
ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನ.19ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶಕ್ಕೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳ ಬಿಜೆಪಿ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಪ್ರಮುಖ ಅಪೇಕ್ಷಿತರಾಗಿದ್ದು, ಕಡ್ಡಾಯವಾಗಿ ಭಾಗವಹಿಸಿ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸುವ ಮೂಲಕ ಪಕ್ಷ ನಿಷ್ಠೆ ಮತ್ತು ಬದ್ಧತೆಗೆ ಸಾಕ್ಷಿಯಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಜನಸ್ವರಾಜ್ ಸಮಾವೇಶದ ಪ್ರಯುಕ್ತ ನ.17ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬಹುತೇಕ ಈ ವಿಧಾನ ಪರಿಷತ್ ಚುನಾವಣೆಯ ಸಂಭಾವ್ಯ ಅಭ್ಯರ್ಥಿಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಪ್ರಾಯಶಃ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚಿಂತನೆ ಪಕ್ಷದ ಮುಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಸಮಸ್ತ ಬಿಜೆಪಿ ಬೆಂಬಲಿತ ಪ್ರತಿನಿಧಿ ಸದಸ್ಯರು ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮಾತ್ರವೇ 1ನೇ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ದೊಡ್ಡ ಅಂತರದ ಗೆಲುವಿಗೆ ಕಾರಣರಾಗಬೇಕು ಎಂದರು.
ವಿಧಾನ ಪರಿಷತ್ ಚುನಾವಣೆಯ ಸಂಭಾವ್ಯ ಅಭ್ಯರ್ಥಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಜಿಲ್ಲೆಯ ಎಲ್ಲಾ ಮಂಡಲಗಳ ವ್ಯಾಪ್ತಿಯಿಂದ ಜನ ಸ್ವರಾಜ್ ಸಮಾವೇಶಕ್ಕೆ ಪ್ರತೀ ಗ್ರಾಮ ಪಂಚಾಯತ್ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಎಲ್ಲಾ ಬಿಜೆಪಿ ಬೆಂಬಲಿತ ಸದಸ್ಯರನ್ನು ಕರೆ ತರುವ ಬಗ್ಗೆ ಜನಪ್ರತಿನಿಧಿಗಳ ಜೊತೆಗೆ ಪಕ್ಷದ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಸಹಿತ ಬೂತ್ ಪದಾಧಿಕಾರಿಗಳು ಹಾಗೂ ಪ್ರಮುಖರು ಸೇರಿ ಯೋಜನೆ ರೂಪಿಸುವ ಮೂಲಕ ಎಲ್ಲರೂ ಒಂದಾಗಿ ಸಂಘಟಿತ ಪ್ರಯತ್ನದ ಮೂಲಕ ಜನ ಸ್ವರಾಜ್ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ನ.19ರ ಜನ ಸ್ವರಾಜ್ ಸಮಾವೇಶದಲ್ಲಿ ಮಂಡಲವಾರು ಗ್ರಾಮ ಪಂಚಾಯತ್, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಶಹ ನೋಂದಾವಣೆ ಮತ್ತು ಆಸನ ವ್ಯವಸ್ಥೆ ಮಾಡಲಾಗಿದೆ. ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ತಂಡದ ಜೊತೆ ಕ್ಲಪ್ತ ಸಮಯದಲ್ಲಿ ಉಪಸ್ಥಿತರಿದ್ದು ಸಮಾವೇಶದಲ್ಲಿ ಪೂರ್ತಿಯಾಗಿ ಭಾಗವಹಿಸಿ ಸಹಕರಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಸದಾನಂದ ಉಪ್ಪಿನಕುದ್ರು ವಂದಿಸಿದರು.