
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ರೈತರಿಗಾಗಿ ಅತ್ಯಂತ ಮಹತ್ವಪೂರ್ಣ, ಚಾರಿತ್ರಿಕ ನಿರ್ಧಾರಗಳನ್ನು ಪ್ರಕಟಿಸಿದೆ. ಈ ಬೆಳವಣಿಗೆಯಿಂದ ಕರ್ನಾಟಕ ಕಂಡಿರುವ ಧೀಮಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರೈತಪರ ಎಂಬುದು ಮತ್ತೆ ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ಹಿಂದಿನ ಬಿಜೆಪಿಯೇತರ ಸರಕಾರಗಳು ಕೇವಲ ಘೋಷಣೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿದ್ದವು. “ಆಡದೇ ಮಾಡುವವ ರೂಢಿಯೊಳಗುತ್ತಮನು” ಎಂಬ ಮಾತಿನಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ರೈತಪರ ಎಂಬುದೀಗ ಜನರ ಅರಿವಿಗೂ ಬರುವಂತಾಗಿದೆ.
ರಾಜ್ಯದಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂಪಾಯಿ ಪರಿಹಾರ ವಿತರಣೆಗೆ ಸರಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೈಗೊಂಡಿರುವ ಐತಿಹಾಸಿಕ ನಿರ್ಧಾರ ಇದಾಗಿದೆ. ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕ ಹೆಜ್ಜೆ ಇಡಲಾಗಿದೆ.
ಒಣಬೇಸಾಯ – ದ್ವಿಗುಣ ಮೊತ್ತ: ಒಂದು ಹೆಕ್ಟೇರ್ ಒಣ ಬೇಸಾಯ ಬೆಳೆಹಾನಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ (ಎನ್.ಡಿ.ಆರ್.ಎಫ್) ನಿಯಮದ ಪ್ರಕಾರ ನಿಗದಿಯಾಗಿರುವ ಪರಿಹಾರದ ಮೊತ್ತ 6,800 ರೂಪಾಯಿ ಮಾತ್ರ ಇದೆ. ಈ ಪರಿಹಾರ ಮೊತ್ತ ಕಡಿಮೆಯಾಗುತ್ತದೆ ಹಾಗೂ ಇದನ್ನು ಹೆಚ್ವಿಸಬೇಕೆಂಬ ತಮ್ಮ ಆಶಯವನ್ನು ಬಸವರಾಜ ಬೊಮ್ಮಾಯಿ ಜಾರಿಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈ ಮೊತ್ತಕ್ಕೆ ಅಧಿಕವಾಗಿ ತನ್ನ ಬೊಕ್ಕಸದಿಂದ 6,800 ರೂಪಾಯಿ ಕೊಡಲು ನಿರ್ಧಾರ ಮಾಡಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿವೃಷ್ಟಿ ಹಾಗೂ ಬೆಳೆಹಾನಿ ಮೇಲಿನ ಚರ್ಚೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಇದೊಂದು ಮಹತ್ವಪೂರ್ಣ ನಿರ್ಣಯವಾಗಿದ್ದು, ಕೇವಲ ಬಾಯಿ ಮಾತಿನ ನಿರ್ಧಾರ ಇದಲ್ಲ ಎಂಬುದಕ್ಕೆ ಹಣಕಾಸು ಮೀಸಲಿಟ್ಟಿರುವುದೇ ಸಾಕ್ಷಿಯಾಗಿದೆ. ಇದರಿಂದಾಗಿ ಒಟ್ಟು 1 ಹೆಕ್ಟೇರ್ ಒಣಬೇಸಾಯದಲ್ಲಿನ ಬೆಳೆಹಾನಿಗೆ 13,600 ರೂಪಾಯಿ ಬೆಳೆ ಪರಿಹಾರ ಲಭಿಸಲಿದೆ.
ನೀರಾವರಿ ಪ್ರದೇಶ – ಹೆಚ್ಚುವರಿ 11,500 ರೂಪಾಯಿ: ಅದೇ ರೀತಿ ನೀರಾವರಿ ಪ್ರದೇಶದ ಒಂದು ಹೆಕ್ಟೇರ್ ಬೆಳೆ ಹಾನಿಗೆ 13,500 ರೂಪಾಯಿ ನಿಗದಿಯಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 11,500 ರೂಪಾಯಿ ಸೇರಿಸಿ ಒಟ್ಟು 25,000 ಬೆಳೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಒಟ್ಟು 12.69 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.
