
News by: ಜನತಾಲೋಕವಾಣಿನ್ಯೂಸ್
ಬೆಂಗಳೂರು: ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದಲ್ಲೇ ನಾವು ಆಡಳಿತ ನಡೆಸುತ್ತಿದ್ದೇವೆ. ದಲಿತ ಸಮುದಾಯಗಳಿಗೆ ಹೆಚ್ಷು ಸೌಲಭ್ಯ ನೀಡಿದ್ದು ನಮ್ಮ ಸರ್ಕಾರ. ಸ್ವಾತಂತ್ರ್ಯ ಬಂದ ನಂತರ ಎಸ್ಟಿ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದು ಮೋದಿ ಸರ್ಕಾರ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬಳ್ಳಾರಿಯಲ್ಲಿ ನ.20ರಂದು ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಾಯಕರೇ ನಿಜವಾದ ನಾಯಕರು, ಅವರು ಸ್ನೇಹಕ್ಕು ಸೈ ಸಮರಕ್ಕೂ ಸೈ. ಮೊಘಲರು, ಬ್ರಿಟೀಷರು, ಹೈದರ್, ಟಿಪ್ಪು, ಬಿಜಾಪುರ ಸುಲ್ತಾನರನ್ನು ಹಿಮ್ಮೆಟ್ಟಿಸಿದ್ದು ವಾಲ್ಮೀಕಿ ಸಮಾಜ. ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಇಂದು ಸೇರಿರುವ ನೀವುಗಳೆಲ್ಲ ಮತ್ತೊಮ್ಮೆ ದಲಿತರ ಸೇವೆ ಮಾಡಲು ಬಿಜೆಪಿಗೆ ಅವಕಾಶ ನೀಡಲು ಬಂದಿದ್ದೀರಿ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದರೂ ಸಹ ರಾಷ್ಟ್ರೀಯ ಅಧ್ಯಕ್ಷರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿರುವುದು ಸಂತಸದ ವಿಷಯ ಎಂದು ನುಡಿದರು.
ಸಿದ್ದರಾಮಯ್ಯ ಅವರೇ ಅಹಿಂದ ನನ್ನ ಹಿಂದೆ ಇದೆ ಹೇಳುತ್ತೀರಲ್ಲ ಎಲ್ಲಿ ಇದೆ ಹೇಳಿ. ಇಲ್ಲಿ ಬಂದು ನೋಡಿ ಅಹಿಂದ ಇಲ್ಲಿದೆ. ಅಹಿಂದ ಎಂದು ಹೇಳಿ ಬರೀ ಅವರು ಮುಂದೆ ಹೋಗಿ ಉಳಿದವರನ್ನು ಹಿಂದೆ ಬಿಟ್ಟರು. ಎಸ್ಸಿ ಎಸ್ಟಿ ಸಮುದಾಯದ ಮತ ಪಡೆದು ಅವರನ್ನು ಉದ್ಧಾರ ಮಾಡಿಲ್ಲ. ವಾಲ್ಮೀಕಿ ಸಮುದಾಯ ಜಾಗೃತವಾಗಿದೆ. ನೀವು ಸ್ವಾಭಿಮಾನದಿಂದ ಮುಂದೆ ನಡೆಯಿರಿ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಇದೇ ಬಳ್ಳಾರಿಯಲ್ಲಿ ಜೋಡೋ ಯಾತ್ರೆ ಮಾಡಿದ್ದರು. ಕಡಿಮೆ ಜನ ಸೇರಿದ್ದನ್ನು ನಾವು ನೋಡಿದ್ದೇವೆ. ಅದನ್ನೆ ಸುನಾಮಿ ಎಂದರು. ಈಗ ಬಂದು ನೋಡಿ ಇಂದು ಸುನಾಮಿಯ ಅಪ್ಪ ಸೇರಿದ್ದಾರೆ. ಬಳ್ಳಾರಿಯ ಕಾರ್ಯಕ್ರಮದಲ್ಲಿ ರಾಹುಲ್ ಬಳ್ಳಾರಿಗೆ ಮೂರು ಸಾವಿರ ಕೋಟಿ ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದರು. ಆದರೆ ಅವರ ತಾಯಿ ಗೆದ್ದ ನಂತರ ಮೂರು ರುಪಾಯಿಯನ್ನು ಕೊಟ್ಟಿಲ್ಲ. ಬಳ್ಳಾರಿಯ ಜನರಿಗೆ ಮೋಸ ಮಾಡಿದ ಕಾಂಗ್ರೆಸ್‍ಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು. ಹತ್ತಕ್ಕೆ ಹತ್ತರಲ್ಲಿ ಬಿಜೆಪಿ ಗೆಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ನೀಡಲಾಗಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ ಎಂದು ವಿವರಿಸಿದರು.
ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮಾತು ಕೊಟ್ಟಿದ್ದೆವು. ಶ್ರೀರಾಮುಲುಗೆ ಗೇಲಿ ಮಾಡಿದರು. ಇಂದು ಈ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ರಾಮುಲು ಮಾತು ಉಳಿಸಿಕೊಂಡಿದ್ದಾರೆ. ರಾಮುಲು ಬಗ್ಗೆ ಹಗುರವಾಗಿ ಮಾತನಾಡಬೇಡಿ. ಆತ ಸಮುದಾಯದ ಹೃದಯದ ಸಾಮ್ರಾಟ. ಸಿದ್ದರಾಮಯ್ಯ ಅವರು ರಾಮುಲು ಅವರನ್ನು ಪೆದ್ದ ಎಂದು ಜರಿದರು. ನೀನು ಭಾರಿ ಬುದ್ಧಿವನಂತಲ್ಲ. ಈ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿರಿ? ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಟ್ಟಿರಿ? ಹಾಲಮತ ಸಮುದಾಯಕ್ಕೂ ಮೋಸ ಮಾಡಿದ್ರಿ. ನಿಮ್ಮ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಕುರುಬ ಸಮುದಾಯದ ಸಚಿವರು ಇರಲಿಲ್ಲ. ಯಡಿಯೂರಪ್ಪ ಅವರು ಕುರುಬರಿಗೆ, ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಬಿಜೆಪಿ ಮಾತ್ರ ಎಂದು ತಿಳಿಸಿದರು.
ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಎಸ್ಸಿ ಎಸ್ಟಿ ಸಮುದಾಯಕ್ಕಾಗಿ 100 ಹಾಸ್ಟೆಲ್ ಮಾಡುತ್ತೇವೆ. ಸಾಮಾಜಿಕ, ಆರ್ಥಿಕವಾಗಿ ನ್ಯಾಯ ಕೊಡಲು ನಾವು ಬದ್ಧ. ನಾವು ಮೀಸಲಾತಿ ಹೆಚ್ಚಿಸುವ ಮೂಲಕ ಸಂವಿಧಾನಬದ್ಧ ಹಕ್ಕನ್ನು ನಿಮಗೆ ಕೊಟ್ಟಿದ್ದೇವೆ. ಇದುವರೆಗೂ ದೇಶದ ಜನರಿಗೆ ಮೋಸ ಮಾಡುತ್ತ ಬಂದ ಕಾಂಗ್ರೆಸ್ ನ ಬೇರು ಸಮೇತ ಕಿತ್ತೊಗೆಯಲು ನೀವೆಲ್ಲ ಸಂಕಲ್ಪ ಮಾಡಿ. ಇದೊಂದು ಸಂಕಲ್ಪಗಳ ಸಮಾವೇಶವಾಗಿದೆ. ಕಾಂಗ್ರೆಸ್ ಗೆ ತಕ್ಕಪಾಠ ಕಲಿಸೋಣ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಡೀ ಸಮುದಾಯಕ್ಕೆ ನಾನು ಒಂದೇ ಒಂದು ಮನವಿ ಮಾಡಿಕೊಳ್ಳುತ್ತೇನೆ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹತ್ತು ಕ್ಷೇತ್ರಗಳಿವೆ. ಆದರೆ ನಾವು ಗೆದ್ದಿದ್ದು ಕೇವಲ ಐದು ಸ್ಥಾನ. ಆದರೆ ಬರುವ ಚುನಾವಣೆಯಲ್ಲಿ ಹತ್ತಕ್ಕೆ ಹತ್ತೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು ಎಂದು ಜನರನ್ನು ವಿನಂತಿಸಿದರು.
ಎಸ್ಟಿ ಸಮುದಾಯದ ಅನೇಕ ವರ್ಷಗಳ ಹೋರಾಟ, ಬೇಡಿಕೆಯಾಗಿದ್ದ ಮೀಸಲಾತಿ ಹೆಚ್ಚಿಸಿದ್ದು ಮಾತ್ರ ಬಿಜೆಪಿ ಸರ್ಕಾರ. ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ, ಜಯಂತಿ, ಜಯಂತಿಗಾಗಿ ರಜೆ ಘೋಷಣೆ ಮಾಡಿದ್ದು ನಮ್ಮ ಸರ್ಕಾರ. ಸಣ್ಣ ಕೈಗಾರಿಕೆಗಳಿಗೆ ಶೇ. 50ರಷ್ಟು ಸಬ್ಸಿಡಿ ಸಿಗುತ್ತಿದೆ. ಈ ಹಿಂದೆ ನಾನು ಸಿಎಂ ಆಗಿದ್ದಾಗ ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಅವರು ಕೇಳಿದ ಪ್ರತಿಯೊಂದು ಕೆಲಸವನ್ನೂ ಮಾಡಿದ್ದೇನೆ. ಅದು ನಿಮಗೆಲ್ಲ ತಿಳಿದಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳನ್ನು ಎಲ್ಲಾ ಕ್ಷೆತ್ರಗಳಲ್ಲಿ ಗೆಲ್ಲಿಸಬೇಕು ಎಂದು ತಿಳಿಸಿದರು.
ಈ ಸಮಾವೇಶ ನೋಡಿ ಕಾಂಗ್ರೆಸ್ ನವರಿಗೆ ಆಘಾತವಾಗಿದೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಬರೀ ಲೂಟಿ ಮಾಡಿದರು. ಇದನ್ನೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೂರು ತಲೆಮಾರಿಗಾಗುಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಅಂದರೆ ಅಭಿವೃದ್ಧಿ ಪರ ಪಕ್ಷ. ಕಾಂಗ್ರೆಸ್ ಎಂದರೆ ಲೂಟಿಕೋರ ಪಕ್ಷವಾಗಿದೆ. ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಆ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡಿ, ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯಕ್ಕಾಗಿ ಹಾಗೂ ಎಸ್ಸಿ ಸಮುದಾಯಗಳಿಗೆ ರಾಜ್ಯದ ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ಸಮುದಾಯಗಳು ಋಣಿಯಾಗಿರಬೇಕು. ಮೋದಿ ಹಾಗೂ ಬೊಮ್ಮಾಯಿ ಅವರ ನೇತತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಕೆಲಸ ಕಾರ್ಯ ಮಾಡುತ್ತಿವೆ. ರಾಮುಲು ಅವರು ಹೇಳಿದ ಎಲ್ಲಾ ಮಾತುಗಳನ್ನು ನಾನು ಒಪ್ಪಿ ಅವರನ್ನು ಬೆಂಬಲಿಸುತ್ತೇನೆ. ಭಗವಾನ್ ಬಿರ್ಸ ಮುಂಡಾ ಅವರ ಜಯಂತಿಯ ಸುಸಂದರ್ಭದಲ್ಲಿ ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಇದುವರೆಗೂ ಮೋಸ ಮಾಡುತ್ತಾ ಬಂದಿದೆ. ಹೀಗಾಗಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ರಾಹುಲ್ ಗಾಂಧಿ ಜೋಡೊ ಯಾತ್ರೆ ಹೊರಟಿದ್ದಾರೆ. ಸ್ವಾತಂತ್ರ್ಯ ನಂತರ ದೇಶವನ್ನು ತೋಡೊ ಮಾಡಿತ್ತು. ಆದರೆ ಈಗ ಜೋಡೊ ಯಾತ್ರೆ ಮಾಡುವ ಮೂಲಕ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅರುಣಾಚಲದಿಂದ ಗುಜರಾತ್ ವರೆಗೆ ಮೋದಿ ಸರ್ಕಾರ ಜೋಡಿಸುವ ಕೆಲಸ ಮಾಡುತ್ತಾ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡ ಎಲ್ಲಾ ಜಾತಿ, ಜನಾಂಗಗಳಿಗೆ ಅನೇಕ ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುವ ಮೂಲಕ ದಲಿತರನ್ನು ಮೇಲೆತ್ತುವ ಕಾರ್ಯ ಮಾಡುತ್ತಿದೆ. ಬಳ್ಳಾರಿಯಲ್ಲಿ ಏಕಲವ್ಯ ಮಾದರಿ ಶಾಲೆಯನ್ನು ಆರಂಭಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮ ಕೇಂದ್ರ ಸರ್ಕಾರ ಶ್ರಮಿಸಿದೆ. ಕಾಡುಕುರುಬ, ಬೆಟ್ಟಕುರುಬರ ಸಮಸ್ಯೆ ಪರಿಹರಿಸಲಾಗುವುದು. ಸಿದ್ದರಾಮಯ್ಯ ಕೇವಲ ಮಾತುಗಾರ ಆದರೆ ಶ್ರೀರಾಮುಲು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಾಯಕ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಮೋದಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕಳೆದ ಎಂಟು ವರ್ಷಗಳಿಂದ ಬಡವರ ಪರ ಕೆಲಸ ಮಾಡುತ್ತಿದೆ. ಕರೋನಾ, ಜಾಗತಿಕ ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆಯೂ ನಮ್ಮ ನಾಯಕ ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕರೋನಾದ ಹೊಡೆತದ ಮಧ್ಯೆಯೂ ದೇಶ ಸಮರ್ಥವಾಗಿ ನಡೆದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ತೆಗೆಯುತ್ತದೆ ಎಂದು ವಿಪಕ್ಷಗಳು ಸುಳ್ಳು ಹರಡಿದವು. ಆದರೆ ಅದೇ ಸಮುದಾಯಗಳಿಗೆ ಇಂದು ಮೋದಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸಿಎಂ ಬೊಮ್ಮಾಯಿಯವರು ಮೀಸಲಾತಿ ಹೆಚ್ಚ್ಚಿಸಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕಾಂಗ್ರೆಸ್ ಮಾತಿನಲ್ಲಿ ಮಾತ್ರ ದಲಿತ ಪರ ಎನ್ನುತ್ತಿದೆ. ಆದರೆ ಅಂಬೇಡ್ಕರ್ ಅವರ ಆದಿಯಾಗಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ ಪಕ್ಷ ಅದು. ಮುಳುಗುವ ಹಡಗನ್ನು ನಡೆಸಿಕೊಂಡು ಹೋಗಿ ಎಂದು ಖರ್ಗೆಯವರಿಗೆ ಹುದ್ದೆ ನೀಡಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಕೂಡಲೇ ಖರ್ಗೆಯವರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ ಅವರನ್ನು ಸೋಲಿಸಿದರು, ಅಖಂಡ ಶ್ರೀನಿವಾಸ್ ಮೂರ್ತಿಯ ಮನೆಯನ್ನೇ ಸುಡಿಸಿದರು. ಸಿದ್ದರಾಮಯ್ಯ ದಲಿತ ವಿರೋಧಿ ವ್ಯಕ್ತಿ. ಅವರಿಗೆ ಈಗಲೂ ಯಾವ ಕ್ಷೇತ್ರ ಎನ್ನುವುದೇ ಪಕ್ಕಾ ಇಲ್ಲ ಎಂದು ತಿಳಿಸಿದರು.
ಈ ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಗೆದ್ದು ತದನಂತರ ಕ್ಷೇತ್ರ ಬಿಟ್ಟು ಹೋದರು. ಅಮೇಥಿಯಲ್ಲಿ ಸೋತ ರಾಹುಲ್ ಗಾಂಧಿ ವಯನಾಡಿಗೆ ಹೋದರು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬಾದಾಮಿಗೆ ಬಂದರು; ಈಗ ಅಲ್ಲೂ ಇರದೇ ರಾಜ್ಯದ ಯಾವ ಕ್ಷೇತ್ರದಲ್ಲಿ ಕಣಕ್ಕಿಳಿಯಬೇಕೆಂದು ಹುಡುಕಾಟ ನಡೆಸಿದ್ದಾರೆ. ರಾಹುಲ್ ಗಾಂಧಿ ದಿಕ್ಕೆಟ್ಟು ದೇಶದಲ್ಲಿ ಓಡಾಡುತ್ತಿದ್ದಾರೆ ಎಂದರು.
ವಾಲ್ಮೀಕಿ ಬರೆದ ರಾಮಾಯಣ ಕಾಲ್ಪನಿಕ ಎಂದರು, ರಾಮನನ್ನು ಪ್ರಶ್ನೆ ಮಾಡಿದರು, ಯುಪಿಎ ಸರ್ಕಾರ ಬರೀ ಅಲ್ಪಸಂಖ್ಯಾತರ ಪರ ಕೆಲಸ ಮಾಡಿದೆ. ಈಗಾಗಲೆ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲೂ ಮುಕ್ತವಾಗಲಿದೆ ಎಂದು ವಿಶ್ವಾಸದಿಂದ ನುಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಇವತ್ತು ಇಲ್ಲಿ ಸೇರಿದ ಜನ ಬಂದಿರುವುದು ಅಭಿನಂದನೆ ಸಲ್ಲಿಸಲು. ಯಾವ ಸರ್ಕಾರಗಳು ಸಮುದಾಯದ ಕೂಗು ಕೇಳಿಸಿಕೊಳ್ಳದೇ ಮೀಸಲಾತಿಯನ್ನು ಹೆಚ್ಚಿಸಲಿಲ್ಲ. ಆದರೆ ಆ ಕೆಲಸ ಮಾಡಿದ್ದು ಬಿಜೆಪಿ ಮಾತ್ರ. ನಮ್ಮ ಪಕ್ಷ ಎಸ್ಟಿ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಕಾಂಗ್ರೆಸ್ ಸೇರಿ ವಿಪಕ್ಷಗಳು ಬಿಜೆಪಿ ದಲಿತ ವಿರೋಧಿ ಎಂದು ಆರೋಪಿಸಿದವು. ಆದರೆ ಅವರೆಂದಿಗೂ ಮೀಸಲಾತಿ ಹೆಚ್ಚಿಸಲ್ಲ. ಈ ಸಮುದಾಯಗಳನ್ನು ಎಂದಿಗೂ ಅಭಿವೃದ್ಧಿಯಾಗಲು ಬಿಡಲ್ಲ. ಆದರೆ ದಲಿತ, ಹಿಂದುಳಿದ ಸಮುದಾಯಗಳ ಪರ ಬಿಜೆಪಿ ಮಾತ್ರ ಇದೆ ಎಂದರು.
ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೆ ಅದೇ ಕಾಂಗ್ರೆಸ್ ನವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಾರೆ. ಶಿವನ ಆವಾಸ ಸ್ಥಾನವಾದ ಕಪಾಲಿ ಬೆಟ್ಟವನ್ನು ಕೆಪಿಸಿಸಿ ಅಧ್ಯಕ್ಷರು ಕ್ರಿಸ್ತಬೆಟ್ಟ ಮಾಡಲು ಹೊರಟರು. ಇದರ ಪರಿಣಾಮ ಅವರಿಗೆ ಉನ್ನತ ಹುದ್ದೆ ಸಿಕ್ಕಿತು. ಕಾಂಗ್ರೆಸ್ ನವರಿಗೆ ಕುಂಕುಮ ಕಂಡರೆ ಆಗಲ್ಲ. ಕೇಸರಿ ಕಂಡರೆ ಆಗಲ್ಲ. ಅಂತವರಿಗೆ ಮತ ಹಾಕಬೇಡಿ. ಕಾಂಗ್ರೆಸ್ ಮತಾಂತರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಎಂದರು.
ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದು ಕಾಂಗ್ರೆಸ್. ಹನುಮಂತನ ಅಸ್ತಿತ್ವ ಪ್ರಶ್ನಿಸಿತು. ರಾಮಾಯಣ ಕಾಲ್ಪನಿಕ ಎಂದು ಹೇಳಿತು. ಮತ್ತೊಬ್ಬ ಹೇಳ್ತಾನೆ ಹಿಂದೂ ಎಂದರೆ ಕೆಟ್ಟ ಶಬ್ದವಂತೆ. ವಿಜಯನಗರ ಸಾಮ್ರಾಜ್ಯದ ಸ್ಥಾಪಿಸುವಲ್ಲಿ ನಾಯಕ ಸಮುದಾಯದ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಇಂದು ಗಂಡುಗಲಿ ಕುಮಾರರಾಮ, ಮದಕರಿ ನಾಯಕನ ವಿರುದ್ಧ ಇದೆ. ಮದಕರಿ ನಾಯಕನನ್ನು ಮೋಸದಿಂದ ಕೊಂದ ಟಿಪ್ಪುನ ಪರ ಕಾಂಗ್ರೆಸ್ ಇದೆ. ಇಂತವರಿಗೆ ಮತ ಹಾಕಬೇಕೆ ಎಂದು ಯೋಚಿಸಬೇಕಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನವರಿಗೆ ಕೇಸರಿ ಕಂಡರೆ, ಕುಂಕುಮ ಕಂಡರೆ, ಹಿಂದೂ ಶಬ್ದ ಕೇಳಿದರೆ ಆಗಲ್ಲ. ಇಂತಹ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಠೇವಣಿ ಕಳೆದುಕೊಳ್ಳುವಂತೆ ಅಲ್ಲಿನ ಜನ ಉತ್ತರ ನೀಡಿದ್ದಾರೆ. ರಾಮನ ಜೊತೆಗೆ ಹನುಮ ಇದ್ದಂತೆ ಉತ್ತರ ಪ್ರದೇಶದ ರಾಮ ಕರ್ನಾಟಕದ ಹನುಮ ಜೊತೆ ಇರಬೇಕು. ಅಲ್ಲಿ ಭಾಜಪಾ ಸರ್ಕಾರ ಇರುವಂತೆ ಬರುವ ದಿನದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುವಂತೆ ಮಾಡಿ ಬಿಜೆಪಿಗೆ ಅಧಿಕಾರ ನೀಡಬೇಕು ಎಂದು ಎಚ್ಚರಿಸಿದರು.
ರಾಹುಲ್ ಗಾಂಧಿ ಯಾತ್ರೆ ಮಾಡಿದ ಪರಿಣಾಮ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆದ್ದಿದೆ. ರಾಹುಲ್ ಹೋದೆಡೆ ಕಾಂಗ್ರೆಸ್ ಧೂಳೀಪಟವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅವರದು ಐರನ್ ಲೆಗ್ ಎಂದು ವ್ಯಂಗ್ಯವಾಡಿದರು.
ರಾಜ್ಯದ ಸಚಿವ ಶ್ರೀರಾಮುಲು ಅವರು ಮಾತನಾಡಿ, ಈ ನವಶಕ್ತಿ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿದ್ದೇವೆ. ರಾಮನಿಗೆ, ಹನುಮನಿಗೆ ಶಕ್ರಿ ತುಂಬಿದ ಬಿಜೆಪಿ ಬರುವ ದಿನಗಳಲ್ಲಿ ಲಂಕಾ(ಕಾಂಗ್ರೆಸ್) ದಹನ ಮಾಡಬೇಕಿದೆ. ಈ ಜನಶಕ್ತಿ, ಜನಾಶೀರ್ವಾದ ನೋಡಿದರೆ ನಮ್ಮ ಸರ್ಕಾರ, ನಮ್ಮ ಪಕ್ಷದ ಪರ ಬರುವ ದಿನದಲ್ಲಿ ಸ್ಪಷ್ಟ ಬಹುಮತ ಬರಲಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ದಹನ ಆರಂಭವಾಗಿದೆ ಎಂದು ವಿಶ್ಲೇಷಿಸಿದರು.
7 ಸಾವಿರ ಬೇಡ ಪಡೆಗಳು ನಮ್ಮಲ್ಲಿ ಇದ್ದವು. ವಿಜಯನಗರ ಸಾಮ್ರಾಜ್ಯ ನಿರ್ಮಿಸಿದ್ದು ಅದೇ ಪಡೆಗಳು. 2023ರ ಚುನಾವಣೆಯಲ್ಲಿ ಈ ಜನಶಕ್ತಿಯ ಆಶೀರ್ವಾದ ಬಿಜೆಪಿ ಮೇಲೆ ಇರಲಿದೆ. 40 ವರ್ಷಗಳ ಹೋರಾಟವನ್ನು ಅರಿತು ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದರು. ಅವರಿಗೆ ಎಂಟು ಗುಂಡಿಗೆ ಇವೆ. ನಮ್ಮ ಎಸ್ಸಿ ಎಸ್ಟಿ ಸಮುದಾಯದ ಪಾಲಿಗೆ ಬೊಮ್ಮಾಯಿ ದಕ್ಷಿಣ ವಾಜಪೇಯಿ ಆಗಿದ್ದಾರೆ. ದಲಿತ ಪರ ಕೇವಲ ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ದಲಿತರಿಗೆ ಮೀಸಲಾತಿ ಹೆಚ್ಚಿಸಲೇ ಇಲ್ಲ. 2013ರಿಂದ 2018ರ ವರೆಗೆ ಅಧಿಕಾರದಲ್ಲಿದ್ದಾಗ ನಿಮಗೆ ದಲಿತರು ನೆನಪಾಗಲಿಲ್ಲವೆ? ಅವರಿಗೆ ಮೀಸಲಾತಿ ಹೆಚ್ಷಿಸಬೇಕೆಂಬ ಕಾಳಜಿ ಬರಲಿಲ್ಲವೆ ಸ್ವಾಮಿ ನಿಮಗೆ? ಸಿಎಂ ಈಗ ಸುದರ್ಶನ ಚಕ್ರ ಬಿಟ್ಟಿದೆ ಅದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಶಿರಚ್ಛೇದನ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಶಕ್ತಿ ನೋಡಲು ಬನ್ನಿ. ಮೀಸಲಾತಿ ಕೊಟ್ಟಿದ್ದು ನಾವು. ಆದರೆ ನಾವು ಕೊಟ್ಟಿದ್ದೇವೆ ಎಂದು ಬಡಿವಾರ ಕೊಚ್ಷಿಕೊಳ್ಳುತ್ತೀರಲ್ಲ ನಾಚಿಕೆ ಆಗಲ್ಲವೆ? ಎಂದು ಪ್ರಶ್ನಿಸಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹೇಗೆ ನಮ್ಮ ಸಮುದಾಯಗಳಿಗೆ ಸಮಾನತೆ ಕೊಟ್ಟರೋ ಹಾಗೆ ಇವತ್ತು ಬೊಮ್ಮಾಯಿ ಅವರು ನಮ್ಮ ಸಮುದಾಯಗಳಿಗೆ ಮೀಸಲಾತಿ ನೀಡಿ ನಮ್ಮ ಸಮಾಜಗಳನ್ನು ಉದ್ಧಾರ ಮಾಡಲು ಮುಂದಾಗಿದ್ದಾರೆ. ಇದುವರೆಗೂ ಇಡೀ ಸಮುದಾಯ ನನಗೆ ನೀಡಿದ ಆಶೀರ್ವಾದ, ಬೆಂಬಲಕ್ಕೆ ಇಂದು ನಾನು ನಿಮ್ಮ ಋಣ ತೀರಿಸಿದ್ದೇನೆ. ಶ್ರೀರಾಮುಲು ಈ ಹಿಂದೆ ಮಾತು ಕೊಟ್ಟಿದ್ದರೆ ಅದು ನನ್ನೊಬ್ಬನದೇ ಅಲ್ಲ. ನನ್ನ ಹಿಂದೆ ಇಡೀ ಪಕ್ಷ ಇದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ದೇಶದ ಒಳಿತಿಗಾಗಿ ಅರಸುರಾಗಿ, ರಾಜರಾಗಿ, ಪಾಳೆಗಾರರಾಗಿ ಕೆಲಸ ಮಾಡಿದ್ದು ವಾಲ್ಮೀಕಿ ಸಮುದಾಯ. ಹಕ್ಕಬುಕ್ಕರು, ಸಿಂಧೂರ ಲಕ್ಷ್ಮಣ, ಸುರುಪುರ ಅರಸರು, ಏಕಲವ್ಯ ಸೇರಿದಂತೆ ಅನೇಕರು ದೇಶಕ್ಕಾಗಿ ಬದುಕಿದರು. ನಮ್ಮ ಸಮುದಾಯಕ್ಕೆ ಹೊಡೆತ ಬಿದ್ದಿದ್ದು ಬ್ರಿಟಿಷರಿಂದ. ನಮ್ಮ ಆಸ್ತಿ, ಆಯುಧ ಕಳೆದುಕೊಂಡ ನಂತರ ಹಲಗಲಿಯ ಬೇಡರಿಂದ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಇಂದು ನಮ್ಮ ಸಮುದಾಯ ಕೇವಲ ಬಿಜೆಪಿ ಪರ ಇದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಎಸ್.ಟಿ. ಸಮುದಾಯದ ಲಕ್ಷಾಂತರ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬಳ್ಳಾರಿ ನಗರದಾದ್ಯಂತ ಹಾಗೂ ಸಮಾವೇಶದ ಸ್ಥಳವನ್ನು ಪಕ್ಷದ ಬಾವುಟ ಹಾಗೂ ಪ್ಲೆಕ್ಸ್‍ಗಳಿಂದ ಅಲಕೃಂತಗೊಳಿಸಲಾಗಿತ್ತು. ವಿವಿಧ ಕಲಾ ತಂಡಗಳಿಂದ ಕಾರ್ಯಕ್ರಮ ಏರ್ಪಡಿಸಿದ್ದು; ಅದು ಜನರ ಮನ ಸೆಳೆಯಿತು.