
ಉಡುಪಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಮೇಲೆ ಕಲ್ಲು ಹೊಡೆದು ದಾಂಧಲೆ ನಡೆಸಿರುವ ಗಲಭೆಕೋರ ಸಮಾಜ ಘಾತುಕರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ನೆರವು ನೀಡಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕಾಂಗ್ರೆಸ್ ನಾಯಕನ ಈ ಕುಕೃತ್ಯದಿಂದ ಜಾತ್ಯಾತೀತತೆಯ ಸೋಗಿನಲ್ಲಿರುವ ಕಾಂಗ್ರೆಸ್ ನ ನೈಜ ಬಣ್ಣ ಬಯಲಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಈ ಹಿಂದೆ ಪಾದರಾಯನಪುರ ಪುಂಡರಿಗೂ ಸಹಾಯ ಮಾಡಿ ವಿವಾದಕ್ಕೀಡಾಗಿದ್ದ ಜಮೀರ್ ಅಹ್ಮದ್ ಖಾನ್ ಜಾಮೀನಿನಲ್ಲಿ ಹೊರಬಂದ ಪುಂಡರಿಗೆ ನಗದು ಮತ್ತು ರೇಷನ್ ಕಿಟ್ ಹಂಚಿದ್ದರು. ಇದೀಗ ಹುಬ್ಬಳ್ಳಿ ಗಲಭೆಕೋರರಿಗೆ ಹಣ ಮತ್ತು ಫುಡ್ ಕಿಟ್ ಹಂಚಿಕೆ ಮಾಡುವ ಮೂಲಕ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.
ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿಯೂ ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿ ಲೂಟಿಗೈದ ಗಲಭೆಕೋರರ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಾನಸಿಕತೆ ಹಾಗೂ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಮಾಜಘಾತುಕರ ಮೇಲಿದ್ದ ಪ್ರಕರಣಗಳನ್ನು ರದ್ದುಗೊಳಿಸಿ ಅವರನ್ನು ಬಿಡುಗಡೆಗೊಳಿಸಿದ ಮಾಜಿ ಸಿ.ಎಂ. ಸಿದ್ಧರಾಮಯ್ಯ ನಡೆಯ ಪರಿಣಾಮವಾಗಿ ರಾಜ್ಯದೆಲ್ಲೆಡೆ ಇಂತಹ ಅನಪೇಕ್ಷಿತ ದೇಶ ವಿರೋಧಿ ಕೃತ್ಯಗಳು ನಡೆಯುತ್ತಿದ್ದು, ರಾಜ್ಯದ ಜನತೆ ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.