
ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಯವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಾರ್ದಿಕ ಅಭಿನಂದನೆಗಳು. ನೂತನ ಮುಖ್ಯಮಂತ್ರಿಗಳು ಕೈಗೊಂಡಿರುವ ಚೊಚ್ಚಲ ಜನಪರ ನಿರ್ಣಯ ಜನ ಸಾಮಾನ್ಯರ ಜೊತೆಗೆ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೊತ್ತಮೊದಲ ನಿರ್ಣಯದಂತೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರೂ.1000 ಕೋಟಿ ಹೆಚ್ಚುವರಿ ವೆಚ್ಚದ ನೂತನ ಶಿಷ್ಯ ವೇತನ ಯೋಜನೆ ಜಾರಿಯಾಗಲಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ರೂ.1000ದಿಂದ ರೂ.1200ಕ್ಕೆ ಹೆಚ್ಚಳವಾಗಿದ್ದು, 35.98 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ. ಮಾಸಿಕ ವಿಧವಾ ವೇತನ ರೂ.600ರಿಂದ ರೂ.800ಕ್ಕೆ ಹೆಚ್ಚಳವಾಗಲಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ದಿವ್ಯಾಂಗರ ಮಾಸಿಕ ವೇತನ ರೂ.600 ಗಳಿಂದ ರೂ.800ಕ್ಕೆ ಹೆಚ್ಚಳವಾಗಳಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಬಡವರ, ದೀನದಲಿತರ, ರೈತರ ಮಕ್ಕಳ ಶ್ರೇಯೋಭಿವೃದ್ಧಿಯ ಚಿಂತನೆಯಿಂದ ಜಾರಿಗೆ ತರಲಿರುವ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಾಂದಿ ಹಾಡಿರುವುದು ಶ್ಲಾಘನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.