
ಉಡುಪಿ: ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಪುಣ್ಯ ಸಂಸ್ಮರಣೆಯ ಪ್ರಯುಕ್ತ ವಿನೂತನವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ ಎಲ್ಲಾ ಮಹಾ ಶಕ್ತಿಕೇಂದ್ರಗಳ ನೇತೃತ್ವದಲ್ಲಿ ಸಮರ್ಪಣಾ ದಿನಾಚರಣೆಯನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಫೆ.7ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಹಾ ಶಕ್ತಿಕೇಂದ್ರಗಳ ನೂತನ ಉಸ್ತುವಾರಿಗಳ ಯಾದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮುಂದಿನ ಎಲ್ಲಾ ಚುನಾವಣೆಗಳನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಸದೃಢಗೊಳಿಸಲು ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ 42 ಮಹಾಶಕ್ತಿ ಕೇಂದ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬೂತ್ ಅಧ್ಯಕ್ಷರ ನಾಮ ಫಲಕ ಅನಾವರಣ ಸಹಿತ ಬೂತ್ ಸಮಿತಿ, ಪೇಜ್ ಪ್ರಮುಖ್, ಪಂಚರತ್ನ ಸಮಿತಿ, ಶಕ್ತಿಕೇಂದ್ರಗಳನ್ನು ಸಕ್ರಿಯಗೊಳಿಸಿ ನಿಗದಿತ ಸಮಯದಲ್ಲಿ ಮಹಾ ಶಕ್ತಿಕೇಂದ್ರದಲ್ಲಿ ಸಭೆಗಳನ್ನು ನಡೆಸಿ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಮಹಾ ಶಕ್ತಿಕೇಂದ್ರಗಳ ಉಸ್ತುವಾರಿಗಳು ಪ್ರಗತಿಯ ವರದಿಯನ್ನು ನೀಡಲಿದ್ದಾರೆ ಎಂದು ಕುಯಿಲಾಡಿ ಹೇಳಿದರು.
ಪಕ್ಷದ ಮಂಡಲ ಮತ್ತು ಮೇಲ್ಪಟ್ಟ ವಿವಿಧ ಸ್ತರದ ಪದಾಧಿಕಾರಿಗಳು ವಿಸ್ತಾರಕರಾಗಿ ಶಕ್ತಿಕೇಂದ್ರ ಮಟ್ಟದಲ್ಲಿ ಸೇವೆ ಸಲ್ಲಿಸಲಿದ್ದು, ವಿವಿಧ ಮಂಡಲಗಳಲ್ಲಿ ಫೆ.14 ಮತ್ತು ಫೆ.15ರಂದು ಪ್ರಮುಖರು ಸಭೆ ಸೇರಿ ವಿಸ್ತಾರಕರ ಹೆಸರಿನ ಯಾದಿಯನ್ನು ಅಂತಿಮಗೊಳಿಸಲಿದ್ದಾರೆ. ಜನಸಂಘದ ಅವಧಿಯಿಂದ ಸೇವೆ ಸಲ್ಲಿಸಿರುವ ಪಕ್ಷದ ಹಿರಿಯ ಕಾರ್ಯಕರ್ತರ ಮಾಹಿತಿ ಸಂಗ್ರಹ, ಪಕ್ಷದ ಮೈಕ್ರೋ ಡೊನೇಷನ್ ಇತ್ಯಾದಿ ಕಾರ್ಯಚಟುವಟಿಕೆಗಳಿಗೆ ವೇಗ ನೀಡುವ ಜೊತೆಗೆ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ವಿವಿಧ ಹಂತಗಳ ಜೊತೆಗೆ ಬೂತ್ ಮಟ್ಟಕ್ಕೆ ತಲುಪಿಸಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವಂತೆ ಕುಯಿಲಾಡಿ ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಪ್ರಮುಖ ಆರು ಕಾರ್ಯಕ್ರಮಗಳ ಸಹಿತ ಸಂಘಟನಾತ್ಮಕ ವಿಚಾರಗಳನ್ನು ವಿಸ್ತೃತವಾಗಿ ಮಂಡಿಸಿದರು.
ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾ ಶಕ್ತಿಕೇಂದ್ರಗಳ ನೂತನ ಉಸ್ತುವಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಸ್ವಾಗತಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.