎಂದು ವಿವರಿಸಿದರು.

ತಾ.31.10.2022ರ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳು 2021-22ನೇ ಹಂಗಾಮಿನಲ್ಲಿ ನುರಿಸಿದ ಕಬ್ಬಿಗೆ ರೂ.19,634.84 ಕೋಟಿ ಪಾವತಿಸಬೇಕಿದ್ದು, ರೂ.19,922.39 ಕೋಟಿ ಪಾವತಿಸಿದ್ದು, ಯಾವುದೇ ಬಾಕಿ ಇರುವುದಿಲ್ಲ. ಪಾವತಿ ಪ್ರಮಾಣವು ಶೇ 100ರಷ್ಟಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‍ಆರ್‍ಪಿ ದರಕ್ಕಿಂತ ಹೆಚ್ಚು ಕಬ್ಬಿನ ದರ ಪಾವತಿಸಿವೆ. 2022-23ನೇ ಸಾಲಿನಲ್ಲಿ ಒಟ್ಟು 78 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸುವ ಅಂದಾಜಿದೆ. ಈ ಪೈಕಿ 68 ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿವೆ. ತಾ.17-11-2022ರಲ್ಲಿದ್ದಂತೆ ಈ ಕಾರ್ಖಾನೆಗಳು 119.46 ಲಕ್ಷ ಮೆ.ಟನ್. ಕಬ್ಬು ನುರಿಸಿ 38.77 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿವೆ ಎಂದು ನುಡಿದರು.

ಸಕ್ಕರೆ ನಿರ್ದೇಶನಾಲಯವು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಮಂಡ್ಯದ ಭಾರತ ರತ್ನ ಕಬ್ಬು ಸಂಶೋಧನಾ ಸಂಸ್ಥೆಗೆ ಕಬ್ಬಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಮತ್ತು ತರಬೇತಿ ಸಂಬಂಧ ವಾರ್ಷಿಕ ಅನುದಾನವಾಗಿ 2022-23ನೇ ಆರ್ಥಿಕ ವರ್ಷಕ್ಕೆ ರೂ.75 ಲಕ್ಷ ಅನುದಾನ ನೀಡಿದೆ ಎಂದರು.

ರಾಜ್ಯದಲ್ಲಿ ಕೆಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು ದುಡಿಯುವ ಬಂಡವಾಳದ ಕೊರತೆ ಮತ್ತು ಹಣಕಾಸಿನ ದುಸ್ಥಿತಿಯಿಂದ ಸ್ಥಗಿತವಾಗಿದ್ದವು. ಸರಕಾರವು ಈ ಪೈಕಿ 9 ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳೆಗಾರ ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಪುನಶ್ಚೇತನಗೊಳಿಸಲು ಗುತ್ತಿಗೆ ಆಧಾರದ ಮೇಲೆ ಖಾಸಗಿ ಉದ್ಯಮಿಗಳಿಗೆ ಕೊಟ್ಟಿದೆ ಎಂದು ತಿಳಿಸಿದರು.

ಮಂಡ್ಯದ ಸರಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಂಪನಿಯನ್ನು ಸಾರ್ವಜನಿಕ ವಲಯದಲ್ಲಿ ಮುಂದುವರಿಸಿ ಪುನಶ್ಚೇತನಗೊಳಿಸಲು ಸರಕಾರ ನಿರ್ಧರಿಸಿದೆ. 2022-23ರಲ್ಲಿ ರೂ.50 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿಟ್ಟಿದೆ. ಇಲ್ಲಿನವರೆಗೆ 45 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ 2022ನೇ ಸಾಲಿನಲ್ಲಿ ಹೊಸ ಸಕ್ಕರೆ ಕಾರ್ಖಾನೆ ಹಾಗೂ ಎಥನಾಲ್ ಘಟಕ ಸ್ಥಾಪನೆಗಾಗಿ ಅಂತರ ಪ್ರಮಾಣ ಪತ್ರ ಕೋರಿ 42 ಹೊಸ ಅರ್ಜಿಗಳು ಉದ್ಯಮಿಗಳಿಂದ ಸ್ವೀಕೃತವಾಗಿವೆ ಎಂದು ತಿಳಿಸಿದರು.

ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಗುರಿ ಸಾಧನೆ:

