
ಉಡುಪಿ: ಬಿಜೆಪಿ ಇಂದು ಸರ್ವ ಸ್ಪರ್ಶಿ ಸರ್ವ ವ್ಯಾಪಿ ಎನಿಸಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷದ ಬೆಳವಣಿಗೆಯಲ್ಲಿ ಪ್ರಕೋಷ್ಠಗಳ ಕ್ರಿಯಾಶೀಲತೆ ಮಹತ್ವಪೂರ್ಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಪ್ರಕೋಷ್ಠಗಳು ತಮ್ಮ ವ್ಯಾಪ್ತಿಯ ಇತಿ ಮಿತಿಯೊಳಗೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಮಹತ್ತರವಾದ ಕೊಡುಗೆಯನ್ನು ನೀಡಬೇಕು. ಪ್ರಕೋಷ್ಠಗಳ ನಿಗದಿತ ಕಾರ್ಯ ಚಟುವಟಿಕೆಗಳ ಜೊತೆಗೆ ಕಮಲ ಪುಷ್ಪ, ವಿಸ್ತಾರಕ ಯೋಜನೆಯಂತಹ ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.
ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಕಳೆದ ಮೂರು ತಿಂಗಳ ಚಟುವಟಿಕೆಗಳ ವಿವರಗಳನ್ನು ಪಡೆದ ಕುಯಿಲಾಡಿ, ರಾಜ್ಯದ ಸೂಚನೆಯಂತೆ ಮುಂದಿನ ದಿನಗಳಲ್ಲಿ ಪ್ರಕೋಷ್ಠಗಳ ಜಿಲ್ಲಾ ಮತ್ತು ಮಂಡಲ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು ಹಾಗೂ ಸಮಿತಿ ಸದಸ್ಯರಿಗೆ ಅಯೋಜಿಸಲ್ಪಡುವ ಒಂದು ದಿನದ ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕುಮಾರ್ ಉದ್ಯಾವರ ಮತ್ತು ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲೆಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳಾದ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ರಘುವೀರ್ ಶೆಣೈ, ದುರ್ಗಾಪ್ರಸಾದ್, ರಾಜೀವ್ ಕುಲಾಲ್, ಡಾ! ರಾಮಚಂದ್ರ ಕಾಮತ್, ಡಾ! ವಿದ್ಯಾಧರ ಶೆಟ್ಟಿ, ಗಣೇಶ್ ಬ್ರಹ್ಮಾವರ, ಸಂತೋಷ್ ಜತ್ತನ್ ಹೇರೂರು, ಚಂದ್ರಶೇಖರ್ ಪ್ರಭು, ಪಾಂಡುರಂಗ ಲಾಗ್ವನ್ಕರ್, ಆನಂದ ಗಾಣಿಗ ಮುಂತಾದವರು ಉಪಸ್ಥಿತರಿದ್ದರು.