
ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ನಡು ಅಲೆವೂರು ಶ್ರೀ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ ಎಂದೇ ಪ್ರಚಲಿತವಾಗಿದ್ದ ರಸ್ತೆಗೆ ಗ್ರಾಮ ಪಂಚಾಯತ್ ನಲ್ಲಿ ಯಾವುದೇ ನಿರ್ಣಯ ಮಾಡದೆ ಶ್ರೀ ಬದರಿ ನಗರ ಎನ್ನುವ ನಾಮಫಲಕ ಉದ್ಘಾಟನೆ ಮಾಡಿ ಅಧಿಕಾರ ದುರ್ಬಳಕೆ ಮಾಡಿರುವರೆಂದು ಸ್ಥಳೀಯರು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್ ರವರ ಮೇಲೆ ಆಪಾದನೆ ಮಾಡಿದ್ದಾರೆ.
ಯಾವುದೇ ರಸ್ತೆಗಳಿಗೆ ನಾಮಕರಣ ಮಾಡುವಾಗ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಬೇಕು ಎನ್ನುವ ಸಾಮಾನ್ಯ ಜ್ನಾನ ಅಧ್ಯಕ್ಷರಿಗಿಲ್ಲವೆ? ಎಂದು ಉದ್ಘಾಟನಾ ಸಂದರ್ಭದಲ್ಲಿ ಸೇರಿದ್ದ ಸ್ಥಳೀಯರು ಒಂದಾಗಿ ಪ್ರಶ್ನೆ ಮಾಡಿದಾಗ, ನೀವು ಬೇಕಾದರೆ ತೆಗೆಯಿರಿ, ನಾವು ಹಾಕುತ್ತೇವೆ ಎನ್ನುವ ಉಡಾಫೆ ಉತ್ತರ ನೀಡಿರುವುದು ಎಷ್ಟು ಸಮಂಜಸ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸ್ಥಳೀಯರು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗೆ ದೂರು ನೀಡಲು ಸಜ್ಜಾಗಿದ್ದಾರೆ.
ಬೇರೆ ಅನಗತ್ಯ ವಿಷಯಗಳಿಗೆ ಕಾನೂನು ಮೊರೆ ಹೋಗುವ ಅಲೆವೂರು ಗ್ರಾ.ಪಂ. ಅಧ್ಯಕ್ಷರು ಈ ವಿಷಯದ ಬಗ್ಗೆ ಯಾಕೆ ಕಾನೂನು ಪಾಲನೆ ಮಾಡಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಶ್ರೀ ಬಬ್ಬುಸ್ವಾಮಿ ರಸ್ತೆ ಎಂದೇ ಖ್ಯಾತಿ ಹೊಂದಿದ್ದ ಈ ರಸ್ತೆಗೆ ಗ್ರಾ.ಪಂ. ಅಧ್ಯಕ್ಷರು ಪ್ರಜಾಪ್ರಭುತ್ವ ವಿರೋಧಿಯಾಗಿ ಕಾನೂನು ಮುರಿದು ಗ್ರಾಮಸ್ಥರ ವಿರೋಧವನ್ನೂ ಲೆಕ್ಕಿಸದೆ ತಮ್ಮ ಪಕ್ಷದಿಂದ ಚುನಾವಣೆಗೆ ನಿಂತು ಪರಾಭವಗೊಂಡ ಕಾರ್ಯಕರ್ತ ಹಾಗೂ ಅವರ ಮನೆಯವರನ್ನು ಮೆಚ್ಚಿಸಲು, ಅನಧಿಕೃತ ನಾಮಫಲಕ ಉದ್ಘಾಟನೆ ಮಾಡಿರುವುದು ಉಧ್ಧಟತನದ ಪರಮಾವಧಿಯಲ್ಲವೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.