

ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಇಂದು ದಿನಾಂಕ 18-01-2021ರಂದು ನಡೆದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ಶಾಸಕ ಕೆ. ರಘುಪತಿ ಭಟ್ ಅವರು ಮನವಿ ಮಾಡಿರುವಂತೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ ಹಾಗೂ ಅನ್ನಛತ್ರ ನಿರ್ಮಾಣಕ್ಕೆ ಸರ್ಕಾರದಿಂದ ರೂ. 4.00 ಕೋಟಿ ನೀಡುವುದಾಗಿ ಘೋಷಣೆ ಮಾಡಿದರು.
ಶ್ರೀ ವೆಂಕಟರಮಣ ದೇವಸ್ಥಾನ ಕರಂಬಳ್ಳಿ ಇಲ್ಲಿನ ಆಡಳಿತ ಮೊಕ್ತೇಸರರಾದ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಮಾತನಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಇದರ ವತಿಯಿಂದ ಲಕ್ಷಾಂತರ ಮಂದಿಗೆ ರಾತ್ರಿಯ ಊಟ ನೀಡಲಾಗಿತ್ತು. ಅಲ್ಲದೆ ದೇವಳದ ವಠಾರದಲ್ಲಿ ಈ ನಾಡಿನ ಧಾರ್ಮಿಕ ಪರಂಪರೆಯನ್ನು, ಸಾಂಸ್ಕೃತಿಕ ಹಿನ್ನಲೆಯನ್ನು ಉಳಿಸಿ ಬೆಳೆಸುವಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ಭಾಗದಲ್ಲಿ ನಿರಂತರ ಅನ್ನದಾನ ಸೇವೆ ನೀಡುವುದು ಹಾಗೂ ಇತರ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಾll ವಿ. ಎಸ್. ಆಚಾರ್ಯ ಅವರ ಸ್ಮರಣಾರ್ಥವಾಗಿ ರೂ. 4.00 ಕೋಟಿ ವೆಚ್ಚದಲ್ಲಿ ಸಭಾಭವನ ಹಾಗೂ ಅನ್ನಛತ್ರ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರಕಾರದಿಂದ ನೆರವು ನೀಡುವಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಕಾಗೇರಿ ವಿಶ್ವೇಶ್ವರ ಹೆಗಡೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮೀನುಗಾರಿಕೆ ಇಲಾಖೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ದೇವಳದ ತಂತ್ರಿಗಳಾದ ಪಾಡಿಗಾರು ಶ್ರೀ ವಾಸುದೇವ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮತ್ತು ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕರಂಬಳ್ಳಿ ಗೋಪಾಲ ಶೆಟ್ಟಿ, ಶೇಖರ ಜತ್ತನ್, ಕೆ ಲಕ್ಷ್ಮಣ ಸೇರಿಗಾರ್, ಸುಂದರ ಅಮೀನ್, ಲಕ್ಷ್ಮೀನಾರಾಯಣ ಬಿ ಆಚಾರ್ಯ, ಶೈಲಶ್ರೀ ದಿವಾಕರ ಶೆಟ್ಟಿ, ಕೆ. ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.