
ಉಡುಪಿ: ಸೆ.17ರಿಂದ ಅ.2ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ನಡೆಯಲಿರುವ ‘ಸೇವಾ ಪಾಕ್ಷಿಕ’ವನ್ನು ಮಾದರಿ ಸೇವಾ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಜೊತೆಗೆ ಚುನಾವಣಾ ಪೂರ್ವ ತಯಾರಿ ಪ್ರಕ್ರಿಯೆಯಾಗಿರುವ ಶಕ್ತಿಕೇಂದ್ರಗಳ ಸಭೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿ ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಮಂಡಲಗಳ ಶಕ್ತಿಕೇಂದ್ರಗಳಲ್ಲಿ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ತಂಡ ಸಭೆಗಳನ್ನು ನಡೆಸಲಿದ್ದು ಪ್ರಥಮ ಸಭೆಯು ಸೆ.17ರಂದು ಬೈಂದೂರು ಮಂಡಲ ವ್ಯಾಪ್ತಿಯಲ್ಲಿ ನಡೆಯಲಿದೆ. ಬೂತ್ ಸಮಿತಿ ಪರಿಶೀಲನೆ ಸಹಿತ ಪಕ್ಷದ ಸಂಘಟನಾತ್ಮಕ ಅಂಶಗಳಿಗೆ ಒತ್ತು ನೀಡುವ ಚಟುವಟಿಕೆಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರತೀ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯ ಜೊತೆಗೆ ಬೂತ್ ಸಭೆಗಳನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸೇರಿ ಪರಿಣಾಮಕಾರಿಯಾಗಿ ಆಯೋಜಿಸುವ ಜೊತೆಗೆ ಪಕ್ಷ ಸಂಘಟನೆಗೆ ಹೆಚ್ಚಿನ ವೇಗ ನೀಡಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ ಚುನಾವಣಾ ಪರ್ವದಲ್ಲಿರುವ ಸಂದರ್ಭದಲ್ಲಿ ಸರಕಾರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವ ಜೊತೆಗೆ ಪಕ್ಷದ ಸಂಘಟನಾತ್ಮಕ ಕೆಲಸ ಕಾರ್ಯಗಳಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೇವಾ ಪಾಕ್ಷಿಕ, ಮೋರ್ಚಾಗಳ ಪ್ರಶಿಕ್ಷಣ ವರ್ಗ, ಮಂಡಲ ಕಾರ್ಯ ತಂಡದ ಸಭೆ, ವಿಸ್ತಾರಕ ಯೋಜನೆ, ಬೂತ್ ಸಶಸ್ತೀಕರಣ ಮುಂತಾದ ಪ್ರಮುಖ ಚಟುವಟಿಕೆಗಳ ಜೊತೆಗೆ ಅ.1ರಿಂದ ನಡೆಯುವ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬೂತ್ ಸಶಸ್ತೀಕರಣ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ಲೋಕಸಭಾ ಕ್ಷೇತ್ರ ಹಾಗೂ ವಿಧಾನ ಸಭಾ ಕ್ಷೇತ್ರವಾರು ಬೂತ್ ಸಶಸ್ತೀಕರಣದ ಪ್ರಗತಿ ಪರಿಶೀಲನೆ ನಡೆಸಿದರು.
ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಎ. ಕೊಡ್ಗಿ, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಹಾಗೂ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.