Design a site like this with WordPress.com
Get started

ಬಿಜೆಪಿ ಮತ ಮಾರಾಟಕ್ಕಿಲ್ಲ; ಗೆಲುವು ನಿಶ್ಚಿತ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿಯಲ್ಲಿ ಜನ ಸ್ವರಾಜ್ ಸಮಾವೇಶದ ಪೂರ್ವಭಾವಿ ಸಭೆ



ರಾಜ್ಯ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ನ.19ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶ ಹಾಗೂ ಚುನಾವಣಾ ಪೂರ್ವಸಿದ್ಧತೆಯ ಬಗ್ಗೆ ಸಮಾಲೋಚನಾ ಸಭೆಗಳನ್ನು ಜಿಲ್ಲೆಯ ಎಲ್ಲಾ ಮಂಡಲಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ನ.17ರಂದು ಬಿಜೆಪಿ ಉಡುಪಿ ನಗರ ವತಿಯಿಂದ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜನ ಸ್ವರಾಜ್ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಬಿಜೆಪಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಿತ ಎಲ್ಲ ಸ್ತರಗಳಲ್ಲಿ ಜನಪರ ಆಡಳಿತ ನಡೆಸುತ್ತಿದೆ. ವಿಧಾನ ಪರಿಷತ್ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಕೋಟರವರು ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯ ಬಗ್ಗೆ ಅಪಾರ ಅನುಭವವನ್ನು ಹೊಂದಿರುವ ಕಳಂಕ ರಹಿತ ಸಚ್ಚಾರಿತ್ರ್ಯವಂತ ಯಶಸ್ವೀ ಜನ ನಾಯಕ. ಬಿಜೆಪಿ ಚುನಾವಣೆ ಗೆಲ್ಲುವುದು ನಿಶ್ಚಿತ. ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ವಿರೋಧಿ ಪಾಳಯದಿಂದ ಕುರುಡು ಕಾಂಚಾಣ ಬಹಳಷ್ಟು ಸದ್ದು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ಬಿಜೆಪಿ ಮತದಾರರ ಯಾವುದೇ ಮತ ಮಾರಾಟಕ್ಕಿಲ್ಲ. ಪಕ್ಷದ ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳಾದ ಗ್ರಾಮ ಪಂಚಾಯತ್ ಸದಸ್ಯರು, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಸದಸ್ಯರು ಈ ಬಗ್ಗೆ ಅತ್ಯಂತ ಜಾಗರೂಕತೆ ವಹಿಸಿ ಕೇವಲ 1ನೇ ಪ್ರಾಶಸ್ತ್ಯದ ಮತವನ್ನು ಮಾತ್ರ ಚಲಾಯಿಸುವ ಮೂಲಕ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸುವ ಮೂಲಕ ಬಿಜೆಪಿಯ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಎಂದೆಂದಿಗೂ ಪಕ್ಷ ನಿಷ್ಠೆಗೆ ಬದ್ಧರು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಬೇಕಾಗಿದೆ ಎಂದು ಕುಯಿಲಾಡಿ ಹೇಳಿದರು.

ವಿಧಾನ ಪರಿಷತ್ ಚುನಾವಣಾ ಸಂಭಾವ್ಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಓರ್ವ ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯನಾಗಿ ಸೇವೆ ಸಲ್ಲಿಸಿ, ಮೂರು ಬಾರಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಂದ ಆಯ್ಕೆಗೊಂಡ ವಿಧಾನ ಪರಿಷತ್ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ, ವಿಧಾನ ಪರಿಷತ್ ಸಭಾ ನಾಯಕನಾಗಿ, ಎರಡು ಬಾರಿ ಸಚಿವನಾಗಿ ಸಾರ್ಥಕ ಜನಸೇವೆಗೈಯುವ ಸುಯೋಗವನ್ನು ಪಕ್ಷ ನೀಡಿದೆ. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಸಂದ ಗೌರವ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ನಗರಾಡಳಿತ ವ್ಯವಸ್ಥೆಯಲ್ಲಿ ದೊರೆತ ಅನುಭವ, ಯೋಚನೆಗಳು ಇಂದು ಸ್ಥಳೀಯಾಡಳಿತ ಸಂಸ್ಥೆಯ ಸಬಲೀಕರಣದ ಜೊತೆಗೆ ಪ್ರತಿನಿಧಿಗಳ ಗೌರವ ಧನ ಹೆಚ್ಚಳದಂತಹ ಮಾದರಿ ಯೋಜನೆಗಳ ಅನುಷ್ಠಾನಕ್ಕೆ ಪುಷ್ಠಿ ನೀಡಿದೆ. ಡಿ.10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಹಣ ಬಲದ ವಿರುದ್ಧ ಜನ ಬಲದ ಗೆಲುವು ಎಂದೆನಿಸಲಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜನ ಸ್ವರಾಜ್ ಸಮಾವೇಶದ ಸಂಚಾಲಕ ಮನೋಹರ್ ಎಸ್. ಕಲ್ಮಾಡಿ ಮಾತನಾಡಿ, ನ.19ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು ತಪ್ಪದೇ ಭಾಗವಹಿಸಬೇಕು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜನ ಸ್ವರಾಜ್ ಸಮಾವೇಶದಲ್ಲಿ ಚುನಾವಣಾ ಅಭ್ಯರ್ಥಿ ಸಹಿತ ರಾಜ್ಯ ಹಾಗೂ ಕೇಂದ್ರ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರು ಭಾಗವಹಿಸಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಪಕ್ಷದ ಪ್ರಮುಖರು, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಜನ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಹಕರಿಸುವ ಜೊತೆಗೆ ಸಮಾವೇಶದಲ್ಲಿ ಭಾಗವಹಿಸಿ ಜನ ಸ್ವರಾಜ್ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.

ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಕೋಟ ಶ್ರೀನಿವಾಸ ಪೂಜಾರಿಯವರು, ಓರ್ವ ಸಾಮಾನ್ಯ ಕಾರ್ಯಕರ್ತ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಠಿಣ ಪರಿಶ್ರಮದಿಂದ ಯಾವ ರೀತಿ ಮಾದರಿ ಜನಪ್ರತಿನಿಧಿಯಾಗಿ ಬೆಳೆಯಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ. ಈ ವಿಧಾನ ಪರಿಷತ್ ಚುನಾವಣೆಯ ಎದುರಾಳಿ ಹಿನ್ನೆಲೆ, ಉದ್ದೇಶವನ್ನು ಜಿಲ್ಲೆಯ ಪ್ರಬುದ್ಧ ಮತದಾರರು ಅರಿತಿದ್ದಾರೆ. ಇಂದು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಆಡಳಿತ ವ್ಯವಸ್ಥೆಯಡಿ ಸಹಕಾರಿ ಕ್ಷೇತ್ರ ಸಹಿತ ಎಲ್ಲಾ ಕ್ಷೇತ್ರಗಳ ಉನ್ನತಿಗಾಗಿ ಅಮೂಲಾಗ್ರ ಬದಲಾವಣೆ ಹಾಗೂ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭಗೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಯ ಜನಪ್ರತಿನಿಧಿಗಳು ಇಂತಹ ಯಾವುದೇ ಪೊಳ್ಳು ಮಾತು ಅಥವಾ ಆಮಿಷಗಳಿಗೆ ಸೊಪ್ಪು ಹಾಕದೇ, ಬಿಜೆಪಿ ಅಭ್ಯರ್ಥಿಗೆ 1ನೇ ಪ್ರಾಶಸ್ತ್ಯದ ಮತವನ್ನು ಮಾತ್ರ ಚಲಾಯಿಸುವ ಮೂಲಕ ಕರಾವಳಿಯ ಬಿಜೆಪಿ ಭದ್ರಕೋಟೆಯಲ್ಲಿ ಮಗದೊಮ್ಮೆ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಉಡುಪಿ ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್, ನಗರ ಕಾರ್ಯದರ್ಶಿ ದಯಾಶಿನಿ, ಉಡುಪಿ ನಗರಸಭಾ ಸದಸ್ಯರು, ಉಡುಪಿ ನಗರ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಮಾಜಿ ಜಿ.ಪಂ. ಮತ್ತು ತಾ.ಪಂ. ಸದಸ್ಯರು, ಮಹಾ ಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಂಚಾಲಕರು, ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: