ಉಡುಪಿ ಜಿಲ್ಲಾ ಬಿಜೆಪಿ ಸಂತಾಪ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ, ಅಭಿಮಾನಿಗಳ ಪ್ರೀತಿಯ ‘ಅಪ್ಪು’ ಎಂದೇ ಖ್ಯಾತರಾಗಿದ್ದ ‘ಪವರ್ ಸ್ಟಾರ್’ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ನಿಧನ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಭಾವಪೂರ್ಣ ಶೃದ್ಧಾಂಜಲಿಯನ್ನು ಸಮರ್ಪಿಸುತ್ತದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ರವರು ತನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಕೇವಲ ಚಿತ್ರರಂಗಕ್ಕೆ ಮಾತ್ರ ಮೀಸಲಿಡದೆ ಕನ್ನಡ ನಾಡಿನಾದ್ಯಂತ ಅನೇಕ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಹಾಗೂ ಉಚಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಮಾನವತಾವಾದವನ್ನು ಮೇಳೈಸಿಕೊಂಡು ವಿಶ್ವ ಮಾನವರೆನಿಸಿಕೊಂಡಿದ್ದಾರೆ.
ಕನ್ನಡ ನಾಡಿನ ಕಣ್ಮಣಿಯಾಗಿದ್ದ ನಟ ಸಾರ್ವಭೌಮ ಡಾ! ರಾಜ್ ಕುಮಾರ್ ರವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದು ನೇತ್ರ ದಾನದಂತಹ ಉದಾತ್ತ ಜೀವನ ಮೌಲ್ಯಗಳನ್ನು ನಾಡಿಗೆ ನೀಡಿರುವ ಪುನೀತ್ ರಾಜ್ ಕುಮಾರ್ ರವರು ಕನ್ನಡ ನಾಡಿನ ಅನರ್ಘ್ಯ ರತ್ನವೆನಿಸಿಕೊಂಡಿದ್ದಾರೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.