
ಉಡುಪಿ: ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯತ್ ನ ಸದಸ್ಯರಿಗೆ ಪ್ರಥಮ ಬಾರಿಗೆ ಗೌರವ ಧನವನ್ನು ಮಂಜೂರು ಮಾಡಿಸಿದ್ದು ನಮ್ಮ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ನವರ ಅವಧಿಯಲ್ಲಿ ರೂ.250 ಗೌರವ ಧನವನ್ನು ಮಂಜೂರು ಮಾಡಿಸಲು ಶ್ರಮ ಪಟ್ಟಿದ್ದಲ್ಲದೇ ಗೌರವ ಧನ ಹೆಚ್ಚಳಕ್ಕೆ ನಿರಂತರವಾಗಿ ಹೋರಾಟ ಮಾಡಿ ಈಗ ರೂ.1,000ಕ್ಕೆ ಗೌರವ ಧನವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ವಿಧಾನ ಪರಿಷತ್ ನಲ್ಲಿ ಸಭಾ ನಾಯಕರಾಗಿ ರೂ.1,000 ಇದ್ದ ಗೌರವ ಧನವನ್ನು ರೂ.2,000ಕ್ಕೆ ಹೆಚ್ಚಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಇತಿಹಾಸದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸಬಲೀಕರಣಕ್ಕೆ ಗ್ರಾಮ ಪಂಚಾಯತ್ ಗಳು ಸರಕಾರದಂತೆ ಕೆಲಸವನ್ನು ಮಾಡಬೇಕೆನ್ನುವ ಕಲ್ಪನೆಯನ್ನು ನೀಡಿ ನಿರಂತರವಾಗಿ ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೋಸ್ಕರ ದುಡಿದಿರುವ ಏಕೈಕ ಜನಪ್ರತಿನಿಧಿ ಕೋಟ ಶ್ರೀನಿವಾಸ ಪೂಜಾರಿಯವರು ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ. ಆ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಒಂದಾಗಿ ಪೂರ್ಣ ಬಹುಮತದಿಂದ ಅವರನ್ನು ಗೆಲ್ಲಿಸಬೇಕು ಎಂಬ ವಿನಂತಿಯನ್ನು ಮಾಡುತ್ತೇನೆ ಎಂದು ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ಹೇಳಿದರು.
ಅವರು ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಉಡುಪಿ ನಗರ ವತಿಯಿಂದ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಉಡುಪಿ ನಗರ ವ್ಯಾಪ್ತಿಯ ಗ್ರಾಮ ಪಂಚಾಯತ್ ಮತ್ತು ಉಡುಪಿ ನಗರಸಭಾ ಸದಸ್ಯರ ಚುನಾವಣಾ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಮಾತನಾಡಿ, ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ನ ಸದಸ್ಯರು, ಅತ್ಯಂತ ಜಾಗರೂಕರಾಗಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಪಾರ ಅನುಭವ ಹೊಂದಿರುವ ಎಂ ಬಿಜೆಪಿಯ ಏಕೈಕ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತ್ರ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ನನ್ನ ಮಿತಿಯೊಳಗೆ 13 ವರ್ಷಗಳಿಂದ ನಿರಂತರವಾಗಿ ಗ್ರಾಮ ಪಂಚಾಯತ್ ಸದಸ್ಯರ ಸಹಿತ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಪರವಾಗಿ ಕೆಲಸಗಳನ್ನು ಮಾಡಿದ್ದೇನೆ ಎಂಬ ವಿಶ್ವಾಸವಿದೆ. ಬಿಜೆಪಿಯಿಂದ ನಾನೊಬ್ಬನೇ ಅಭ್ಯರ್ಥಿಯಾಗಿದ್ದು, 1 ಅಂಕೆಯನ್ನು ಮಾತ್ರ ಬರೆಯುವ ಮೂಲಕ ಒಂದೇ ಮತವನ್ನು ಚಲಾಯಿಸಿ ಪಂಚಾಯತ್ ರಾಜ್ ಸಬಲೀಕರಣಕ್ಕಾಗಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ, ಸದಾನಂದ ಉಪ್ಪಿನಕುದ್ರು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ ಎಸ್. ಪೂಜಾರಿ, ಪ್ರಭಾಕರ ತಿಂಗಳಾಯ, ಗಾಯತ್ರಿ ಸುರೇಶ್, ಕೃಷ್ಣ ದೇವಾಡಿಗ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ನಗರಸಭಾ ಸದಸ್ಯರು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಅಮೀನ್ ವಂದಿಸಿದರು.