
ದೇಶದೆಲ್ಲೆಡೆ ನಡೆಯುತ್ತಿರುವ ಹಲವಾರು ಚುನಾವಣೆಗಳ ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಗ್ರಾಮ ಪಂಚಾಯತ್ ಚುನಾವಣಾ ಸೋಲಿನ ಭಯದಿಂದ ಬಿಜೆಪಿ ವಿರುದ್ಧ ಅಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ. ಚುನಾವಣಾ ಅಕ್ರಮಕ್ಕೆ ಹೆಸರುವಾಸಿಯಾಗಿರುವ ಕಾಂಗ್ರೆಸಿಗರಿಗೆ ಅಪಪ್ರಚಾರವೇ ಜೀವಾಳ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೇ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ಮೇಲೆ ಗೂಬೆ ಕೂರಿಸುವ ನಿಟ್ಟಿನಲ್ಲಿ ನೀಡಿರುವ ಹತಾಶ ಮನೋಭಾವದ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.
ಬಿಜೆಪಿ ಎಂದಿಗೂ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿಕೊಂಡು ಬಂದಿರುವ ರಾಜಕೀಯ ಪಕ್ಷ. ಚುನಾವಣಾ ಅಕ್ರಮಗಳೇನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೇ ಸೀಮಿತ. ಪ್ರಸಕ್ತ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾ.ಪಂ. ಚುನಾವಣಾ ಅಭ್ಯರ್ಥಿ ಮಂಜುನಾಥ ಪೂಜಾರಿ ಎಂಬವರ ಮನೆಗೆ ಆಕ್ರಮವಾಗಿ ಪ್ರವೇಶಿಸಿ ಅಭ್ಯರ್ಥಿ ಹಾಗೂ ಅವರ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ನ ಚುನಾವಣಾ ಅಕ್ರಮಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಮತದಾನದ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಪ್ರಯತ್ನದ ಇಂತಹ ಹೇಯ ಕೃತ್ಯಗಳಿಂದ ಕಾಂಗ್ರೆಸ್ ಗೆ ನೇರವಾಗಿ ಚುನಾವಣೆಯನ್ನು ಎದುರಿಸುವ ನೈತಿಕತೆ ಇಲ್ಲ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ನ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಮತ್ತು ಗಿರೀಶ್ ಎಮ್. ಅಂಚನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.