

ಉತ್ತರಕಾಂಡ್: ಉತ್ತರಕಾಂಡ್ʼನಲ್ಲಿ ಹಿಮಕುಸಿತದ ಹಿನ್ನೆಲೆ ದಿಢೀರ್ ಪ್ರವಾಹ ಉಂಟಾಗಿದೆ. ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ.
ಭೀಕರ ಹಿಮಪಾತದಿಂದಾಗಿ ಇಲ್ಲಿನ ರಿಷಿ ಗಂಗಾ ನದಿಯಲ್ಲಿ ಸೃಷ್ಟಿಯಾದ ದಿಢೀರ್ ಪ್ರವಾಹ, ಚಮೋಲಿ ನದಿಯಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ರಿಷಿ ಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಉಂಟಾಯ್ತು. ನದಿ ಪಾತ್ರಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂತು. ಹೀಗಾಗಿ, ರಿಷಿ ಗಂಗಾ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಜಲ ವಿದ್ಯುತ್ ಯೋಜನೆಯ ಕಾಮಗಾರಿ ಸ್ಥಳ ಪ್ರವಾಹದಿಂದ ಆವೃತವಾಯ್ತು.
ಜೋಶಿಮಠದಲ್ಲಿರುವ ಧೌಲಿ ಗಂಗಾ, ಅಲಕನಂದ ನದಿಯ ಹಿಮ ಪ್ರವಾಹದಲ್ಲಿ 150ಕ್ಕೂ ಜನರು ಕಾಣೆಯಾಗಿದ್ದಾರೆ. ಎನ್ಡಿಆರ್ಎಫ್ ಪಡೆಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಸುರಂಗದಲ್ಲಿ ಸಿಲುಕಿರುವ 20 ರಿಂದ 25 ಮಂದಿಯನ್ನ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಚೆಮೋಲಿಯ ತಪೋವನದಲ್ಲಿ ಅಂದ್ರೆ ಒಂದೇ ಕಡೆ 9 ರಿಂದ 10 ಮೃತದೇಶಗಳು ಪತ್ತೆಯಾಗಿವೆ.
ಇನ್ನು ಉತ್ತರಕಾಂಡ್ʼನ ನಾಲ್ಕು ಜಿಲ್ಲೆಗಳಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ. ಹರಿದ್ವಾರ, ಋಷಿಕೇಶ್, ರುದ್ರ ಪ್ರಯಾಗ್, ಚಮೋಲಿಗಳಲ್ಲಿ ಹೈ ಆಲರ್ಟ್ ಘೋಷಿಸಿಸಲಾಗಿದ್ದು, ಧೌಲಿ ಗಂಗಾ ನದಿಯ ತಟದಲ್ಲಿರುವ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ.
ಇನ್ನು ಈ ರಕ್ಷಣಾ ಕಾರ್ಯದಲ್ಲಿ ಡಿಆರ್ಎಫ್ ಪಡೆಗಳ ಜೊತೆಗೆ ಭಾರತೀಯ ಸೇನೆಯೂ ಸೇರಿಕೊಂಡಿದ್ದು ನಾಪತ್ತೆಯಾದವರ ತೀವ್ರ ಹುಡುಕಾಟ ನಡೆದಿದೆ.