ತೋಟಗಾರಿಕೆ ಬೆಳೆ – 28,000 ರೂಪಾಯಿ: ತೋಟಗಾರಿಕೆಯ ಒಂದು ಹೆಕ್ಟೇರ್ ಬೆಳೆ ಹಾನಿಗೆ 18,000 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ 10,000 ರೂಪಾಯಿ ನೀಡಲು ನಿರ್ಧಾರ ಮಾಡಿದ್ದು, ಇದರಿಂದ ಪ್ರತಿ ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಗೆ ಒಟ್ಟು 28,000 ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ.
1,200 ಕೋಟಿ ರೂಪಾಯಿ ಹೆಚ್ಚುವರಿ ಹೊರೆ: ರಾಜ್ಯ ಸರ್ಕಾರ ಕೋವಿಡ್ ಮತ್ತು ಆರ್ಥಿಕ ತೊಂದರೆ ನಡುವೆಯೂ ಈ ನಿರ್ಧಾರ ಕೈಗೊಂಡಿದೆ. ನಾಡಿನ ಬೆನ್ನೆಲುಬಾದ ರೈತರ ನೆರವಿಗೆ ನಿಲ್ಲುವ ಪ್ರಮುಖ ನಿರ್ಧಾರ ಇದಾಗಿದೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು ರೈತಪರ ಎಂಬುದು ಮತ್ತೆ ಜಗಜ್ಜಾಹೀರಾಗಿದೆ. ಈ ಹೆಚ್ಚುವರಿ ಮೊತ್ತದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಟ್ಟು 1,200 ಕೋಟಿ ಆರ್ಥಿಕ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ರೈತರ ಮಕ್ಕಳಿಗೆ ಶಿಷ್ಯವೇತನ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ ರೈತರ ಮಕ್ಕಳಿಗೆ ಒಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿ ಅನುಷ್ಠಾನಕ್ಕೆ ತಂದಿದೆ.
ಇದರಡಿ ಪಿಯುಸಿ, ಐಟಿಐ ಅಥವಾ ತತ್ಸಮಾನ ತರಗತಿಗಳಲ್ಲಿ ಓದುತ್ತಿರುವ ಬಾಲಕರಿಗೆ 2,500 ಮತ್ತು ಬಾಲಕಿಯರಿಗೆ ತಲಾ 3,000 ರೂಪಾಯಿ ಶಿಷ್ಯವೇತನ ದೊರಕಲಿದೆ. ಪದವಿ, ಎಂಬಿಬಿಎಸ್, ಎಂಜಿನಿಯರಿಂಗ್ ಪದವಿ ಹಾಗೂ ಪದವಿಗೆ ಸಮನಾದ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ತಲಾ 5,000 ಮತ್ತು ವಿದ್ಯಾರ್ಥಿನಿಯರಿಗೆ ತಲಾ 5,500 ರೂಪಾಯಿ ಶಿಷ್ಯವೇತನ ಪ್ರಕಟಿಸಲಾಗಿದೆ. ಅಲ್ಲದೆ, ಕಾನೂನು ಪದವಿ, ಅರೆ ವೈದ್ಯಕೀಯ, ಬಿ.ಫಾರ್ಮಾ, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 7,500 ಮತ್ತು ವಿದ್ಯಾರ್ಥಿನಿಯರಿಗೆ 8,000 ಶಿಷ್ಯವೇತನ ನೀಡಲಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 10,000, ವಿದ್ಯಾರ್ಥಿನಿಯರಿಗೆ 11,000 ಶಿಷ್ಯವೇತನ ಘೋಷಿಸಲಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳು, ನಾಡಿನ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನದ ಜೊತೆಗೆ ಅನ್ನದಾತನ ಮತ್ತು ಅನ್ನದಾತನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಆಶಯವನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಈಡೇರಿಸಲು ಕಟಿಬದ್ಧ ಎಂಬುದನ್ನು ತಿಳಿಸುವಂತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಈ ಎಲ್ಲಾ ರೈತಪರ ಯೋಜನೆಗಳನ್ನು ಘೋಷಿಸುವ ಮೂಲಕ ಬಿಜೆಪಿ ಆಡಳಿತ ರೈತಪರ, ಜನಪರ, ಅಭಿವೃದ್ಧಿ ಪರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.