

News By: ಜನತಾಲೋಕವಾಣಿನ್ಯೂಸ್
ಉಡುಪಿ, ನ.14: ರಾಷ್ಟ್ರೀಯ ಚಿಂತನೆ, ಸಿದ್ದಾಂತವನ್ನು ಒಳಗೊಂಡು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕಾಲ ಕಾಲಕ್ಕೆ ರಾಷ್ಟ್ರದ ಹಿತಕ್ಕಾಗಿ ಪಕ್ಷ ಮತ್ತು ಕಾರ್ಯಕರ್ತನ ಜವಾಬ್ದಾರಿಯನ್ನು ತಿಳಿಸುವ, ಮಾರ್ಗಸೂಚಿ ನೀಡುವ ವ್ಯವಸ್ಥೆಯೇ ಪ್ರಶಿಕ್ಷಣ ವರ್ಗ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ಮಣಿಪಾಲದ ಸರಳೇಬೆಟ್ಟು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಆರ್ಥಿಕವಾಗಿ ಹಿಂದುಳಿದವರಿಗೆ ದೊರಕಿದ ಸೌಲಭ್ಯಗಳು, ರಾಷ್ಟ್ರದ ಹಿತಕ್ಕಾಗಿ ಜಾರಿಗೊಳಿಸಿದ ಮಸೂದೆ, ಕಾನೂನುಗಳನ್ನು ಸಾಮಾನ್ಯ ನಾಗರಿಕನಿಗೆ ತಲುಪಿಸುವ ಜವಾಬ್ದಾರಿ ಪಕ್ಷದ ನಾಯಕರು, ಎಲ್ಲಾ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರದ್ದಾಗಿದೆ ಎಂದರು.
75 ವರ್ಷಗಳ ಅವಧಿಯಲ್ಲಿ ಯಾರೂ ಮಾಡದೇ ಇರುವ ಪ.ಜಾತಿ ಮತ್ತು ಪ.ಪಂಗಡದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ. ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರದಿಂದ ದೊರಕುವ ಸೌಲಭ್ಯದಲ್ಲಿ ಯಾವುದೇ ಕಡಿತಗೊಳಿಸದೇ, ಪ.ಜಾತಿ ಮತ್ತು ಪ.ಪಂಗಡದ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು.
1.28 ಕೋಟಿ ಪ.ಜಾತಿ ಹಾಗೂ 68 ಲಕ್ಷ ಪ.ಪಂಗಡದ ಜನಸಂಖ್ಯೆ ಕರ್ನಾಟಕ ರಾಜ್ಯದಲ್ಲಿದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಬಿಜೆಪಿ ಕಾರ್ಯಕರ್ತರು ತಲುಪಿ ಬಿಜೆಪಿ ಸರಕಾರ ಮೀಸಲಾತಿ ಹೆಚ್ಚಿಸಿದ್ದು, ಅದರಿಂದ ಯಾವೆಲ್ಲಾ ಲಾಭಗಳನ್ನು ಈ ವರ್ಗದವರು ಪಡೆಯಬಹುದು ಎಂಬ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.
ಮೀಸಲಾತಿ ಹೆಚ್ಚಿಸಿರುವುದರಿಂದ ವಾರ್ಷಿಕ ಪ.ಜಾತಿಯ ಜನತೆಗೆ 18,000 ಕೋಟಿ ರೂ. ಹಾಗೂ ಪ.ಪಂಗಡದ ಜನತೆಗೆ 10,500 ಕೋಟಿ ರೂ.ಯ ಅನುದಾನ ದೊರಕುತ್ತದೆ. 800 ಕೋಟಿ ರೂ. ವೆಚ್ಚದಲ್ಲಿ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದು, 24.50 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿವೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪ.ಜಾತಿ ಮತ್ತು ಪ.ಪಂಗಡದ ಮಹಿಳೆಯರನ್ನು ಕರೆದು ಒಗ್ಗೂಡಿಸಿ ಅವರ ನೋವುಗಳನ್ನು ಆಲಿಸಿ, ಸರಕಾರದಿಂದ ದೊರಕುವ ಸೌಲಭ್ಯಗಳನ್ನು ತಿಳಿಸಿ, ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಪುವಿನ ಜನಸಂಕಲ್ಪ ಕಾರ್ಯಕ್ರಮದಲ್ಲಿ ದ.ಕ., ಉಡುಪಿ ಹಾಗೂ ಉ.ಕ. ಜಿಲ್ಲೆಯ ಜನರಿಗೆ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆ ಮಾಡುವುದಾಗಿ ಘೋಷಿಸಿದರು. ಈ ಯೋಜನೆಗೆ ವಾರ್ಷಿಕ 132 ಕೋಟಿ ರೂ. ಖರ್ಚಾಗುತ್ತದೆ. ತಿಂಗಳಿಗೆ 1 ಲಕ್ಷ ಕ್ವಿಂಟಾಲ್ ಅಕ್ಕಿ, ವಾರ್ಷಿಕ 12 ಲಕ್ಷ ಕ್ವಿಂಟಾಲ್ ಅಕ್ಕಿ, 17 ಲಕ್ಷ ಕ್ವಿಂಟಾಲ್ ಭತ್ತ ಬೇಕಾಗುತ್ತದೆ. ಎಮ್.ಓ.4, ಜಯಾ, ಜ್ಯೋತಿ, ಉಮಾ ಈ ನಾಲ್ಕು ತಳಿಯ ಭತ್ತವನ್ನು ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಕುಚ್ಚಲಕ್ಕಿ ವಿತರಣೆಯ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಖುದ್ದು ದಾಖಲೆಗಳಿಗೆ ಅನುಮತಿ ಕೊಡಿಸುವಲ್ಲಿ ಕೆಲಸ ಮಾಡಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ರವರು ಮುಖ್ಯಮಂತ್ರಿಗಳಿಗೆ ಒತ್ತಡವನ್ನು ಹೇರಿದ್ದರು ಎಂದರು.
ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಗೋಮಾಂಸವನ್ನು ಹುರಿದು ತಿಂದು ಪ್ರತಿಭಟನೆ ನಡೆಸಿದಾಗ ಯಾವ ಸರಕಾರ ಅಧಿಕಾರದಲ್ಲಿತ್ತು? ಗೋಮಾಂಸವನ್ನು ಸಾರ್ವಜನಿಕವಾಗಿ ಹುರಿದು ತಿಂದು ಪ್ರತಿಭಟನೆ ನಡೆಸಲು ಈಗ ಯಾರಿಗಾದರೂ ತಾಕತ್ತು ಇದೆಯಾ? ಎಂದು ಕೋಟ ಪ್ರಶ್ನಿಸಿದರು.
ಕೊರೋನಾ ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರಕಾರ ಯಶಸ್ವಿಯಾಗಿ ನಾಡಿನ ಜನತೆಯ ಆರೋಗ್ಯವನ್ನು ಕಾಪಾಡಲು ಯೋಜನೆಯನ್ನು ರೂಪಿಸಿದ್ದು, ನಂತರದ ದಿನಗಳಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸರಕಾರ ಆಡಳಿತದಲ್ಲಿ ಸುಧಾರಣೆಯೊಂದಿಗೆ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ರಾಷ್ಟ್ರೀಯತೆಯ ವಿಚಾರಧಾರೆಯನ್ನು ಒಳಗೊಂಡಿರುವ ಏಕೈಕ ರಾಷ್ಟ್ರೀಯ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಇಂದು ವಿರೋಧ ಪಕ್ಷಗಳ ನಿಷ್ಠೆ ಯಾವ ರೀತಿ ಇದೆ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಬಿಜೆಪಿಯಲ್ಲಿ ಪ್ರಶಿಕ್ಷಣ ವರ್ಗಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಶಿಕ್ಷಣ ವರ್ಗಗಳಲ್ಲಿ ದೊರೆಯುವ ಪಕ್ಷದ ತತ್ವ ಸಿದ್ಧಾಂತಗಳ ಅರಿವು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿ ಯೋಜನೆಗಳ ಮಾಹಿತಿ ಮುಂತಾದವುಗಳು ಸಮರ್ಥ ನಾಯಕತ್ವ ರೂಪುಗೊಳ್ಳಲು ಪೂರಕ ಶಕ್ತಿಯಾಗಿ ಪರಿಣಮಿಸುತ್ತವೆ. ರಾಷ್ಟ್ರೀಯ ವಿಚಾರಧಾರೆ ಇರುವ ಬಿಜೆಪಿ ಆಡಳಿತಕ್ಕೆ ಬಂದಾಗ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಬಲ ಸಿಕ್ಕಿದಂತಾಗಿದೆ. ಮೋರ್ಚಾಗಳ ಕ್ರಿಯಾಶೀಲತೆ ಜಿಲ್ಲಾ ಮಟ್ಟದಲ್ಲಿ ಬಲಿಷ್ಠ ಪಕ್ಷ ಸಂಘಟನೆಗೆ ಪೂರಕವಾಗುತ್ತದೆ. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉತ್ತಮ ಕಾರ್ಯ ಚಟುವಟಿಕೆಗಳೊಂದಿಗೆ ಮಾದರಿ ಮೋರ್ಚಾ ಎಂದೆನಿಸಿಕೊಂಡಿದೆ. ಪಕ್ಷ ಸಂಘಟನೆ ಹಾಗೂ ಚುನಾವಣಾ ಕೆಲಸ ಕಾರ್ಯಗಳಲ್ಲಿ ಮಹಿಳಾ ಶಕ್ತಿಯ ಪಾತ್ರ ಅತ್ಯಮೂಲ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಸಹಿತ ಪಕ್ಷದ ಎಲ್ಲಾ ಘಟಕಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಸದೃಢ ಪಕ್ಷ ಸಂಘಟನೆಯೊಂದಿಗೆ ಮುಂಬರಲಿರುವ ವಿಧಾನಸಭೆ, ಲೋಕಸಭೆ ಸಹಿತ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯ ವಿಜಯ ಯಾತ್ರೆಯನ್ನು ಮುನ್ನಡೆಸಲು ಸರ್ವಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ಪ್ರಶಿಕ್ಷಣ ವರ್ಗದಲ್ಲಿ ದೊರೆಯುವ ಉಪಯುಕ್ತ ಮಾಹಿತಿಗಳನ್ನು ಮೈಗೂಡಿಸಿಕೊಂಡು ಎಲ್ಲಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿ ಪಕ್ಷ ಸಂಘಟನೆಗೆ ಹಾಗೂ ಚುನಾವಣಾ ಗೆಲುವಿಗೆ ಅತ್ಯಮೂಲ್ಯ ಕೊಡುಗೆ ನೀಡೋಣ ಎಂದರು.
ವೇದಿಕೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ಹಾಗೂ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರೇಳಿಯಾ, ಮಹಿಳಾ ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಸುಜಾಲ ಸತೀಶ್ ಧ್ಯೇಯ ಗೀತೆ ಹಾಡಿ, ಮಹಿಳಾ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಮಾಯಾ ಕಾಮತ್ ವಂದೇ ಮಾತರಂ ಗೀತೆ ಹಾಡಿದರು.
ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿ, ರಶ್ಮಿತಾ ಬಿ. ಶೆಟ್ಟಿ ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಗೋಪೂಜೆ ನಡೆಯಿತು.