
ಬೆಂಗಳೂರು: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಬಂದೆರಗಿದೆ.
ದೈಹಿಕ ಕಸರತ್ತು ನಡೆಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಪ್ಪುರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪುನೀತ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ನೀಡಿದ ಹೇಳಿಕೆಯೇ ಅಭಿಮಾನಿಗಳಲ್ಲಿ ಕಳವಳ ಮೂಡಿಸಿತ್ತು. ಇದೀಗ ಕನ್ನಡ ಚಿತ್ರರಂಗದ ಅಪ್ರತಿಮ ನಟ ಅಗಲಿದ್ದಾರೆ ಎಂಬ ವಾರ್ತೆ ನುಂಗಲಾರದ ತುತ್ತಾಗಿದೆ. ಖ್ಯಾತ ನಟನ ನಿಧನಕ್ಕೆ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದೆ.
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ಇಂದು ಪುನೀತ್ ರಾಜ್ಕುಮಾರ್ ಗಾಜನೂರಿಗೆ ಭೇಟಿ ನೀಡುವವರಿದ್ದರಂತೆ. ಎರಡು ತಿಂಗಳ ಹಿಂದೆ ಗಾಜನೂರಿಗೆ ಭೇಟಿ ನೀಡಿದ್ದ ಅಪ್ಪು ಸೋದರತ್ತೆ ನಾಗಮ್ಮ ಆರೋಗ್ಯ ವಿಚಾರಿಸಿ ಅಲ್ಲಿಂದ ತೆರಳಿದ್ದರು. ಸೋದರತ್ತೆ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಂದೂ ಸಹ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಗಾಜನೂರಿಗೆ ತೆರಳಲು ಅಪ್ಪು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.