
ಉಡುಪಿ: ಕರಾವಳಿ ಕರ್ನಾಟಕದ ರಾಜಕೀಯ ಬೀಷ್ಮರೆಂದೇ ಖ್ಯಾತರಾಗಿದ್ದ ಬಿಜೆಪಿ ಹಿರಿಯ ಮುಖಂಡ, ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಜಿ. ಕೊಡ್ಗಿ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆ ರಚನೆಯಾದ ಪರ್ಯಂತ ಜಿಲ್ಲೆಯ ಪ್ರಥಮ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಎ.ಜಿ. ಕೊಡ್ಗಿಯವರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷರಾಗಿ, ಉಡುಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ, 3ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಜೊತೆಗೆ ಸಹಕಾರ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿ ಲಕ್ಷಾಂತರ ಕಾರ್ಯಕರ್ತರ ಪ್ರೇರಣಾಶಕ್ತಿಯಾಗಿದ್ದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಅಗಲುವಿಕೆ ಪಕ್ಷಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ಅವರು ತಿಳಿಸಿದ್ದಾರೆ.
ಮೃತರ ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಮೃತರ ಪತ್ನಿ, ಪುತ್ರಿ ಹಾಗೂ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣ ಕುಮಾರ್ ಕೊಡ್ಗಿ ಹಾಗೂ ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಸಹಿತ ಪುತ್ರರು, ಕುಟುಂಬ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ಕೊಡ್ಗಿಯವರ ಅಗಲುವಿಕೆಯ ದುಖ:ವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.