
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಜನಪರ ಆಡಳಿತ ಹಾಗೂ ವಿನೂತನ ಯೋಜನೆಗಳಿಂದ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದಿನದಿಂದ ದಿನಕ್ಕೆ ಕಾಂಗ್ರೆಸ್ ಅಧಪತನವನ್ನು ಕಂಡು ಹತಾಶೆಯ ಮನೋಭಾವದಿಂದ ಕಂಡ ಕಂಡಲ್ಲಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರು ಎನಿಸಿಕೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಹೇಳಿದೆ.
ರೈತರ ಆದಾಯ ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತಸ್ನೇಹಿ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಶ್ರಮಿಸಿದರೆ, ಕಾಂಗ್ರೆಸ್ ತನ್ನ ದೇಶ ವಿರೋಧಿ ನಡೆಯಿಂದ ರೈತರ ದಾರಿ ತಪ್ಪಿಸುವ ದುಷ್ಕೃತ್ಯದಲ್ಲಿ ನಿರತವಾಗಿದೆ. ನೈಜ ರೈತರಿಗೆ ಕೃಷಿ ಕಾಯ್ದೆಯ ಪರಿಣಾಮವಾಗಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ ದೊರೆಯುವ ಜೊತೆಗೆ ನೇರ ಮಾರುಕಟ್ಟೆ, ಬೆಂಬಲ ಬೆಲೆ ಇತ್ಯಾದಿ ಸೌಲಭ್ಯಗಳಿಂದ ಅನುಕೂಲವಾಗಿದೆ. ದೇಶದ ರಾಜಧಾನಿಯಲ್ಲಿ ರೈತ ಪ್ರತಿಭಟನೆಯ ಹೆಸರಲ್ಲಿ ಮಧ್ಯವರ್ತಿಗಳು, ನಕಲಿ ರೈತರು ಕೂಡಾ ಸೇರಿಕೊಂಡು ಯಾವ ರೀತಿಯ ದುಸ್ಸಾಹಸ ಮೆರೆದಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ.
ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಿದ್ದು ಪ್ರಸ್ತುತ ನಡೆಸುತ್ತಿರುವ ಜನಧ್ವನಿ ಪಾದಯಾತ್ರೆ ಪಕ್ಷದ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟವಷ್ಟೇ. ರಾಜ್ಯದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ನೀಡಿದ್ದ ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೊರೋನಾ ಸಮರ್ಥ ನಿರ್ವಹಣೆಯ ಜೊತೆಗೆ ರೈತಪರ ಕೃಷಿ ಕಾಯ್ದೆ ಜಾರಿಗೊಂಡಿದೆ. ಭ್ರಷ್ಠಾಚಾರ ಹಗರಣಗಳ ಕೂಪದಲ್ಲಿ ಮಿಂದೆದ್ದಿರುವ ಕಾಂಗ್ರೆಸ್ ವಿನಾಕಾರಣ ಬಿಜೆಪಿ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವುದು ಆ ಪಕ್ಷದ ನಾಯಕರ ಹಳೇ ಚಾಳಿಯಾಗಿದೆ.
ಕೇಂದ್ರ ಸರಕಾರದ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಂಡಿದ್ದು ಪ್ರತೀ ಕೆ.ಜಿ. ಅಕ್ಕಿಗೆ ರೂ.29ರಂತೆ ಕೇಂದ್ರ ಸರಕಾರ ಭರಿಸುತ್ತಿದ್ದು ರಾಜ್ಯದ ಪಾಲು ರೂ.3 ಮಾತ್ರ. ಆದಾಗ್ಯೂ ಅನ್ನಭಾಗ್ಯ ಯೋಜನೆಯ ಪುಕ್ಕಟೆ ಪ್ರಚಾರ ಪಡೆದದ್ದು ಮಾತ್ರ ಮಾಜಿ ಸಿ.ಎಂ. ಸಿದ್ಧರಾಮಯ್ಯ. ದೇಶದ ಪ್ರಧಾನಿಗೆ ಗೌರವ ಕೊಡಲಾಗದ ವಿರೋಧಿಗಳು ಸರಕಾರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದೆ ತೇಜೋವಧೆಯ ವಿಫಲ ಯತ್ನದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ.
ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಗುಣವಾಗಿ ದೇಶದ ಕೋಟ್ಯಾಂತರ ಜನತೆಯ ಶೃದ್ಧಾ ಕೇಂದ್ರವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವ ವಿಚಾರದಲ್ಲೂ ಸಿದ್ಧರಾಮಯ್ಯ ಅಪಸ್ವರ ಎತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ. ಅಧಿಕಾರ ಮತ್ತು ಸ್ವಯಂ ಸ್ವಾರ್ಥ ಸಾಧನೆಗಾಗಿ ಧರ್ಮ ಜಾತಿಗಳ ನಡುವೆ ಕಂದಕ ಸೃಷ್ಠಿಸಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಸಿದ್ಧರಾಮಯ್ಯ ನವರಿಂದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ಹಾಗೂ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.