Design a site like this with WordPress.com
Get started

ಜಿಲ್ಲಾ ಕ್ರೀಡಾ ಸಮ್ಮೇಳನ ಯಶಸ್ವಿಗೊಳಿಸಿ: ಶಾಸಕ ರಘುಪತಿ ಭಟ್

ಉಡುಪಿ: ಮನೋಲ್ಲಾಸ ಹಾಗೂ ಮನೋವಿಕಾಸಕ್ಕಾಗಿ ಕ್ರೀಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಕ್ರೀಡಾ ಭಾರತಿ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಜ.2ರಂದು ಅಜ್ಜರಕಾಡು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ನಡೆಯುವ ಜಿಲ್ಲಾ ಕ್ರೀಡಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಉಡುಪಿ ಶಾಸಕ, ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಕೆ.ರಘುಪತಿ ಭಟ್ ಕ್ರೀಡಾಭಿಮಾನಿಗಳಿಗೆ ಕರೆ ನೀಡಿದರು.

ಅವರು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಜ.2ರಂದು ನಡೆಯುವ ಜಿಲ್ಲಾ ಕ್ರೀಡಾ ಸಮ್ಮೇಳನ 2021-22 ಇದರ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ದೈಹಿಕ ಶ್ರಮ ರಹಿತ ಜೀವನವೇ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಜನತೆಯನ್ನು ಕ್ರೀಡೆಯತ್ತ ಸೆಳೆದು ಅ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಕ್ರೀಡಾ ಭಾರತೀಯ ಸದುದ್ದೇಶವಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಕ್ರೀಡಾ ಭಾರತಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಈ ಕ್ರೀಡಾ ಸಮ್ಮೇಳನವನ್ನು ಆಯೋಜಿಸಿದೆ. ಜಿಲ್ಲೆಯ ಕ್ರೀಡಾ ಪಟುಗಳು, ಕ್ರೀಡಾಭಿಮಾನಿಗಳು ಜ.2ರ ಒಂದು ದಿನವನ್ನು ಮನೋಲ್ಲಾಸ, ಮನೋವಿಕಾಸಕ್ಕಾಗಿ ಕ್ರೀಡೆಗೆ ಮೀಸಲಿಟ್ಟು, ಈ ಕ್ರೀಡಾ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಅಧ್ಯಕ್ಷ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಗೆ ಸಂಘಟನಾತ್ಮಕ ರೀತಿಯ ಕಾರ್ಯಕ್ರಮಗಳ ಆಯೋಜನೆಯಲ್ಲಿ ಉತ್ತಮ ಹೆಸರಿದೆ. ಕ್ರೀಡಾ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ರಾಷ್ಟ್ರೀಯ ಸಂಘಟನೆ ಕ್ರೀಡಾ ಭಾರತಿ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾ ಸಮ್ಮೇಳನ ಪ್ರಥಮ ಬಾರಿಗೆ ಪೊಡವಿಗೊಡೆಯ ಶ್ರೀಕೃಷ್ಣನ ನೆಲೆವೀಡು ಉಡುಪಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಸಂಕಲ್ಪ ಶುದ್ಧಿ ಇದ್ದಲ್ಲಿ ಕಾರ್ಯಸಿದ್ಧಿ ಆಗುತ್ತದೆ ಎಂಬಂತೆ, ಅತ್ಯಂತ ಯೋಜನಾಬದ್ಧವಾಗಿ ಎಲ್ಲಾ ಕ್ರೀಡಾ ಸಂಘಟನೆಗಳ ಸಂಪೂರ್ಣ ಸಹಕಾರದೊಂದಿಗೆ ನಡೆಯುವ ಈ ಪ್ರಥಮ ಕ್ರೀಡಾ ಸಮ್ಮೇಳನ ಒಂದು ಮಾದರಿ ಕ್ರೀಡಾ ಸಮ್ಮೇಳನವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರೀಡಾ ಭಾರತೀ ಮಂಗಳೂರು ವಿಭಾಗ ಸಂಯೋಜಕ ಪ್ರಸನ್ನ ಕಾರ್ಕಳ, ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಜೊತೆಗೆ ಸಮಾಜವನ್ನು ಬೆಸೆಯುವ ಸದುದ್ದೇಶದಿಂದ ಎಲ್ಲಾ ವಯೋಮಾನದವರೂ ಸಂತೋಷಕ್ಕಾಗಿ, ಸಂಭ್ರಮದಿಂದ ಆಟವಾಡುವ ಸಹಜ ಸ್ವಭಾವವನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶ ಕ್ರೀಡಾ ಭಾರತೀಯದ್ದಾಗಿದೆ. ರಾಷ್ಟ್ರಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಈ ರೀತಿಯ ಕ್ರೀಡಾ ಸಮ್ಮೇಳನಗಳು ನಡೆಯಲಿವೆ. ಜನ ಸಾಮಾನ್ಯರಲ್ಲೂ ಕ್ರೀಡಾಸಕ್ತಿಯನ್ನು ಬೆಳೆಸಿ ಸ್ವಸ್ಥ ಶರೀರ, ಸ್ವಸ್ಥ ಮನಸ್ಸುಳ್ಳ, ಸ್ವಸ್ಥ ಸಮಾಜ ನಿರ್ಮಾಣ ಈ ಕ್ರೀಡಾ ಸಮ್ಮೇಳನದ ಗುರಿ. ಜಿಲ್ಲೆಯಲ್ಲಿ ನಡೆಯುವ ಪ್ರಥಮ ಕ್ರೀಡಾ ಸಮ್ಮೇಳನದ ಯಶಸ್ಸಿಗೆ ಎಲ್ಲರ ತುಂಬು ಹೃದಯದ ಸಹಕಾರ ಅತೀ ಅಗತ್ಯ ಎಂದರು.

ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ, ಯುವ ಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಕಾರ್ಯಕ್ರಮದ ವಿವರಗಳನ್ನು ನೀಡುತ್ತಾ, ಜ.2 ರವಿವಾರ ಬೆಳಿಗ್ಗೆ 9.30ಕ್ಕೆಉಡುಪಿ ಕಲ್ಪನಾ ಟಾಕೀಸ್ ಬಳಿಯಿಂದ ಕ್ರೀಡಾಳುಗಳ ಶೋಭಾಯಾತ್ರೆ, 10.30ಕ್ಕೆ ಕ್ರೀಡಾ ಸಮ್ಮೇಳನದ ಉದ್ಘಾಟನಾ ಸಮಾರಂಭ, 11.30ಕ್ಕೆ ವಿವಿಧ ಕ್ರೀಡಾ ಪ್ರದರ್ಶನ, ಮಧ್ಯಾಹ್ನ 3.00ಕ್ಕೆ ಕ್ರೀಡಾ ಗೋಷ್ಠಿ ಹಾಗೂ ಸಂಜೆ 5.00ಕ್ಕೆ ಸಮಾರೋಪ ಸಮಾರಂಭ ಹಾಗೂ ಪ್ರಶಾಂತ್ ಮತ್ತು ತಂಡ ಕಡಿಯಾಳಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಉಪ ನಿರ್ದೇಶಕ ಮಲ್ಲೆ ಸ್ವಾಮಿ, ವಿವಿಧ ವಲಯ ಶಿಕ್ಷಣಾಧಿಕಾರಿಗಳಾದ ನಾಗೇಂದ್ರ ಎ.ಕೆ. ಉಡುಪಿ, ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಮುಂದಿನಮನಿ ಜಿ.ಎಮ್. ಬೈಂದೂರು, ಕ್ರೀಡಾ ಸಮ್ಮೇಳನ ಸಮಿತಿಯ ಸಂಚಾಲಕ, ಕ್ರೀಡಾ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬಿ.ವಸಂತ ಶೆಟ್ಟಿ, ಸಮ್ಮೇಳನ ಸಮಿತಿ ಕಾರ್ಯದರ್ಶಿಗಳಾದ ಕ್ರೀಡಾ ಭಾರತಿ ಜಿಲ್ಲಾ ಉಪಾಧ್ಯಕ್ಷ ದಿನೇಶ್ ಕುಮಾರ್ ಎ., ಕ್ರೀಡಾ ಭಾರತಿ ಕಾಪು ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಸಮ್ಮೇಳನ ಸಮಿತಿ ಕೋಶಾಧಿಕಾರಿ ಕ್ರೀಡಾ ಭಾರತಿ ಜಿಲ್ಲಾ ಕಾರ್ಯದರ್ಶಿ ಲಿಂಗಯ್ಯ ಬೈಂದೂರು, ಕ್ರೀಡಾ ಭಾರತಿಯ ವಿವಿಧ ತಾಲೂಕುಗಳ ಅಧ್ಯಕ್ಷರು, ಸಮ್ಮೇಳನ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜಿಲ್ಲೆಯ ವಿವಿಧ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಸಮಾಜದ ವಿವಿಧ ಸ್ತರದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: