
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಾರ್ಥಕ ಆಡಳಿತದ ಏಳನೇ ವರ್ಷ ಪೂರೈಸಿರುವ ಸುಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಸೂಚನೆಯಂತೆ ಉಡುಪಿ ಜಿಲ್ಲೆಯಾದ್ಯಂತ ಮೇ 30ರಂದು ಸೇವಾ ಹೀ ಸಂಘಟನ್ ತತ್ವದಡಿ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಮೋರ್ಚಾಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಒಟ್ಟು 1,297 ಸೇವಾ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳ ಮೂಲಕ 170 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. 34 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 280 ಮಂದಿ ಕೋವಿಡ್ ಸೋಂಕಿತ ವ್ಯಕ್ತಿಗಳ ಮನೆಗಳನ್ನು ಸಂದರ್ಶಿಸಿ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯ ಸಹಾಯದ ಬಗ್ಗೆ ಅವಲೋಕಿಸಲಾಗಿದೆ.
ಸುಮಾರು 25,000 ಮಾಸ್ಕ್, 2,500 ಹ್ಯಾಂಡ್ ಗ್ಲೋವ್ಸ್, 1,057 ಆಹಾರ ಸಾಮಗ್ರಿಗಳ ಕಿಟ್, 940 ಆಹಾರ ಪೊಟ್ಟಣ, 350 ಲೀಟರ್ ಸ್ಯಾನಿಟೈಸರ್, 357 ಮೆಡಿಕಲ್ ಕಿಟ್, 370 ಪಿಪಿಇ ಕಿಟ್ ಇತ್ಯಾದಿಗಳನ್ನು ಫ್ರಂಟ್ ಲೈನ್ ವರ್ಕರ್ಸ್ ಮತ್ತು ಅಶಕ್ತರಿಗೆ ವಿತರಿಸುವ ಜೊತೆಗೆ ಕೋವಿಡ್ ಬಗ್ಗೆ ಜಾಗ್ರತಿ ಮೂಡಿಸುವ 4 ವಾಹನಗಳಿಗೆ ಚಾಲನೆ ನೀಡಲಾಗಿದೆ.
ಬಿಜೆಪಿ ಜಿಲ್ಲಾ ಕೋವಿಡ್ ಸಹಾಯವಾಣಿ ಮತ್ತು ವಿವಿಧ ಮಂಡಲಗಳ ಸಹಾಯವಾಣಿ ಮೂಲಕ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ತುರ್ತು ಸಹಾಯ ನೀಡಲಾಗುತ್ತಿದೆ. ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳ ಮಾಹಿತಿಯ ಜೊತೆಗೆ ಜನತೆ ಲಸಿಕೆಯನ್ನು ಪಡೆಯುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಎಲ್ಲಾ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಮರ್ಪಣಾಭಾವದ ಸೇವೆ ಪ್ರಶಂಸನೀಯ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.