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರೈತ ಮೋರ್ಚಾ ಪ್ರಭಾರಿ ಎನ್. ರವಿಕುಮಾರ್ ಅವರು ಮಾತನಾಡಿ, ರಾಜ್ಯದ ಸಕ್ಕರೆ ಕಾರ್ಖಾನೆಗಳು ಪೆಟ್ರೋಲ್‍ನೊಂದಿಗೆ ಶೇ.10 ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಈಗಾಗಲೇ ಸಾಧಿಸಿವೆ. ಪ್ರಸ್ತುತ 34 ಸಕ್ಕರೆ ಕಾರ್ಖಾನೆಗಳು ಡಿಸ್ಟಿಲರಿ/ ಎಥನಾಲ್ ಘಟಕಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರಕಾರವು ಪ್ರತಿ ಮೆ.ಟನ್ ಕಬ್ಬಿಗೆ 2021-22ನೇ ಸಾಲಿನಲ್ಲಿ ಎಫ್‍ಆರ್‍ಪಿ ದರ ರೂ.2900 ನಿಗದಿಮಾಡಿತ್ತು. 2022-23ನೇ ಸಾಲಿಗೆ ಕಳೆದ ಸಾಲಿಗಿಂತ ಹೆಚ್ಚುವರಿಯಾಗಿ 150 ರೂಪಾಯಿ ನೀಡಲು ನಿಗದಿ ಮಾಡಿದೆ. ಇದಲ್ಲದೆ ಎಥೆನಾಲ್‍ನಿಂದ ಹೆಚ್ಚುವರಿಯಾಗಿ 50 ರೂಪಾಯಿ ಸೇರಿ ಮೆ.ಟನ್‍ಗೆ ರೂ. 200 ಗಳಷ್ಟು ಹೆಚ್ಚುವರಿ ದರ ಸಿಗಲಿದೆ. ಈ ಹೆಚ್ಚುವರಿ ದರ ನಿಗದಿ ಮಾಡಿದ ಕೇಂದ್ರ ಸರಕಾರಕ್ಕೂ ಕೃತಜ್ಞತೆಗಳು ಎಂದರು.
2022-23ನೇ ಹಂಗಾಮು ಮಾರ್ಚ್/ಏಪ್ರಿಲ್ 2023ರಂದು ಮುಕ್ತಾಯವಾಗಲಿದ್ದು, ಹಂಗಾಮು ಮುಕ್ತಾಯಗೊಂಡ ಬಳಿಕ ಸಕ್ಕರೆ, ಎಥನಲ್, ಇತರೆ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಲೆಕ್ಕಾಚಾರ ಮಾಡಿ ಕಾರ್ಖಾನೆ ಮತ್ತು ರೈತರಿಗೆ ಹಂಚಿಕೆ ಮಾಡಲಾಗುವುದು. ಆಗಲೂ ರೈತರಿಗೆ ಹೆಚ್ಚುವರಿ ಬೆಲೆ ಸಿಗುವ ಸಾಧ್ಯತೆ ಇದೆ. ರಾಜ್ಯ ಸರಕಾರವು ಬಾಗಲಕೋಟೆ ಜಿಲ್ಲೆಯ ಕೆಲವೊಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿ ಎಥನಾಲ್ ಉತ್ಪಾದಿಸುವ ಕಾರ್ಖಾನೆಗಳು ರೈತರ ಪ್ರತಿ ಟನ್ ಕಬ್ಬಿಗೆ ರೂ.2850 ಅನ್ನು ಪಾವತಿಸಲು ಸೂಚಿಸಿದೆ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಇ.ಐ.ಡಿ. ಪ್ಯಾರಿ ಸಕ್ಕರೆ ಕಾರ್ಖಾನೆಯು ಸರಕಾರ ನಿಗದಿಪಡಿಸಿದ ದರದ ಜೊತೆಗೆ ಪ್ರತಿ ಮೆ.ಟನ್ ಒಂದಕ್ಕೆ ರೂ. 150ರಂತೆ ಹೆಚ್ಚುವರಿ ಕಬ್ಬಿನ ಬಿಲ್ಲನ್ನು ರೈತರಿಗೆ ಪಾವತಿಸಲು ಒಪ್ಪಿದೆ. ರಾಜ್ಯ ಸರಕಾರವು ಎಫ್‍ಆರ್‍ಪಿಗಿಂತ ಹೆಚ್ಚುವರಿ ಕಬ್ಬಿನ ದರನ್ನು ನಿಗದಿಪಡಿಸುವ ಸಂಬಂಧ ಸಾಧಕ- ಬಾಧಕವನ್ನು ಪರಿಗಣಿಸಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಾದ ಶಿವಾನಂದ ಎಚ್.ಕಲಕೇರಿ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ನೇಮಿಸಿತ್ತು. ಅದರ ಶಿಫಾರಸಿನನ್ವಯ ಎಫ್‍ಆರ್‍ಪಿ ಜೊತೆಗೆ ಪ್ರತಿ ಮೆಟ್ರಿಕ್ ಟನ್‍ಗೆ 50 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಲು ಅಧಿಸೂಚನೆಯನ್ನೂ ಹೊರಡಿಸಿದೆ ಎಂದು ವಿವರಿಸಿದರು.
ರೈತರ ಹಿತದೃಷ್ಟಿಯಿಂದ ರಾಜ್ಯ ಸರಕಾರವು ಕ್ರಮಗಳನ್ನು ಕೈಗೊಂಡಿದೆ. ಬಿಜೆಪಿ ಸರಕಾರವು ಸದಾ ರೈತರ ಪರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಕು! ಮಂಜುಳ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: