
News By: ಜನತಾಲೋಕವಾಣಿನ್ಯೂಸ್
ಉಡುಪಿ: ಪಿ.ಎಫ್.ಐ ಸಂಘಟನೆಯನ್ನು ದೇಶದಾದ್ಯಂತ ನಿಷೇಧಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ನಡೆದಿದೆ. ಆರ್ಟಿಕಲ್ 370 ರದ್ದು ಹಾಗು ರಾಮ ಮಂದಿರವನ್ನು ಕಟ್ಟುತ್ತಿರುವುದನ್ನು ಸಹಿಸಿಕೊಳ್ಳಲಾಗದ ಉಗ್ರರು ಈ ರೀತಿ ಭಯೋತ್ಪಾದಕ ಚಟುವಟಿಕೆಯ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ಹೇಳಿದರು.
ಅವರು ಮಂಗಳವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲಿನಲ್ಲಿ ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಪಿ.ಎಫ್.ಐ ಬ್ಯಾನ್ ವಿಚಾರ:

ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಿ.ಎಫ್.ಐ ಸಂಘಟನೆಯವರ ಕೇಸನ್ನು ವಾಪಾಸು ಪಡೆದು, ಅವರನ್ನು ಪೋಷಿಸಿದರು. ಆದರೆ ಬಿಜೆಪಿ ಸರಕಾರ ಎರಡೇ ಗಂಟೆಯಲ್ಲಿ ದೇಶದ ವಿವಿಧ ರಾಜ್ಯದ 200 ಕಡೆಗಳಲ್ಲಿ ಪಿ.ಎಫ್.ಐ ಮುಖಂಡರ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿ, ಮಹತ್ವದ ದಾಖಲೆ ಸಂಗ್ರಹಿಸಿ ಅಂದೇ ಸಂಘಟನೆಯನ್ನು ನಿಷೇಧಿಸಿತು ಎಂದರು.
ಒಂದೇ ಒಂದು ಬುಲೆಟ್ ಪ್ರಯೋಗಿಸದೇ, ರಕ್ತದೋಕುಳಿಯನ್ನು ಹರಿಸದೇ ಆರ್ಟಿಕಲ್ 370ನ್ನು ಹತ್ತೇ ನಿಮಿಷದಲ್ಲಿ ಕಿತ್ತು ಬಿಸಾಡಿದ್ದೇವೆ. ತ್ರಿವಳಿ ತಲಾಖ್ ನಿಷೇಧಿಸಿರುವುದು ಬಿಜೆಪಿ ಸರಕಾರವೇ ಎಂದವರು ಹೇಳಿದರು.
ಬಿಜೆಪಿ ಸರಕಾರದ ಸಾಧನೆಯನ್ನು ಜನತೆಗೆ ಮುಟ್ಟಿಸಿ:
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಬಿಜೆಪಿ ಸರಕಾರ ದೇಶಕ್ಕೆ ಮತ್ತು ಜನಸಾಮಾನ್ಯರಿಗೆ ನೀಡಿರುವ ಅದ್ಬುತ ಯೋಜನೆಗಳನ್ನು ಜನತೆಗೆ ತಿಳಿಸುವ ಜವಾಬ್ದಾರಿ ಯುವಮೋರ್ಚಾ ಕಾರ್ಯಕರ್ತರಿಗಿದೆ. ಬೂತ್ ಮಟ್ಟದಲ್ಲಿ ಜನತೆಗೆ ಬಿಜೆಪಿಯ ಸಾಧನೆಗಳನ್ನು ತಿಳಿಸಲು, ಕಾರ್ಯಕರ್ತರಿಗೆ ವಿಷಯವನ್ನು ನೀಡುವ ಒಂದು ದಿನದ ವರ್ಗವನ್ನು ಯುವಮೋರ್ಚಾ ಆಯೋಜನೆ ಮಾಡಿ ಎಂದು ಕರೆ ನೀಡಿದರು.
ಆತ್ಮನಿರ್ಭರ ಭಾರತ:
ರಕ್ಷಣಾತ್ಮಕವಾಗಿ ಭಾರತವನ್ನು ಗಟ್ಟಿಗೊಳಿಸಲು ಆತ್ಮನಿರ್ಭರ ಭಾರತ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯುದ್ದ ವಿಮಾನಕ್ಕೆ ಸಂಭಂದಿಸಿದ 70% ವಸ್ತುಗಳು ಕರ್ನಾಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿಯೇ ಅಭಿವೃದ್ಧಿ ಹೆಚ್ಚು:
500 ಮಲ್ಟಿ ನ್ಯಾಷನಲ್ ಕಂಪೆನಿಗಳಲ್ಲಿ 400 ಕಂಪೆನಿಗಳ ಮುಖ್ಯ ಕಚೇರಿ ಇರುವುದು ಬೆಂಗಳೂರಿನಲ್ಲಿ; ಜೊತೆಗೆ ಎಫ್.ಡಿ.ಐ ಹೂಡಿಕೆಯೂ ಬೆಂಗಳೂರಿನಲ್ಲಿಯೇ ಹೆಚ್ಚು ಆಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ -2 5,000 ಕೋಟಿ ರೂ. ವೆಚ್ಚದಲ್ಲಿ ವಿಶ್ವದಲ್ಲೇ ವಿಶಿಷ್ಟ ವಿಮಾನ ನಿಲ್ದಾಣವಾಗಲಿದೆ. ರಾಮಾಯಣ, ಮಹಾಭಾರತ ಗ್ರಂಥದಲ್ಲಿ ಉಲ್ಲೇಖವಾಗಿರುವ 2,000 ಗಿಡಮೂಲಿಕೆಗಳನ್ನು ವಿಮಾನ ನಿಲ್ದಾಣದಲ್ಲಿ ನೆಡಲಾಗಿದೆ.
ಅಹಮದಾಬಾದ್ ನಿಂದ ಮುಂಬೈಗೆ ಬುಲೆಟ್ ಟ್ರೈನ್:
ಗುಜರಾತ್ ನ ಅಹಮದಬಾದ್ ನಿಂದ ಮುಂಬೈಗೆ ಬುಲೆಟ್ ಟ್ರೈನ್ ಆರಂಭಿಸಬೇಕೆಂದು ಮೋದಿಯವರ ಕನಸಾಗಿತ್ತು. ಆದರೆ ಕಳೆದ ಎರಡೂವರೆ ವರ್ಷದಿಂದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇಲ್ಲದ ಕಾರಣ ವಿಳಂಬವಾಗಿತ್ತು. ಆದರೆ ಈಗ ಈ ಯೋಜನೆ ಪ್ರಗತಿಯನ್ನು ಸಾಧಿಸಿದೆ ಎಂದರು.
ರಾಮಮಂದಿರ ಯಾವಾಗ ಆಗುತ್ತದೆ ಎಂದು ವ್ಯಂಗ್ಯವಾಡುತ್ತಿದ್ದವರು 2024ರ ಜನವರಿಗೆ ಅಯೋಧ್ಯೆ ತೆರಳಲು ಟಿಕೇಟ್ ಕಾಯ್ದಿರಿಸಿ, ಪ್ರಭು ಶ್ರೀರಾಮಚಂದ್ರನ ದರ್ಶನ ಮಾಡಿ ಬನ್ನಿ ಎಂದರು.
ಚುನಾವಣೆ ವೇಳೆ ರಾಹುಲ್ ಗಾಂಧಿ ಶಸ್ತ್ರ ತ್ಯಾಗ..!:
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರಬೇಕಾದರೇ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ಒಂದು ಬಾರಿ ಗುಜರಾತಿನ ಯಾವುದೋ ಒಂದು ಜಾಗದಲ್ಲಿ 200 ಜನರ ಸಭೆ ನಡೆಸಿ, ಚುನಾವಣಾ ಪೂರ್ವದಲ್ಲಿಯೇ ಶಸ್ತ್ರ ತ್ಯಾಗ ಮಾಡಿದರು. ಕರ್ನಾಟಕದ ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ರಾಹುಲ್ ಗಾಂಧಿ ಶಸ್ತ್ರತ್ಯಾಗ ಮಾಡುವುದು ಖಂಡಿತಾ ಎಂದು ವ್ಯಂಗವಾಡಿದರು.
ಜಮಾನತ್ ಜಪ್ತ್ ಪಾರ್ಟಿ (ಜೆಜೆಪಿ/ಎಎಪಿ):
ಕೆಲವೇ ಕೆಲವು ಆಂಗ್ಲ ಪತ್ರಿಕೆಗಳ ಕೃಪಾಪೋಷಿತದಿಂದಾಗಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿರುವ ಆಪ್ ಪಕ್ಷಕ್ಕೆ ಯು.ಪಿಯಲ್ಲಿ ಆದಂತೆ ಮುಖಭಂಗ ಮತ್ತೊಮ್ಮೆ ಆಗಲಿದೆ. ಯು.ಪಿ ಯಲ್ಲಿ ಆಪ್ ಪಕ್ಷವನ್ನು ಜೆಜೆಪಿ (ಜಮಾನತ್ ಜಪ್ತ್ ಪಾರ್ಟಿ) ಎಂದು ವ್ಯಂಗಿಸುತ್ತಾರೆ. ಗುಜರಾತ್ ನಲ್ಲಿ 182 ಕ್ಷೇತ್ರದಲ್ಲಿ ಆಪ್ ಠೇವಣೆ ಕಳೆದುಕೊಳ್ಳುವುದು ಶತಸಿದ್ದ. ಬಿಜೆಪಿ ಪಕ್ಷ 150 ಸ್ಥಾನದೊಂದಿಗೆ ಪೂರ್ಣ ಬಹುಮತ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಪಕ್ಷಕ್ಕೆ ಸಂಘಟನಾತ್ಮಕ ಶಕ್ತಿ ತುಂಬುವಲ್ಲಿ ಉಡುಪಿಗೆ ಐತಿಹಾಸಿಕ ಹಿನ್ನೆಲೆ ಇದೆ. ಸಶಕ್ತ ಪಕ್ಷ ಸಂಘಟನೆ ಮತ್ತು ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಮೋರ್ಚಾದ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ಜೊತೆಗೆ ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳ ಪ್ರಚಾರದ ಮೂಲಕ ಮುಂದಿನ ಚುನಾವಣೆಗಳನ್ನು ಸಮರ್ಪಕವಾಗಿ ಎದುರಿಸಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು.
ಉದ್ಘಾಟನಾ ಅವಧಿಯ ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳೇಕಾಯಿ, ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ವೆಂಕಟೇಶ್ ಸ್ವಾಗತಿಸಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್ ಪ್ರಸ್ತಾವಿಸಿದರು. ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ ವಂದಿಸಿದರು. ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ನಿರೂಪಿಸಿದರು.
ಯುವಮೋರ್ಚಾ ರಾಜ್ಯ ವಿಶೇಷ ಕಾರ್ಯಕಾರಿಣಿಯ ಪೂರ್ವಭಾವಿಯಾಗಿ ಉಡುಪಿ ನಗರದ ಜೋಡುಕಟ್ಟೆಯಿಂದ ಯುವಮೋರ್ಚಾ ಕಾರ್ಯಕರ್ತರು 500ಕ್ಕೂ ಮಿಕ್ಕಿ ಬೈಕ್ ಗಳಲ್ಲಿ ರ್ಯಾಲಿಯ ಮೂಲಕ ಮಣಿಪಾಲದ ಡಾ! ವಿ.ಎಸ್. ಆಚಾರ್ಯ ವೃತ್ತಕ್ಕೆ ತೆರಳಿ ಮಾಲಾರ್ಪಣೆಗೈದರು. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ, ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್, ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಶಾಂತಿನಿಕೇತನ ಸಹಿತ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ವಿವಿಧ ಸ್ತರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.