
News by: ಜನತಾಲೋಕವಾಣಿನ್ಯೂಸ್
ಉಡುಪಿ, ನ.22 : ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 1,680 ಪಿಎಫ್ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು. ಇದೀಗ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದೆ. ಇದರಿಂದ ಕೆಲಸ ಕಳೆದುಕೊಂಡಿರುವ ಪಿಎಫ್ಐ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ದ ಪ್ರತೀಕಾರ ನಡೆಸಲು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಪ್ರಕರಣವು ಇದೇ ಕಾರಣಕ್ಕೆ ನಡೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಆರೋಪಿಸಿದರು.
ಅವರು ನ.22ರಂದು ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕೊಯಮುತ್ತೂರಿನಲ್ಲಿ ನಡೆದ ಬಾಂಬ್ ದಾಳಿಯ ಮಾದರಿಯಲ್ಲೇ ಮಂಗಳೂರಿನಲ್ಲಿಯೂ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದೆ. ಅಲ್ಲಿನ ಸರ್ಕಾರ ಅದನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ಆ ಘಟನೆಯನ್ನು ಎನ್ಐಎಗೆ ವಹಿಸುತ್ತಿದ್ದರೇ ಮಂಗಳೂರಿನ ಘಟನೆ ನಡೆಯುತ್ತಿರಲಿಲ್ಲ ಎಂದರು.
ತಾಕತ್ತಿದ್ದರೇ ಪಿಎಫ್ಐಯನ್ನು ನಿಷೇಧಿಸಿ ನೋಡೋಣ ಎಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದರು. ಬಿಜೆಪಿ ಸರ್ಕಾರ ಪಿಎಫ್ಐಯನ್ನು ನಿಷೇಧಿಸಿ ತನ್ನ ತಾಕತ್ತನ್ನು ತೋರಿಸಿದೆ. ಮಾತ್ರವಲ್ಲ ಪಿಎಫ್ಐನ ಭಯೋತ್ಪದಕ ಕೃತ್ಯಗಳನ್ನು ನಿಗ್ರಹಿಸುವ ತಾಕತ್ತನ್ನೂ ಹೊಂದಿದೆ ಎಂದವರು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ‘ಮಿಶನ್ 150’ ನೂರಕ್ಕೆ ನೂರು ಯಶಸ್ವಿಯಾಗುತ್ತದೆ. ಈಗಾಗಲೇ ಚುನಾವಣೆಗೆ ಸಿದ್ಧತೆಯಾಗಿ ದೊಡ್ಡಬಳ್ಳಾಪುರ, ಕಲಬುರ್ಗಿ, ಬಳ್ಳಾರಿಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗಿದೆ. ಮುಂದೆ ಮೈಸೂರಿನಲ್ಲಿ ಎಸ್ಸಿ ಮೋರ್ಚಾ ಸಮಾವೇಶ, ಶಿವಮೊಗ್ಗದಲ್ಲಿ ಹಿಂ.ವ. ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶಗಳನ್ನು ನಡೆಸಲಾಗುತ್ತದೆ ಎಂದರು.
ಗುಜರಾತ್ ಚುನಾವಣೆಯಲ್ಲಿ ಶೇ.38ರಷ್ಟು ಸ್ಥಾನಗಳನ್ನು ಯುವಕರಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಅದಕ್ಕಿಂತಲೂ ಹೆಚ್ಚು ಸ್ಥಾನ ಯುವಕರಿಗೆ ಸಿಗುತ್ತದೆ, ಮಹಿಳೆಯರಿಗೂ ಸಾಕಷ್ಟು ಸ್ಥಾನಗಳನ್ನು ನೀಡಲಾಗುತ್ತದೆ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ನಡೆಸಿದರು, ಆದರೇ ಅವರಿಗೆ ‘ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಮಾತ್ರ ಜೋಡೋ ಮಾಡುವುದಕ್ಕಾಗಲೇ ಇಲ್ಲ’ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.