
ಚಿಕ್ಕಬಳ್ಳಾಪುರ : ಕಳೆದ 75 ವರ್ಷದಲ್ಲಿ ಭಾವುಟಗಳನ್ನೇ ಮರೆತಿದ್ದವರು, ರಾಷ್ಟ್ರಧ್ವಜವನ್ನೇ ಮರೆತಿದ್ದವರು ಪ್ರಧಾನಿಯವರು ಹರ್ ಘರ್ ತಿರಂಗ ಘೋಷಣೆ ನಂತರ ಬೆಂಗಳೂರಿನ ಬೀದಿಗಳಲ್ಲಿ ಧ್ವಜ ಹಿಡಿದು ಪಾದಯಾತ್ರೆ ಮಾಡಿರುವುದು ಬಯಲು ನಾಟಕವಲ್ಲವೇ ಎಂದು ಆರೋಗ್ಯ ಸಚಿವ ಡಾ! ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ಹರ್ ಘರ್ ತಿರಂಗ ಎಂಬುದು ನಾಟಕ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಯಲು ನಾಟಕ ಮಾಡುತ್ತಿರುವ ಕಾಂಗ್ರೆಸ್ ಗೆ ಕಳೆದ 75 ವರ್ಷದಲ್ಲಿ ರಾಷ್ಟ್ರಧ್ವಜ ನೆನಪಿತ್ತೇ? ಈಗ ಪ್ರಧಾನಿಯವರ ಘೋಷಣೆಯ ನಂತರ ಬೀದಿ ಬೀದಿಗಳಲ್ಲಿ ಧ್ವಜ ಹಿಡಿದು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅದನ್ನು ಜನರು ಹೇಳಬೇಕಿದೆ. 2023ರ ಚುನಾವಣೆಯಲ್ಲಿ ಜನರು ಅದನ್ನು ಹೇಳುತ್ತಾರೆ. ಭ್ರಷ್ಟರಾಗಿದ್ದರೆ 2018ರಲ್ಲಿ ಯಾಕೆ ಸೋಲುಂಡರು ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಲಿ, ಅದೂ ಭ್ರಷ್ಟಾಚಾರ ಸರ್ಕಾರ ಎನ್ನಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಆರೋಪ ಮಾಡುವಾಗ ನಿಖರವಾದ ವಿಷಯ ಇಟ್ಟಿಕೊಂಡು ಮಾತನಾಡಬೇಕು, ಕಳೆದ ಮೂರು ವರ್ಷದಲ್ಲಿ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸಲು ಜನೋತ್ಸವ ಆಯೋಜಿಸಲಾಗಿದೆ. ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಡುತ್ತಿದ್ದೇವೆ, ಯಾರದೋ ವೈಯಕ್ತಿಕ ಉತ್ಸವ ಕಂಡು ಮಾಡುತ್ತಿರುವುದಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಮುಂಚೆಯೇ ಕಾರ್ಯಕ್ರಮ ಯೋಜಿಸಿದ್ದೆವು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು, ಈಗ ಕಾಲ ಕೂಡಿ ಬಂದಿದೆ ಹಾಗಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೊದಲ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದು, ಇನ್ನೂ ನಾಲ್ಕೆದು ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಸಂವಿಧಾನಕ್ಕೆ ಬಿಜೆಪಿಯಿಂದ ಅಪಾಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕಳೆದ 8 ವರ್ಷಗಳಿಂದ ನರೇಂದ್ರಮೋದಿ ಅವರು ಪ್ರಧಾನಿಯಾಗಿದ್ದಾರೆ, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು 5 ವರ್ಷ ಪ್ರಧಾನಿಯಾಗಿದ್ದರು. ಒಟ್ಟು 13 ವರ್ಷದಲ್ಲಿ ಸಂವಿಧಾನಕ್ಕೆ ಆಗಿರುವ ಧಕ್ಕೆಯಾದರೂ ಏನು ಎಂದು ಸಚಿವರು ಪ್ರಶ್ನಿಸಿದರು.
ಸಂವಿಧಾನದಲ್ಲಿ ಯಾವ ಅಪಚಾರವಾಗಿದೆ ಎಂಬುದನ್ನು ತೋರಿಸಿ ಮಾತನಾಡಬೇಕಿದೆ. ಅದನ್ನು ಬಿಟ್ಟು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡಬೇಡಿ ಎಂದು ನೇರವಾಗಿ ವಿಪಕ್ಷ ನಾಯಕರಿಗೆ ಸಚಿವರು ತಿರುಗೇಟು ನೀಡಿದ್ದಾರೆ.