Design a site like this with WordPress.com
Get started

ಚುನಾವಣಾ ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲು ಕುಯಿಲಾಡಿ ಕರೆ

ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ

News by: ಜನತಾಲೋಕವಾಣಿನ್ಯೂಸ್

ಉಡುಪಿ: ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಜೊತೆಗೆ ವಿವಿಧ ಹಂತದ ಸಭೆಗಳು, ಮತದಾರರ ಪಟ್ಟಿ ಪರಿಶೀಲನೆ ಮತ್ತು ಪರಿಷ್ಕರಣೆ ಮುಂತಾದ ಪ್ರಮುಖ ತುರ್ತು ಕೆಲಸ ಕಾರ್ಯಗಳೊಂದಿಗೆ ಚುನಾವಣಾ ಪೂರ್ವ ಸಿದ್ಧತೆಗೆ ಬದ್ಧತೆಯಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳಿಗೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.



ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಮಟ್ಟದ ಸಮಾವೇಶವು ಡಿ.18ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ ಗರಿಷ್ಠ ಸಂಖ್ಯೆಯಲ್ಲಿ ಅಪೇಕ್ಷಿತರು ಭಾಗವಹಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಹಾಗೂ ಸಿದ್ಧತೆಗಳನ್ನು ನಡೆಸಬೇಕು. ಡಿ.8ರೊಳಗೆ ಎಲ್ಲಾ ಮಂಡಲಗಳ ವಿಶೇಷ ಕಾರ್ಯಕಾರಿಣಿ ಸಭೆ ಹಾಗೂ ಡಿ.15ರೊಳಗೆ ಎಲ್ಲಾ ಮೋರ್ಚಾಗಳ ಪ್ರಶಿಕ್ಷಣ ವರ್ಗವನ್ನು ನಡೆಸಬೇಕು. ಡಿ.8 ರೊಳಗೆ ಮತದಾರರ ಪಟ್ಟಿಯ ಪರಿಣಾಮಕಾರಿ ಪರಿಷ್ಕರಣೆ ನಡೆಸುವ ನಿಟ್ಟಿನಲ್ಲಿ ಡಿ.3 ಮತ್ತು 4ರಂದು ಜಿಲ್ಲೆಯಾದ್ಯಂತ ಮತದಾರರ ಹೆಸರು ನೊಂದಾವಣೆ ಮತ್ತು ಪರಿಷ್ಕರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಮಂಡಲವಾರು ಶಕ್ತಿ ಕೇಂದ್ರಗಳ ಸಭೆಗಳು ಮುಗಿದ ತಕ್ಷಣ ಜನವರಿ ತಿಂಗಳಲ್ಲಿ ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ಫಲಾನುಭವಿಗಳ ಸಭೆಗಳನ್ನು ನಡೆಸಿ ಸರಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳ ಮಾಹಿತಿ ನೀಡಿ ವಿಚಾರ ವಿನಿಮಯ ನಡೆಸಲಾಗುವುದು ಎಂದು ಕುಯಿಲಾಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಮಾತನಾಡಿ ಬಿಜೆಪಿ ಎಂದಿಗೂ ತನ್ನ ವಿಚಾರಧಾರೆ ಮತ್ತು ಕಾರ್ಯ ಪದ್ಧತಿಯಲ್ಲಿ ಯಾವುದೇ ರಾಜಿಮಾಡಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದೆಲ್ಲೆಡೆ ಅದ್ಭುತ ಅಭಿವೃದ್ಧಿಯೊಂದಿಗೆ ಭಾರತ ವಿಶ್ವಗುರು ಗುರಿಯೊಂದಿಗೆ ಮುನ್ನಡೆಯುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ದಾಖಲೆಯ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗಿವೆ. ಮುಂದಿನ ವಿಧಾನಸಭಾ ಚುನಾವಣಾ ವಾತಾವರಣ ಬಿಜೆಪಿ ಪರವಾಗಿದೆ. ಬೂತ್ ಗೆದ್ದರೆ ದೇಶ ಗೆದ್ದಂತೆ. ಪಕ್ಷದ ಚಿಹ್ನೆಯನ್ನು ಗೆಲ್ಲಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮನೆ ಪ್ರವಾಸ, ಹೊಸ ಮತದಾರರ ಸೇರ್ಪಡೆ, ಫಲಾನುಭವಿಗಳ ಬೇಟಿ ಸಹಿತ ನಿರಂತರ ಶಕ್ತಿ ಕೇಂದ್ರ ಹಾಗೂ ಬೂತ್ ಸಭೆಗಳನ್ನು ನಡೆಸಿ ಬೂತ್ ಗೆಲುವಿಗೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ಸಮಯ ಬಾಕಿ ಇದೆ. ಬಿಜೆಪಿ ಸೈದ್ಧಾಂತಿಕವಾಗಿ ಬೆಳೆದು ಬಂದ ದಾರಿ ಮತ್ತು ಮುಂದಿನ ಗುರಿಯ ಬಗ್ಗೆ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಚಿಂತನ ಮಂಥನ ನಡೆದಿದೆ. ರಾಜ್ಯದ ಎಲ್ಲಾ 15 ವಿಭಾಗಗಳಲ್ಲೂ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ. ಪಕ್ಷದ ಸಂಘಟನಾತ್ಮಕ ಸಭೆಗಳನ್ನು ನಿಗದಿತ ಅವಧಿಯೊಳಗೆ ಪೂರೈಸಿ ಎಲ್ಲರೂ ಚುನಾವಣಾ ಪೂರ್ವ ಸಿದ್ಧತಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಪೇಜ್ ಪ್ರಮುಖ್, ಬೂತ್ ಸಮಿತಿಯ ಸಹಿತ ವಿವಿಧ ಸ್ತರಗಳಲ್ಲಿ ಚುನಾವಣಾ ಸಂಬಂಧಿತ ಸಮಾವೇಶಗಳು ನಡೆಯಲಿವೆ. ಸಂಘಟಿತ ಪ್ರಯತ್ನದ ಮೂಲಕ ಮಗದೊಮ್ಮೆ ಉಡುಪಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ರಾಜ್ಯದ 150 ಸ್ಥಾನಗಳ ಗುರಿಯನ್ನು ತಲುಪಲು ವಿಶೇಷ ಕೊಡುಗೆ ನೀಡುವಂತಾಗಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಮತದಾರ ಪಟ್ಟಿಯ ಪರೀಷ್ಕರಣೆ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: