
ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇದರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ ‘ಇಂಗ್ಲಿಷ್ ಪರ್ವ’ ಎಂಬ ವಿಶಿಷ್ಟ ಕಾರ್ಯಕ್ರಮವು ಎ.10ರಂದು ಶಾಲಾ ವಠಾರದಲ್ಲಿ ನಡೆಯಿತು.
ಇಂಗ್ಲಿಷ್ ಮಾಧ್ಯಮ ಶಾಲೆಗಳ ಪೈಪೋಟಿಯ ನಡುವೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಳಿವು ಉಳಿವಿನ ನಿರ್ಣಾಯಕ ಹಂತದ ನಡುವೆ ಕನ್ನಡ ಮಾಧ್ಯಮವನ್ನು ಉಳಿಸುವ ಸಲುವಾಗಿ ಈ ಮಾದರಿ ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿಯವರ ನೇತೃತ್ವದಲ್ಲಿ ಸಹ ಶಿಕ್ಷಕರ ಸಹಯೋಗದೊಂದಿಗೆ ಜರಗಿತು.
ಇಂಗ್ಲಿಷ್ ಭಾಷಾ ಶಿಕ್ಷಕಿ ಶಬನಾ ಪರ್ವೀನ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿದ ರೀತಿ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮದ ನಡುವಿನ ಹೊಂದಾಣಿಕೆ ಮಾಡಿರುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ಮುಖ್ಯೋಪಾದ್ಯಾಯಿನಿ ಜ್ಯೋತಿ ಪ್ರಾಸ್ತಾವಿಕ ಮಾತುಗಳನ್ನಾಡಿ ‘ಇಂಗ್ಲಿಷ್ ಪರ್ವ’ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಆತ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಶೆಟ್ಟಿ ಮಾತನಾಡಿ ವಿನೂತನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಾಮಲಾ ಪ್ರಭು ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರತ್ನಾಕರ್ ಶೆಟ್ಟಿ, ಹರೀಶ್ ಹೆಗ್ಡೆ, ಸತ್ಯಾನಂದ ನಾಯಕ್, ಉಡುಪಿ ಬಿಆರ್ಸಿ ಉಮಾ, ಬ್ರಹ್ಮಾವರ ಬಿಆರ್ಪಿ ಉದಯ, ಉಡುಪಿ ಸಿಆರ್ಪಿ ಪ್ರದೀಪ್, ಮಾಜಿ ಸೇನಾಧಿಕಾರಿ ನಾರಾಯಣ ಕಾಮತ್, ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯಿಲ್, ಮುರಳೀಧರ ಹಾಲಂಬಿ, ಲೀಲಾವತಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು.
ವಿಧ್ಯಾರ್ಥಿಗಳ ಪೋಷಕರು ಸಭಾಂಗಣದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಾದ ಚೇತನ್, ಅಂಕಿತ, ನವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ನಿವೇದಿತಾ ಸ್ವಾಗತಿಸಿದರು. ಶಿಕ್ಷಕಿ ಶಬನಾ ಪರ್ವೀನ್ ವಂದಿಸಿದರು.
ಶಿಕ್ಷಕಿಯರಾದ ಶಾಮಲಾ, ಸುಹಾಸಿನಿ, ವಿಮಲಾರವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.