
ಉಡುಪಿ: ಪಕ್ಷದ ಸೂಚನೆಯಂತೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ವಿಸ್ತಾರಕರ ಕಾರ್ಯ ಪದ್ಧತಿ ಪಕ್ಷ ಸಂಘಟನೆಯಲ್ಲಿ ಅತೀ ಶ್ರೇಷ್ಠ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಫೆ.18ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಉಡುಪಿ ನಗರ, ಉಡುಪಿ ಗ್ರಾಮಾಂತರ ಮತ್ತು ಕಾಪು ಮಂಡಲಗಳ ವ್ಯಾಪ್ತಿಯ ವಿಸ್ತಾರಕರ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ, ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಫೆ.21ರಿಂದ ಫೆ.28ರ ನಿಗದಿತ ಅವಧಿಯಲ್ಲಿ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಹ ಪ್ರತೀ ಶಕ್ತಿಕೇಂದ್ರಕ್ಕೆ 3 ದಿನಗಳ ನಿವಾಸಿ ಪ್ರವಾಸದ ಮೂಲಕ ಪಕ್ಷದ ಮಂಡಲ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ವಿಸ್ತಾರಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಬೂತ್ ಸಮಿತಿಯನ್ನು ಸಕ್ರಿಯಗೊಳಿಸುವ ಜೊತೆಗೆ ಸರಕಾರದ ವಿವಿಧ ಜನಪರ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವುದು, ಪಕ್ಷದ ನಿಗದಿತ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನ ಇತ್ಯಾದಿ ಕಾರ್ಯಸೂಚಿಗಳೊಂದಿಗೆ ವಿಸ್ತಾರಕರು ಜವಾಬ್ದಾರಿ ನಿರ್ವಹಿಸಲಿದ್ದಾರೆ. ವಿಸ್ತಾರಕ ಅಭಿಯಾನವು ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಕಾರ್ಯಗಳೊಂದಿಗೆ ಮುಂದಿನ ಎಲ್ಲಾ ಚುನಾವಣೆಯ ಪ್ರಚಂಡ ಗೆಲುವಿಗೆ ಪೂರಕವಾಗಲಿದೆ ಎಂದು ಕುಯಿಲಾಡಿ ತಿಳಿಸಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ವಿಸ್ತಾರಕ ಯೋಜನೆಯಿಂದ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಲಿದೆ. ಪ್ರಶಿಕ್ಷಣದ ಮೂಲಕ ಪಕ್ಷದ ಸ್ಥೂಲ ಪರಿಚಯ ಪಡೆದಿರುವ ವಿವಿಧ ಸ್ತರದ ಪದಾಧಿಕಾರಿಗಳು ವಿಸ್ತಾರಕರಾಗಿ ಬೂತ್ ಸಮಿತಿ, ಪಂಚರತ್ನ, ಪೇಜ್ ಪ್ರಮುಖ್, ಪೇಜ್ ಸಮಿತಿ ಮುಂತಾದ ವ್ಯವಸ್ಥೆಗಳನ್ನು ಗಮನಿಸಿ, ಸಕ್ರಿಯಗೊಳಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ವಿನೂತನ ಯೋಜನೆಗಳನ್ನು ಪ್ರಚಲಿತಗೊಳಿಸುವ ಮೂಲಕ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಸಶಕ್ತ ಬೂತ್ ನಿಂದ ಸದೃಢ ಪಕ್ಷ ಸಂಘಟನೆ ಎಂಬ ಪರಿಕಲ್ಪನೆಯೊಂದಿಗೆ ನಡೆಯುವ ಈ ಅಭಿಯಾನದಲ್ಲಿ ವಿಸ್ತಾರಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ವಿಸ್ತಾರಕರ ಜವಾಬ್ದಾರಿ, ಕರ್ತವ್ಯ ನಿರ್ವಹಣೆ, ಮಾಹಿತಿ ಸಂಗ್ರಹ ಮತ್ತು ವರದಿ ಸಲ್ಲಿಕೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಎಮ್. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಂಡಲವಾರು ವಿಸ್ತಾರಕರು, ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.