
ಉಡುಪಿ: ಸುಳ್ಯದ ಬೆಳ್ಳಾರೆಯಲ್ಲಿ ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಕಗ್ಗೊಲೆಯಾಗಿದೆ. ಕೋಳಿ ಅಂಗಡಿ ಇಟ್ಟುಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದನು. ಜಿಹಾದಿಗಳು ಬಿಜೆಪಿಗೆ ನೀಡುವ ಬೆದರಿಕೆ ಹೊಸತಲ್ಲ. ಆದರೆ ಸಂಘಟನೆಯ ಶಕ್ತಿಯನ್ನು ಕುಗ್ಗಿಸಬೇಕು ಎಂದು ಜಿಹಾದಿಗಳು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಜು.30ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ನಡೆದ ಶೃದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಹರ್ಷ ಹತ್ಯೆ, ಪ್ರವೀಣ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಎನ್.ಐ.ಎ ಗೆ ವಹಿಸಿದೆ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವುದು ನೆಪ ಮಾತ್ರ. ಆದರೆ ಇದರ ಹಿಂದೆ ಇರುವ ಮತಾಂಧರ ಹುನ್ನಾರವನ್ನು ಅರಿಯಬೇಕಿದೆ.
ಬಿಜೆಪಿ ಪಕ್ಷಕ್ಕೆ ಇದು ಪರೀಕ್ಷೆಯ ಕಾಲಘಟ್ಟ. ಕಾರ್ಯಕರ್ತರು ಮನನೊಂದು ರಾಜಿನಾಮೆ ನೀಡುವುದು ಸೂಕ್ತವಲ್ಲ. ಮನೆಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ದಳವನ್ನು ಕರಿಯಬೇಕು, ಅದನ್ನು ಬಿಟ್ಟು ಪೆಟ್ರೋಲ್ ಹುಡುಕುವುದಲ್ಲ. ನಾವೆಲ್ಲಾ ಒಟ್ಟಾಗಿ ಇಂತಹ ಸಂದರ್ಭವನ್ನು ಎದುರಿಸುವ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರವೀಣ್ ನೆಟ್ಟಾರು ಅವರ ಮನೆಗೆ ಉಡುಪಿ ಜಿಲ್ಲಾ ಬಿಜೆಪಿಯ ತಂಡ ಭೇಟಿ ನೀಡಿ ಆರ್ಥಿಕ ಸಹಾಯ ಮಾಡುತ್ತೇವೆ ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಅತೀವ ನೋವು ತಂದಿದೆ. ಜಿಹಾದಿ ಮಾನಸಿಕತೆಯನ್ನು ಮಟ್ಟಹಾಕಲು ಸರ್ವ ಪ್ರಯತ್ನಗಳೂ ನಡೆಯುತ್ತಿವೆ. ಕಾಂಗ್ರೆಸ್ಸಿನ ವ್ಯವಸ್ಥಿತ ಸಂಚಿನಿಂದ ಸಮಾಜದಲ್ಲಿ ಇಂತಹ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಪ್ರಕರಣಗಳ ಹಿನ್ನೆಲೆಯಲ್ಲಿ ಪಿ.ಎಫ್.ಐ, ಎಸ್.ಡಿ.ಪಿ.ಐ ನಂತಹ ಮೂಲಭೂತವಾದಿ ಮತಾಂಧ ಸಂಘಟನೆಗಳ ನಿಷೇಧಕ್ಕೆ ಇದು ಸೂಕ್ತ ಕಾಲವೆನಿಸಿದೆ. ಪಕ್ಷದ ಕಾರ್ಯಕರ್ತರು ಧೃತಿಗೆಡದೆ ವಿರೋಧಿಗಳ ಷಡ್ಯಂತ್ರವನ್ನು ಎದುರಿಸಲು ಕೈಜೋಡಿಸಬೇಕು ಎಂದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಎಸ್.ಡಿ.ಪಿ.ಐ, ಪಿ.ಎಫ್.ಐ ಸಂಘಟನೆಗಳನ್ನು ಮುಸ್ಲಿಂ ಸಮಾಜ ದೂರವಿಟ್ಟಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ. ಹಿಜಾಬ್ ವಿವಾಧದಲ್ಲಿ ಕೈಜೋಡಿಸಿದ ಭಯೊತ್ಪಾದಕ ಜಿಹಾದಿ ಸಂಘಟನೆಗಳು ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಕೈ ಜೋಡಿಸಿವೆ. ಪ್ರವೀಣ್ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ ಉಪ್ಪುಂದ, ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.