
ಉಡುಪಿ ಕಲ್ಸಂಕದ ಭಾರತ್ ಪ್ರೆಸ್ ಮಾಲಿಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ತೋನ್ಸೆ ದೇವದಾಸ್ ಪೈ ಇಂದು (ಎ.29) ಮಧ್ಯಾಹ್ನ 3.15ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು.
ತೋನ್ಸೆ ದೇವದಾಸ್ ಪೈ ಉಡುಪಿ ನಗರಸಭೆಗೆ ಜನಸಂಘದಿಂದ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ನಗರಸಭಾ ಸದಸ್ಯರು. ಅಪ್ರತಿಮ ದೈವ ಭಕ್ತರಾಗಿದ್ದ ಅವರು ಉಡುಪಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಾರಂಭಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾತ್ರವಲ್ಲದೆ ಮೊದಲ ವರ್ಷದ ಗಣೇಶೋತ್ಸವವನ್ನು ಭಾರತ್ ಪ್ರೆಸ್ಸಿನ ಮಾಳಿಗೆಯಲ್ಲೇ ಆಚರಿಸಿದ್ದು ಇತಿಹಾಸ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಹಳೆ ಪತ್ರಿಕೆಯು ಅವರ ಮುದ್ರಣಾಲಯದಲ್ಲೂ ಮುದ್ರಿತವಾಗುತ್ತಿತ್ತು. ಪೈಯವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆವಾಸ ಅನುಭವಿಸಿದ್ದರು.
ತಮ್ಮದೇ ತೋನ್ಸೆ ಕುಟುಂಬದ ಟ್ರಸ್ಟ್ ಸ್ಥಾಪಿಸಿ, ಕಳೆದ 20 ವರ್ಷಗಳಿಂದ ಪ್ರತೀ ತಿಂಗಳು ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾ ಬಂದಿದ್ದು ಆ ಮೂಲಕ ತೋನ್ಸೆ ಪೈ ಕುಟುಂಬವನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಭಜನಾ ಪ್ರಿಯರಾಗಿದ್ದ ಅವರು ತನ್ನ ಕುಟುಂಬದ ಸದಸ್ಯರನ್ನೊಳಗೊಂಡ ಭಜನಾ ತಂಡದೊಂದಿಗೆ ಭಜನಾ ಸೇವೆಯಲ್ಲಿ ಭಾಗವಹಿಸುತ್ತಿದ್ದರು. ಕಲ್ಯಾಣಪುರ, ಭದ್ರಗಿರಿ, ಬಸ್ರೂರಿನಲ್ಲಿ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ತೋನ್ಸೆ ದೇವದಾಸ ಪೈ ಯವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ ಸೂಚಿಸಿದ್ದಾರೆ.