
ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವ ಬಗ್ಗೆ ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ರವರ ಕನಸಿನ ಯೋಜನೆಯಂತೆ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡ್ 1 ಮತ್ತು 2ರ ಪರಿಮಿತಿಯಲ್ಲಿ ಸುಮಾರು 25 ಎಕ್ರೆಗೂ ಮಿಕ್ಕಿ ಹಡಿಲು ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ಬಗ್ಗೆ ಅಂಬಲಪಾಡಿ ವಾರ್ಡ್ ಜನಪ್ರತಿನಿಧಿಗಳ, ಪ್ರಮುಖರ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಅಂಬಲಪಾಡಿ ಯೋಗೀಶ್ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು.
ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಮುಖ್ಯ ತೋಡುಗಳ ಹೂಳೆತ್ತುವ ಜೊತೆಗೆ ಹಡಿಲು ಭೂಮಿ ಕೃಷಿಯ ಬಗ್ಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಯಿತು. ಈಗಾಗಲೇ ಹಡಿಲು ಭೂಮಿಯ ಮಾಲಕರಲ್ಲಿ ಈ ಬಗ್ಗೆ ಅನುಮತಿಯನ್ನು ಪಡೆದುಕೊಳ್ಳಕಾಗಿದ್ದು ಶಾಸಕರಾದ ಕೆ.ರಘುಪತಿ ಭಟ್ ರವರ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಹಡಿಲು ಭೂಮಿ ಕೃಷಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮಸ್ಥರ ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಕೋರಲು ನಿರ್ಣಯಿಸಲಾಯಿತು. ಅಲ್ಲದೆ ಯೋಜನೆಯ ಪ್ರಗತಿಗೆ ಅನುಗುಣವಾಗಿ ಇನ್ನಷ್ಟು ಹಡಿಲು ಭೂಮಿಯ ಮಾಲೀಕರನ್ನು ಸಂಪರ್ಕಿಸಿ ಹಡಿಲು ಭೂಮಿ ಕೃಷಿಗೆ ಅವಕಾಶ ಮಾಡಿಕೊಡಲು ವಿನಂತಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಅಂಬಲಪಾಡಿ ವಾರ್ಡ್ ವ್ಯಾಪ್ತಿಯ ಹಡಿಲು ಭೂಮಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಗೆ ಇನ್ನಷ್ಟು ಪ್ರಮುಖರನ್ನು ಸೇರ್ಪಡೆಗೊಳಿಸಿ ಕೂಡಲೇ ಕಾರ್ಯ ಪ್ರವೃತ್ತರಾಗುವಂತೆ ನಿಶ್ಚಯಿಸಲಾಯಿತು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸೋಮನಾಥ್ ಬಿ.ಕೆ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ, ನಿವೃತ್ತ ಪೊಲೀಸ್ ಅಧಿಕಾರಿ ಕೇಳು ನಾರಾಯಣ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸುಜಾತ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಕುಮಾರ್, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಮಹೇಂದ್ರ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ರಾವ್, ವಾರ್ಡ್ ಪ್ರಮುಖರಾದ ಹರೀಶ್ ಆಚಾರ್ಯ, ಶರತ್ ಶೆಟ್ಟಿ, ಅನಿಲ್ ರಾಜ್ ಅಂಚನ್, ಭುವನೇಂದ್ರ ಸುವರ್ಣ, ವಿನೋದ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.